Kannada News | Dinamaana.com | 24-05-2024
ಹರಿಹರ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ, ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ವೃತ್ತಿಯಲ್ಲಿ ಕರ್ತವ್ಯ ಪ್ರಜ್ಞೆ, ಸಾಮಾಜಿಕ ಹಿತ ಕಾಪಾಡುವ ಜವಾಬ್ದಾರಿಯು ಕೂಡ ಪತ್ರಕರ್ತರಿಗೆ ಇರಬೇಕಾಗುತ್ತದೆ ಎಂದು ದಾವಣಗೆರೆ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್ ಕಣಸೋಗಿ ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನಲ್ಲಿ “ಪತ್ರಿಕೋದ್ಯಮದ ವೃತ್ತಿ ಕೌಶಲ ಮತ್ತು ಸಂಹಿತೆ” ಎಂಬ ವಿಷಯವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿನ ಓರೆಕೋರೆಗಳನ್ನು ತಿದ್ದುವ, ನಿಯಮ ಮತ್ತು ನಿಯಂತ್ರಣಗಳನ್ನು ಎಚ್ಚರಿಸುವ ಕೆಲಸ ಪತ್ರಕರ್ತ ಮಾಡುತ್ತಾನೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾತನಾಡುವ ಮತ್ತು ಬರೆಯುವ ಕೌಶಲ್ಯ ರೂಢಿಸಿಕೊಂಡರೆ ಉತ್ತಮ ಪತ್ರಕರ್ತರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಹಿರಿಯ ಪತ್ರಕರ್ತ ಇನಾಯತ್ ಉಲ್ಲಾ ಟಿ. ಮಾತನಾಡಿ, ದಿನನಿತ್ಯದ ವೇದಿಕೆ ಕಾರ್ಯಕ್ರಮಗಳ ಸುದ್ದಿ ಮಾಡುವುದರೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ವಿಶೇಷ ವರದಿಗಳನ್ನು ಮಾಡುವ ಮೂಲಕ ಸಂಬಂಧಿಸಿದ ಅಧಿಕಾರಿಯ ಅಥವಾ ಇಲಾಖೆಯ ಜವಾಬ್ದಾರಿಯನ್ನು ಎಚ್ಚರಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕಾಗುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿರಬೇಂದರೆ ಪತ್ರಿಕೋದ್ಯಮ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸುದ್ದಿಯನ್ನು ಗ್ರಹಿಸುವ ಗುಣ ಮತ್ತು ಸುದ್ದಿ ಮೂಲಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಪತ್ರಕರ್ತನದ್ದಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಕ್ಷೇತ್ರದ ಪ್ರಮುಖಾಂಶಗಳನ್ನು ಮನದಟ್ಟು ಮಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿರುಪಾಕ್ಷಪ್ಪ ಹೆಚ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐ.ಕ್ಯೂ.ಎಸ್.ಸಿ ಸಂಯೋಜಕರಾದ ಪ್ರೊ.ಜಿ.ಎಸ್.ಸುರೇಶ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ.ಯತೀಶ್ ಎಲ್.ಕೋಡಾವತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದ್ವೀತಿಯ ಪದವಿ ವಿದ್ಯಾರ್ಥಿನಿ ದೀಕ್ಷಿತಾ ಬಿ.ಹೆಚ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅರ್ಪಿತಾ ಬಿ.ಆರ್. ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಹುಚ್ಚಂಗಿ ಸಿ. ಅವರು ವಂದಿಸಿದರು.