ದಾವಣಗೆರೆ (Davangere) : ಮಾನವನ ಅಂತರಂಗದಲ್ಲಿಯೇ ದೇವರು ಇದ್ದಾನೆ. ನಮ್ಮೊಳಗಿರುವ ದೇವರನ್ನು ವಿಶ್ವಗುರು ಬಸವಣ್ಣನವರು ಇಷ್ಟಲಿಂಗದ ಮೂಲಕ ನೀಡಿದ್ದಾರೆ ಎಂದು ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ದಾವಣಗೆರೆಯ ವಿರಕ್ತಮಠ (Viraktamatha) ದಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ಪೂಜಾ ಮತ್ತು ಇಷ್ಟಲಿಂಗ ದೀಕ್ಷಾ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು
ಇಷ್ಟಲಿಂಗವನ್ನು ನಾವು ಧರಿಸಿ ಪ್ರತಿದಿನವೂ ಶಿವಯೋಗವನ್ನು ಮಾಡುತ್ತಾ ಬಂದಾಗ ಮೊದಲು ನಮ್ಮ ತನುವನ್ನು ಶುದ್ಧೀಕರಣ ಮಾಡುತ್ತದೆ. ಈ ಶರೀರದೊಳಗಿರುವ ದುಶ್ಚಟ , ದುರ್ಗುಣಗಳನ್ನು ತೊಡೆದುಹಾಕುತ್ತದೆ. ಮನಸ್ಸಿನಲ್ಲಿರುವ ವಿಕಾರಗಳನ್ನು ಕಿತ್ತುಹಾಕುತ್ತದೆ. ಭಾವದೊಳಗಿರುವ ಅರಿಷಡ್ವರ್ಗಗಳನ್ನು ಸುಟ್ಟುಹಾಕುತ್ತದೆ . ತನು ಮನ ಭಾವಗಳಲ್ಲಿರುವ ವಿಷಯ ವಾಸನೆಗಳು ನಿವಾರಣೆಯಾಗಿ ಭಕ್ತನ ಶರೀರವು ಬಸವಣ್ಣನವರು ಹೇಳಿದಂತೆ ದೇಹವು ದೇಗುಲವಾಗುತ್ತದೆ ಎಂದರು.
Read also : Davanagere Municipal Corporation| ಅರ್ಬನ್ ಲರ್ನಿಂಗ್ ಇಂಟರ್ ಶಿಪ್ ಪ್ರೋಗ್ರಾಂಗೆ ಅರ್ಜಿ ಆಹ್ವಾನ
ವಿಶೇಷ ತತ್ವಗಳನ್ನು ಬಸವಣ್ಣನವರು ಲಿಂಗಾಯತ ಧರ್ಮದಲ್ಲಿ ನೀಡಿದ್ದಾರೆ . ಈಗ ಎಲ್ಲರ ಬಳಿಯೂ ಮೊಬೈಲ್ ಫೋನ್ ಇದೆ . ಇದು ಜನ ಸಂಪರ್ಕ ಮಾಡಲು ಸುಲಭವಾಗಿದೆ. ಹಾಗೆಯೇ ದೇವರನ್ನು ಸಂಪರ್ಕ ಮಾಡಲು ಬಸವಣ್ಣನವರು ಈ ಇಷ್ಟಲಿಂಗವೆಂಬ ಮೊಬೈಲ್ ನೀಡಿದ್ದಾರೆ . ಇದನ್ನು ಪೂಜಿಸುತ್ತಾ ಎಷ್ಟು ಬೇಕಾದರೂ ನಾವು ದೇವರೊಂದಿಗೆ ಮಾತನಾಡುವ ಅವಕಾಶವನ್ನು ನೀಡಿದ್ದಾರೆ . ಮೊಬೈಲ್ ನ್ನು ಪ್ರತಿದಿನವೂ ಚಾರ್ಜ್ ಮಾಡುವಂತೆ ಅದೇ ರೀತಿ ಮನಸ್ಸನ್ನು ಇಷ್ಟಲಿಂಗ ಧ್ಯಾನದ ಮೂಲಕ ಚಾರ್ಜ್ ಮಾಡಿದರೆ ನಮ್ಮ ಮನಸ್ಸಿನಲ್ಲಿ ಯಾವುದೇ ಮನೋವಿಕಾರಗಳು , ದ್ವೇಷ ಭಾವನೆಗಳು ಬರುವುದಿಲ್ಲ ಹಾಗಾಗಿ ಪ್ರತಿದಿನವೂ ನಾವು ಶಿವಯೋಗ ಮಾಡಬೇಕು ಎಂದು ಹೇಳಿದರು.
ಮೈಸೂರಿನ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ , ವಿರಕ್ತಮಠದ ಕಮಿಟಿಯವರಾದ ಹಾಭಾವಿ ಕರಿಬಸಪ್ಪ , ಕಣಕುಪ್ಪಿ ಮುರುಗೇಶಪ್ಪ , ಲಂಬಿ ಮುರುಗೇಶಪ್ಪ , ಟಿ.ಎಂ.ವೀರೇಂದ್ರ , ಎಸ್.ಜಿ.ಸಂಗಪ್ಪ , ಮಹದೇವಮ್ಮ ಇತರರು ಇದ್ದರು