ದಾವಣಗೆರೆ (Davanagere ): ಬೋಧನೆಯ ಜೊತೆಗೆ ಕಲಿಕೆಯನ್ನು ಅಧ್ಯಾಪಕರು ರೂಢಿಸಿಕೊಂಡರೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉನ್ನತ ಬುನಾದಿಯಾಗಿ ವೃತ್ತಿಗೌರವ ಪಡೆಯಲು ಸಾಧ್ಯ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪಿ.ಎಸ್.ಹಳ್ಯಾಳ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರ ಸಾಮರ್ಥ್ಯ ವೃದ್ಧಿ ಕುರಿತು ಏರ್ಪಡಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಿಕ್ಷಕ ಕೇವಲ ಬೋಧಕನಲ್ಲ. ಅವನೊಬ್ಬ ಮನೋವಿಜ್ಞಾನಿ, ತಂತ್ರಜ್ಞ ಮತ್ತು ಪರಿಹಾರ ಸೂಚಕನಾಗಿಯೂ ಕೆಲಸ ಮಾಡುತ್ತಾನೆ ಎಂದು ಹೇಳಿದರು.
ವೃತ್ತಿಗೆ ಸಲ್ಲಿಸುವ ಪ್ರಾಮಾಣಿಕ ಸೇವೆ, ನಿಷ್ಠೆ ಹಾಗೂ ವೃತ್ತಿಪರತೆಗಳು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಗುರುತಿಸುವಂತೆ ಮಾಡುತ್ತವೆ. ಸಮಾಜದಲ್ಲಿ ಉನ್ನತ ಮೌಲ್ಯಗಳೊಂದಿಗೆ ಗೌರವಯುತ ಸ್ಥಾನವನ್ನು ಪಡೆದಿರುವ ಶಿಕ್ಷಕರು ಬೋಧನೆಯ ಮೂಲಕವೇ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ಶಿಕ್ಷಕರೂ ತಮ್ಮ ವೃತ್ತಿಯಲ್ಲಿ ನಾಲ್ಕು ಗುಣಗಳನ್ನು ರೂಢಿಸಿಕೊಳ್ಳಬೇಕು. ಬೋಧನೆ ಮತ್ತು ಕಲಿಕೆ, ಹೊಸತನವನ್ನು ರೂಢಿಸಿಕೊಳ್ಳುವುದು, ವೃತ್ತಿ ಕೌಶಲ ಬೆಳೆಸಿಕೊಳ್ಳುವುದು ಮತ್ತು ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಅರಿತು ಪಾಠ ಮಾಡುವುದು ಅತ್ಯವಶ್ಯ. ಇವುಗಳನ್ನು ಕೆಲಸದಲ್ಲಿ ಅಳವಡಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ನುಡಿದರು.
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಶಿಕ್ಷಕರಿಗೆ ಕಲಿಕೆಗೆ ಅಂತ್ಯವಿಲ್ಲ. ಜೀವನದ ಕೊನೆಯ ದಿನದವರೆಗೂ ಕಲಿಯುವ ಆಸಕ್ತಿ ಬೆಳೆಸಿಕೊಂಡರೆ ಉತ್ತಮ ಶಿಕ್ಷಕನಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ ಉಪಸ್ಥಿತರಿದ್ದರು. ಸಂಶೋಧನಾ ನಿರ್ದೇಶಕ ಪ್ರೊ.ವೆಂಕಟರಾವ್ ಪಲಾಟೆ ಸ್ವಾಗತಿಸಿದರು. ಪ್ರೊ. ಪ್ರಮೋದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಿ.ಸಿ.ಪ್ರಸನ್ನಕುಮಾರ ವಂದಿಸಿದರು.
Read also : Davanagere | ಮಹಾನಗರ ಪಾಲಿಕೆ : ಲಿಯಾಖತ್ ಅಲಿ ಎಂ.ಕೆ ರವರಿಗೆ ಗೌರವ ಸನ್ಮಾನ