ದಾವಣಗೆರೆ (Davangere) : ವಿದ್ಯಾರ್ಥಿಗಳಲ್ಲಿ ಚೈತನ್ಯ, ಮನವುಲ್ಲಾಸ ಹಾಗೂ ಆತ್ಮವಿಶ್ವಾಸ ಕೊರತೆಯಿಂದ ಕೆಟ್ಟ ವ್ಯಸನಗಳಿಗೆ ದಾಸರಾ ಗುತ್ತಿರುವುದು ಸಾಮಾಜಿಕ ದುರಂತವೇ ಸರಿ ಎಂದು ದಾವಣಗೆರೆ ವಿಶ್ವದ್ಯಾನಿಲಯದ ಕುಲಪತಿ ಡಾ. ಬಿ.ಡಿ. ಕುಂಬಾರ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದಿಂದ ಮಂಗಳವಾರ ಪರಮಪೂಜ್ಯ ಡಾ. ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳು ಒಂದಲ್ಲ ಒಂದು ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ.
ಸಂತೋಷ ಹಾಗೂ ದುಃಖದ ಹೆಸರಿನಲ್ಲಿ ಅಮಲಿನ ವ್ಯಸನಕ್ಕೆ ದಾಸರಾಗಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಶ್ರೀ ಮಹಾಂತ ಶಿವಯೋಗಿಗಳು ತ್ರಿವಿಧ ದಾಸೋಹದ ಜೊತೆಗೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮಾಡಿದ ಕಾರ್ಯಗಳು ಅವಿಸ್ಮರಣೀಯ. ವಿದ್ಯಾರ್ಥಿಗಳು ಕೆಟ್ಟ ಹವ್ಯಾಸಗಳಿಂದ ಮುಕ್ಕ್ತರಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಆದರ್ಶ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಜ್ಞವೈದ್ಯ ಡಾ. ಹಾಲೇಶ್ ಬಿ. ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು 75% ರಷ್ಟು ತಮ್ಮ ಅಮೂಲ್ಯ ಸಮಯವನ್ನು ಮೊಬೈಲ್ ಸ್ಕ್ರೀನ್ ಬಳಸುವುದರಲ್ಲೆ ಕಳೆಯುತ್ತಿದ್ದಾರೆ. ಇದರಿಂದ ಮೆದುಳು ಸಂಬಂಧಿತ ಕಾಯಿಲೆಗೆ ಗುರಿಯಾಗುತ್ತಿರುವುದು ಅಂತಕಕಾರಿ ವಿಷಯವಾಗಿದೆ ಎಂದರು.
Read also : DAVANAGERE : ನ್ಯಾಯ ವಿತರಣೆ ಮಾಡುವಲ್ಲಿ ವಕೀಲರ ಪಾತ್ರ ಪ್ರಮುಖ : ನ್ಯಾ. ರಾಜೇಶ್ವರಿ ಎನ್. ಹೆಗಡೆ
ಧೂಮಪಾನ ಹಾಗೂ ಮಧ್ಯಪಾನದಿಂದ ದೇಹದ ಎಲ್ಲಾ ಭಾಗಗಳು ರೋಗಗ್ರಸ್ತವಾಗುತ್ತವೆ. ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ದುಶ್ಚಟಗಳಿಂದ ದೂರವಿರದ ಹೊರೆತು ಉತ್ತಮ ಭವಿಷ್ಯ ಸಾಧ್ಯವಿಲ್ಲ, ದುಶ್ಚಟಗಳಿಂದ ದೂರವಿರಲು ಉತ್ತಮ ಕೆಲಸ, ಆಲೋಚನೆ, ಸಂಸ್ಕೃತಿ ಹಾಗೂ ಒಂದೇ ಗುರಿಯ ಚಲನೆಯಿಂದ ಮಾತ್ರ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ ಹಾಗೂ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ. ಅಶೋಕ್ ಕುಮಾರ್ ವೀ ಪಾಳೇದ ಮತ್ತು ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಸಿದ್ದಪ್ಪ ಬಿ.ಕೆ ಹಾಗೂ ವಿದ್ಯಾರ್ಥಿಗಳು ಇದ್ದರು.