ದಾವಣಗೆರೆ (Davanagere): ಗ್ರಂಥಾಲಯಗಳು ವೈವಿಧ್ಯಮಯ ಬಳಕೆದಾರರ ಅಗತ್ಯಗಳನ್ನು ಪೂರೈಸಲು ನಿರಂತರ ಸುಧಾರಣೆಗಾಗಿ ಓದುಗರ ಪ್ರತಿಕ್ರಿಯೆಯನ್ನು ಬಳಸಿಕೊಳ್ಳುವ ಜೊತೆಗೆ ಅದರ ಜೊತೆಗೆ ಸೈಬರ್ ಭದ್ರತೆ ಮತ್ತು ದತ್ತಾಂಶ ಗೌಪ್ಯತೆಯ ಕಾಳಜಿ ವಹಿಸುವುದೂ ಮುಖ್ಯವಾಗಿದೆ ಎಂದು ದೆಹಲಿಯ ಡೆಲ್ನೆಟ್ (ಡೆವಲಪಿಂಗ್ ಲೈಬ್ರರಿ ನೆಟ್ವರ್ಕ್) ಸಂಸ್ಥೆ ನಿರ್ದೇಶಕಿ ಡಾ. ಸಂಗೀತಾ ಕೌಲ್ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದೆಹಲಿಯ ಡಲ್ನೆಟ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಂಥಾಲಯಗಳು, ಗ್ರಂಥಪಾಲಕರು ಮತ್ತು ಓದುಗರನ್ನು ಪರಿವರ್ತಿಸುವುದು ಮತ್ತು ಸಬಲೀಕರಣಗೊಳಿಸುವುದು: ಇತ್ತೀಚಿನ ಪ್ರವೃತ್ತಿಗಳು ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಡಿಜಿಟಲ್ ಕೌಶಲ್ಯಗಳೊಂದಿಗೆ ಓದುಗರನ್ನು ಸಬಲಗೊಳಿಸಲು ಆನ್ಲೈನ್ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯ ಮೂಲಕ ಡಿಜಿಟಲ್ ವಿಭಜನೆ (ಡಿಜಿಟಲ್ ಡಿವೈಡ್) ಅನ್ನು ಪರಿಹರಿಸಬೇಕು. ಗ್ರಂಥಾಲಯಗಳ ಸೇವೆ ಮತ್ತು ಸಂಪನ್ಮೂಲ ಸಂಗ್ರಹಣೆ ಬಳಕೆಗೆ ಡೇಟಾ ವಿಶ್ಲೇಷಣೆ ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಜಗತ್ತಿನ ಶೇ. 99ರಷ್ಟು ಮಾಹಿತಿ ಪುಸ್ತಕಗಳಿಂದ ದೊರೆಯುತ್ತಿವೆ. ಉಳಿದ ಶೇ. 1ರಷ್ಟು ಮಾಹಿತಿ ಮಾತ್ರ ಆನ್ಲೈನ್ನಲ್ಲಿ ಲಭ್ಯವಿದೆ. ಆದರೆ ಪ್ರಸ್ತುತ ಗ್ರಂಥಾಲಯಗಳು ಕೇವಲ ಪುಸ್ತಕಗಳ ಭಂಡಾರಗಳಾಗಿ ಉಳಿದಿಲ್ಲ; ಅವು ಜ್ಞಾನ ಮತ್ತು ನಾವೀನ್ಯತೆಗಳ ಕ್ರಿಯಾತ್ಮಕ ಕೇಂದ್ರಗಳಾಗಿ ಬದಲಾಗಿವೆ. ತಂತ್ರಜ್ಞಾನದ ತ್ವರಿತ ಪ್ರಗತಿ ಮತ್ತು ಬದಲಾಗುತ್ತಿರುವ ಓದುಗ ಬಳಕೆದಾರರ ನಿರೀಕ್ಷೆಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರವನ್ನು ಮಾರ್ಪಡಿಸಿವೆ. ಗ್ರಂಥಾಲಯಗಳನ್ನು ಡಿಜಿಟಲ್ ಸಂಗ್ರಹಣೆ ಮಾಡಿ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಯಾವುದೇ ಸಮಯದಲ್ಲಿ, ಎಲ್ಲಿಯೇ ಇದ್ದರೂ ಜಾಗತಿಕ ಮಟ್ಟದ ಸಂಶೋಧನೆಗಳ ಮಾಹಿತಿಯನ್ನು ಮುಕ್ತವಾಗಿ ಪಡೆಯಲು ಸಹಾಯಕವಾಗಿದೆ. ಗ್ರಂಥಾಲಯಗಳು ಕಲಿಕೆ, ನಾವೀನ್ಯತೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಸಹಯೋಗದ ಸ್ಥಳಗಳಾಗಿ ವಿಕಸನಗೊಳ್ಳುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಜ್ಞಾನ ಕೇಂದ್ರಗಳಾದ ಗ್ರಂಥಾಲಯಗಳು 21ನೇ ಶತಮಾನದ ಬೇಡಿಕೆಗಳನ್ನು ಪೂರೈಸುವ ಜೊತೆಗೆ ಓದಿನತ್ತ ವೃತ್ತಿಪರರು ಮತ್ತು ಬಳಕೆದಾರರನ್ನು ಪರಿವರ್ತಿಸಿ, ಗ್ರಂಥಾಲಯ ಕ್ಷೇತ್ರವನ್ನು ಸಬಲಗೊಳಿಸುವುದು ಅತ್ಯಗತ್ಯ ಎಂದು ಹೇಳಿದರು.
ಗ್ರಂಥಪಾಲಕರು ವಿನೂತನ ತಂತ್ರಜ್ಞಾನ, ವೃತ್ತಿ ಕೌಶಲಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಕೃತಕ ಬುದ್ದಿಮತ್ತೆ, ಡೇಟಾ ಅನಲೈಟಿಕ್ಸ್ ಸೇರಿದಂತೆ ಮತ್ತಿತರ ತಂತ್ರಜ್ಞಾನಗಳು ಕ್ಷೇತ್ರವನ್ನು ತಾಂತ್ರಿಕವಾಗಿ ಸಬಲಗೊಳಿಸಿವೆ. ಸರ್ಕಾರ ತಂತ್ರಜ್ಞಾನ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ವೆಚ್ಚ ಮಾಡುತ್ತಿದೆ. ಆದರೆ ಓದುಗರನ್ನು ಗ್ರಂಥಾಲಯದಲ್ಲಿ ಹಿಡಿದಿಟ್ಟು, ಓದಿನತ್ತ ಆಸಕ್ತಿ ಮೂಡಿಸುವ ಪ್ರಯತ್ನದಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಅವಲೋಕಿಸಿ, ಗ್ರಂಥಾಲಯಗಳಿಗೆ ಪುನರುಜ್ಜೀವನ ನೀಡಬೇಕು ಎಂದು ಹೇಳಿದರು.
ಪುಸ್ತಕಗಳು, ತಂತ್ರಜ್ಞಾನ ಎಷ್ಟೇ ಮಾಹಿತಿಯನ್ನು ನೀಡಿದರು ಓದುಗರ ಮನಸ್ಥಿತಿ ಬದಲಾಗಬೇಕು. ಗ್ರಂಥಾಲಯದಲ್ಲಿ ಕುಳಿತು ಅಧ್ಯಯನ ಮಾಡುವ, ಪುಸ್ತಕಗಳ ಪಟ್ಟಿ ವೀಕ್ಷಿಸುವ ಮನೋಭಾವ ರೂಢಿಸಿಕೊಂಡಾಗ ಜ್ಞಾನಾಭಿರುಚಿ ಬೆಳೆಯುತ್ತದೆ. ಆದರೆ ಇತ್ತೀಚಿಗೆ ಓದುವ ಅಭ್ಯಾಸ ಕಡಿಮೆಯಾಗಿ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿರುವುದು ವಿಷಾದನೀಯ ಎಂದರು.
ಕಾರ್ಯಾಗಾರದಲ್ಲಿ ಡಾ.ಸಂಗೀತಾ ಕೌಲ್ ಕುಶಾಲ್ ಗಿರಿ ಗೋಸ್ವಾಮಿ, ಡಾ.ಆರ್.ಶಶಿಧರ್ ಮತ್ತು ಡಾ.ನೀಲಮ್ಮ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಸಹಾಯಕ ಗ್ರಂಥಾಲಯಾಧಿಕಾರಿ ಡಾ.ಜಿ.ನೀಲಮ್ಮ ಸ್ವಾಗತಿಸಿದರು. ಡಿಲ್ಬ್ರಿಟ್ ಸಂಸ್ಥೆ ಸಂಸ್ಥಾಪಕ ಮತ್ತು ಸಿಇಒ ಜಯಣ್ಣ ಬೆಳವಾಡಿ ಮಾತನಾಡಿದರು. ಸಹಾಯಕ ಗ್ರಂಥಾಲಯಾಧಿಕಾರಿ ಸಿ.ನಾಗರಾಜ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಕಲಾ ಯಾಳಗಿ ಕಾರ್ಯಕ್ರಮ ನಿರೂಪಿಸಿದರು.
Read also : ಮೆಕ್ಕೆಜೋಳ ಸಂಶೋಧನ ಘಟಕ ಸ್ಥಾಪನೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ