Kannada News | Dinamaanada Hemme | Dinamaana.com | 03-07-2024
ಅದೊಂದು ದಿನ , ಇದ್ದಕ್ಕಿದ್ದ ಹಾಗೆಯೇ ಕೊಟ್ಟೂರೇಶ್ವರ ಕಾಲೇಜಿನ ಕ್ಲಾಸುಗಳನೆಲ್ಲ ಬರಖಾಸ್ತು ಮಾಡಲಾಯಿತು. ಎಲ್ಲ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳು ಕಾಲೇಜು ಮೈದಾನದಲ್ಲಿ ಸೇರಿದ್ದರು. ಪೊಲಿಟಿಕಲ್ ಸೈನ್ಸಿನ ಮೇಷ್ಟ್ರು ಮಲ್ಲಪ್ಪನವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದವು.
ಕರ್ನಾಟಕ ರಾಜ್ಯ ಒಬ್ಬ ಮುತ್ಸದ್ದಿಯನ್ನು ಕಳೆದುಕೊಂಡಿದೆ ಎಂದು ತುಂಬ ದುಃಖಿತರಾಗಿ ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರ ಸಾವಿನ ಸುದ್ದಿಯನ್ನು ಪ್ರಕಟಿಸಿದರು. ಎರಡು ನಿಮಿಷಗಳ ಮೌನಾಚರಣೆಯುದ್ದಕೂ ಅವರ ಬಿಳಿ ಖಾದಿ ಅಂಗಿ , ಪಂಚೆ , ಗಾಂಧಿ ಟೊಪ್ಪಿಗೆ ಮತ್ತವರ ಸೈಕಲ್ಲಿನ ಅನೇಕ ಚಿತ್ರಗಳು ನನ್ನ ಮನದಲ್ಲಿ ಸುಳಿದುಹೋಗಿದ್ದವು.
ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ತಾಲೂಕುಗಳೆರೆಡೂ ಸೇರಿ ಒಂದು ಶಾಸಕರ ಮತಕ್ಷೇತ್ರವಿತ್ತು.ಬಹಳ ಹಿಂದುಳಿದ ಪ್ರದೇಶವಾದ ಈ ತಾಲೂಕಿನಲ್ಲಿ ಕುಡಿಯುವ ನೀರಿನಿಂದ ಹಿಡಿದು ಬಹಿರ್ದೆಸೆಗೆ ಹೋಗುವವರೆಗೂ ಸಮಸ್ಯೆಗಳ ಆಗರವೇ ಇದ್ದವು.
ಮಳೆ ಬಿದ್ದರೆ ಮಾತ್ರ ಬ್ಯಾಸಾಯ,ಇಲ್ಲದಿದ್ದರೆ ನೀ ಸಾಯ,ನಾ ಸಾಯ ಎನ್ನುವಂಥ ಪರಿಸ್ಥಿತಿ. ಚುನಾವಣೆಗಳಲ್ಲಿ ಬಹುತೇಕವಾಗಿ ಅಂದಿನ ಕಾಂಗ್ರೆಸ್ಸಿನಿಂದ ಯಾರೇ ನಿಂತ್ರೂ ಸರಾಗವಾಗಿ ಚುನಾಯಿತರಾಗಿ ಬರುತ್ತಿದ್ದರು.
ಹಸ್ತದ ಗುರುತಿನ ಎದುರು ಬಹಳ ಅಪರೂಪಕ್ಕೆಂಬಂತೆ ಬಡ ರೈತನೊಬ್ಬ ನೇಗಿಲು ಹೊತ್ತ ಚಿತ್ರದ ಗುರುತು ನನ್ನಂತಹ ಹುಡುಗರಲ್ಲಿ ಸಂಚಲನ ಮೂಡಿಸಿತ್ತು.ಊರಗೋಡೆಗಳ ಮೇಲೆ ಅತ್ಯಂತ ಸುಂದರವಾಗಿ ಮನೆಗಳ ಹೊಸಿಲಿಗೆ,ಬಳಿಯುತ್ತಿದ್ದ ಕೆಂಪು ಉರುಮಂಜಿನಿಂದ ನೇಗಿಲು ಹೊತ್ತ ರೈತನ ಚಿತ್ರ ಬಿಡಿಸಿ ಎಲ್ಲೋ ಮೂಲೆಯಲ್ಲಿ ತನ್ನ ಚಿಕ್ಕ ರುಜು ಹಾಕಿದ ಕಲಾವಿದ ಯಾರಿರಬಹುದು ಎಂದು ಯೋಚಿಸುತ್ತಿದ್ದೆ.
ಸಿರಿವಂತ ಪಾರ್ಟಿ ಸವಾಲು..
ತುಂಡು ಪಂಚೆ ತೊಟ್ಟು ನೇಗಿಲು ಹೊತ್ತ ರೈತ -ಥೇಟ್ ನಮ್ಮಪ್ಪನಂತೆಯೇ ತೋರಿದ್ದುದೂ ಸೆಳೆತಕ್ಕೆ ಕಾರಣವಾಗಿರಬಹುದು. ಸೋ ಕಾಲ್ಡ್ ಕಾಂಗ್ರೆಸ್ಸು ಆಗ ಸಿರಿವಂತಿಕೆ ಪಾರ್ಟಿಯಂತೆ ತೋರಿ,ನೇಗಿಲು ಹೊತ್ತ ರೈತನ ಜನತಾ ಪಾರ್ಟಿ ಸಂಪತ್ತಿಗೆ ಸವಾಲು ಹಾಕಿದಂತೆ ತೋರಿತು.
ಗೆದ್ದು ಎಮ್ಮೆಲ್ಲೆಯಾದರು..
ಇಂತದ್ದೇ ಹವಾದಲ್ಲಿ ಎಲ್ಲಿಯೋ ಇದ್ದ ಚೆನ್ನಬಸವನಗೌಡರು ಗೆದ್ದು ಎಮ್ಮೆಲ್ಲೆಯಾದರು.ಅವರು ಒಂದು ದಿನವೂ ಎಲೆಕ್ಷನ್ನಿಗೆ, ಓಟುಹಾಕುವವರಿಗೆ ವಗ್ಗಾಣಿ- ಮಂಡಕ್ಕಿ ಸಹ ಕೊಡಿಸಲಿಲ್ಲ.
ತರಬೇತಿ ಕೇಂದ್ರ ತರುವಲ್ಲಿ ಯಶಸ್ವಿ…
ಕೊಡಿಸಲು ಅವರಿಗೆ ಹಣವಿರಲಿಲ್ಲ. ಜನರೇ ಚಂದಾ ಎತ್ತಿ ಗೆಲ್ಲಿಸಿದರು.ಅಪ್ಪಟ ಗಾಂಧಿವಾದಿಯಾಗಿದ್ದ ಗೌಡರು, ಮೆದು ಮಾತಿನವರು. ನಿಸ್ಪೃಹ ರಾಜಕಾರಣಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರಕಾರದ ಬಳಿ ಹಣವೇ ಇರಲಿಲ್ಲ. ಹಾಗೂ ಹೀಗೂ ಮಾಡಿ ಆ ಕಾಲಕ್ಕೆ ಊರಿನ ಹುಡುಗರಿಗೆ ಉದ್ಯೋಗಕ್ಕಾಗಿ ಮಾಲವಿ ಡ್ಯಾಮಿನ ಬಳಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಬಸ್ ಡ್ರೈವರುಗಳ ತರಬೇತಿ ಕೇಂದ್ರ ತರುವಲ್ಲಿ ಯಶಸ್ವಿಯಾದರು. ಆ ಕಾಲಕ್ಕೆ ಅದು ಬಹಳ ದೊಡ್ಡ ಸುದ್ದಿಯಾಗಿತ್ತು.
ಕೃಷಿ ಕಾಯಿದೆಗಳು ಜಾರಿಯಾಗುವಲ್ಲಿ ಮಹತ್ವದ ಪಾತ್ರ….
ಇಂತಹ ಸಣ್ಣಪುಟ್ಟ ಕೆಲಸಗಳನ್ನಷ್ಟೆ ಮಾಡಲು ಅವರಿಂದ ಸಾಧ್ಯವಾಯಿತು.ಆದರೆ ಕೃಷಿಕರ ಪರವಾದ ಅನೇಕ ಕಾಯಿದೆಗಳು ಜಾರಿಯಾಗುವಲ್ಲಿ ಇವರ ಪಾತ್ರ ಬಹಳವಿತ್ತು.
ಪಡಸಾಲೆಯಲ್ಲಿ ಅಹವಾಲು ಸ್ವೀಕಾರ
ರಾಜಕಾರಣಿಯೊಬ್ಬ ಹೀಗೂ ಇದ್ದರೆ ಎಂಬ ಅಚ್ಚರಿಗಾಗಿ ಚೆನ್ನಬಸವನಗೌಡರ ವ್ಯಕ್ತಿತ್ವವನ್ನಿಲ್ಲಿ ಹೇಳಲೇಬೇಕು . ಎಮ್ಮೆಲ್ಲೆಯಾದರೂ ಯಾವ ಐ.ಬಿ.ಗಳಲ್ಲೂ ಉಳಿದುಕೊಳ್ಳದೆ ಸಾಮಾನ್ಯರಂತೆ ಊರಜನರ ಪಡಸಾಲೆಯ ಮೇಲೆಯೆ ಅಹವಾಲು ಸ್ವೀಕರಿಸುತ್ತಿದ್ದರು.
ಆ ಮನೆಯವರು ಕೊಟ್ಟ ಟೀ..ಮಜ್ಜಿಗೆಯಲ್ಲಿಯೇ ಆತಿಥ್ಯ ಮುಗ್ದುಹೋಗುತ್ತಿತ್ತು.ಒಂದು ಬಾರಿ ಹಿಂದುಳಿದವರ ಮನೆಯಲ್ಲಿ,ಮತ್ತೊಂದು ಬಾರಿ ಹರಿಜನ ಕೇರಿಯಲ್ಲಿ, ಗೌಡರೋಣಿಯಲ್ಲಿ, ಬ್ರಾಮ್ಮಣರೋಣಿಯಲ್ಲಿ ಮೀಟಿಂಗುಗಳು ನಡೆಯುತ್ತಿದ್ದವು.
Read also : ದಿನಮಾನದ ಹೆಮ್ಮೆ : ಪ್ರೀತಿಯಿಂದ ಬಾಚಿಕೊಳ್ಳುವ ಬಾಚಿಗೊಂಡನಹಳ್ಳಿ ಹುರಕಡ್ಲಿ ಶಿವಕುಮಾರ
ಸಂಜೆಯಾಗುತ್ತಿದ್ದ ಹಾಗೆ ,ಅಷ್ಟ ಮಾಡ್ರೀ..ಎಂದು ಹೇಳಿ ಕೆಂಪು ಬಸ್ಸನ್ನೇರಿ ಹಗರಿಬೊಮ್ಮನಹಳ್ಳಿಗೆ ಹೋಗುತ್ತಿದ್ದರು.ಅಲ್ಲಿಂದ ,ಅಲ್ಲಿಯೇ ಯಾರದೋ ಮನೆಯ ಮುಂದೆ ನಿಲ್ಲಿಸಿದ ಹಳೇ ಸೈಕಲ್ಲೇರಿ ಕತ್ತಲ ರಾತ್ರಿಯಲ್ಲಿ ಬಾಚಿಗೊಂಡನಹಳ್ಳಿಯ ಮನೆ ಸೇರುತ್ತಿದ್ದರು.
ಆಕ್ರಮಣಕಾರಿ ರಾಜಕಾರಣದ ಈ ಹೊತ್ತಿನಲ್ಲಿ ತುಂಡು ಪಂಚೆಯನ್ನೆ ಮೇಲಕ್ಕೆ ಕಟ್ಟಿಕೊಂಡು ಹೊಲದಲ್ಲಿ ಕಮತ ಮಾಡುವ ಸಿಟ್ಟಿಂಗ್ ಎಮ್ಮೆಲ್ಲೆ ಹೋಗಲಿ, ಗ್ರಾಮ ಪಂಚಾಯಿತಿ ಮೆಂಬರು ಕೂಡ ಕಾಣಸಿಗುವುದಿಲ್ಲ.
ಅಂತ್ಯ ಸಂಸ್ಕಾರಕ್ಕೂ ಹಣವಿರಲಿಲ್ಲ …
ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರು ಮತ್ತೊಂದು ಬಾರಿ ಗೆಲ್ಲಲಿಲ್ಲ.ಸೋತರೂ ನಿರ್ಲಿಪ್ತರಂತಿದ್ದ ಆ ಮುಖಭಾವ ಇನ್ನೂ ಮನದಲ್ಲಿ ಅಚ್ಚೊತ್ತಿದ್ದಂತಿದೆ. ಅವರು ತೀರಿ ಹೋದ ದಿನ, ಅಂತ್ಯಸಂಸ್ಕಾರಕ್ಕೂ ಹಣವಿರಲಿಲ್ಲ.ಅವರದ್ದೇ ಅಕೌಂಟಿನಲ್ಲಿ ಕೇವಲ ಮೂವತ್ತೆರೆಡು ರೂಪಾಯಿಗಳಿದ್ದುವಂತೆ!.
ಈ ಹೊತ್ತು ಹರಪನಹಳ್ಳಿ , ಹಗರಿಬೊಮ್ಮನಹಳ್ಳಿ , ಕೊಟ್ಟೂರ , ಹಡಗಲಿ, ಕೂಡ್ಲಿಗಿ, ಹೊಸಪೇಟೆ, ಸಂಡೂರಿನಂತಹ ಊರುಗಳುದ್ದಕ್ಕೂ ತರಹೇವಾರಿ ಬಣ್ಣಬಣ್ಣದ ಪೋಷ್ಟರುಗಳ ಮಧ್ಯೆ ಶುಭ್ರವಸ್ತ್ರಧಾರಿ ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರ ಆ ಮುಖ ಕಾಡುತ್ತದೆ.
ಹಾಗೆಯೇ,ಅಂತ್ಯಸಂಸ್ಕಾರದ ದಿನ, ಕೆಲ ಯುವಕರು ತನ್ನ ನಾಯಕನ ಅಂತಿಮ ಯಾತ್ರೆಗಾಗಿ ಪರದಾಡುವ ನೋವನ್ನೂ ಪಿ.ಯು.ಸಿ.ಓದುತ್ತಿದ್ದ ನನ್ನಂತಹ ಎಷ್ಟೋ ಹುಡುಗರ ಎದೆ ಕಲಕಿದೆ.
ನಾನು, ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ಮಾಡಲೇಬೇಕಾದ ಎರಡು ಕನಸುಗಳಿದ್ದವು.
ಒಂದು : ಲಿಂಬಿಹುಳಿ ಪೆಪ್ಪರುಮಿಂಟು ಎಷ್ಟು ಬೇಕಾದರೂ ಖರೀದಿಸಿ ಹಂಚಿ ತಿನ್ನೋದು,
ಮತ್ತೊಂದು : ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರ ತರಹ ರಾಜಕಾರಣಿಯಾಗೋದು. ದುರದೃಷ್ಟವಶಾತ್ ಎರಡು ಕನಸುಗಳೂ ಇದುವರೆಗೂ ಈಡೇರಲಿಲ್ಲ.
ಬಿ.ಶ್ರೀನಿವಾಸ