Kannada News | Dinamaanada Hemme | Dinamaana.com | 11-07-2024
ಬಳ್ಳಾರಿಯಿಂದ ಭೌಗೋಳಿಕವಾಗಿ ದೂರವಿರುವ ಮತ್ತು ಅತಿಹೆಚ್ಚು ಭೂ ವಿಸ್ತೀರ್ಣವುಳ್ಳ ಹರಪನಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಅವಮಾನಿತ ಜಾತಿಗಳು,ದಲಿತರು , ಕಡುಬಡವರು , ಕೃಷಿ ಕೂಲಿಕಾರರ ಸಂಖ್ಯೆಯೇ ಹೆಚ್ಚು.
ಇಂಥದೊಂದು ಪರಂಪರೆಯ ನಂತರದ ತಲೆಮಾರು ಓದಿಗೆಂದು ತೆರೆದುಕೊಳ್ಳುವ ಸಂಕ್ರಮಣ ಸ್ಥಿತಿಯೊಳಗೆ, ಹರಪನಹಳ್ಳಿಯೆಂಬ ಊರೆಂಬ ಊರ ತುಂಬಾ ಶಾಲೆ,ಕಾಲೇಜುಗಳು.ರಾಜ್ಯದ ಮೂಲೆ ಮೂಲೆಗಳಿಂದ ಟಿ.ಸಿ.ಎಚ್. ಮತ್ತು ಬಿ.ಎಡ್.ಎಂಬ ಮೇಷ್ಟ್ರು ಟ್ರೈನಿಂಗ್ ಕೋರ್ಸಿಗೆ ಮೈ -ಕೈಗಳಿಗೆ ಮಣ್ಣು ಅಂಟಿಸಿಕೊಂಡೆ ಕಲಿಯಲು ಬರುವ ಜವಾರಿತನದ ಹುಡುಗರು,ಕಲಿಸಲು ಬಂದ ಅನೇಕ ಮೇಷ್ಟ್ರುಗಳು ಇದ್ದರು.
ಅಂಥವರ ಪೈಕಿ ಬೆಳಗಾವಿಯ ಸಾಣಿಕೊಪ್ಪದ ಎಸ್.ಎಸ್.ಹಿರೇಮಠರು,ಗದುಗಿನ ಚಿಕ್ಕಮಠ, ಪಶುಪತಿ ಹಾಳದ ಡಿ.ಬಿ.ಬಡಿಗೇರ, ಹಡಗಲಿಯ ಗಂಗಪ್ಪ , ಶಿವಮೊಗ್ಗ ಹತ್ತಿರದ ತಿಮ್ಮಪ್ಪ…ಹೀಗೆ ಪಟ್ಟಿ ಸಾಗುತ್ತದೆ.
ನಿಷ್ಠುರವಾದ ದನಿ(D.B. Badigera)
ಹಿರೇಮಠರು ಗುರುತಿಸಿದಂತೆ ಅಪ್ಪಟ ಬೆವರಿನ ನಾಡಾದ ಹರಪನಹಳ್ಳಿಯ ಜನರು ಜೀವನದ ಕುರಿತು ಅಷ್ಟೇ ನೇರ ಮತ್ತು ಖಚಿತವಾದ ಗ್ರಹಿಕೆಗಳನ್ನು ಹೊಂದಿದವರು.
ವ್ಯವಸ್ಥೆಯ ಕರಾಳತೆಯನ್ನು ಕಾಲಕಾಲಕ್ಕೆ ವಿರೋಧಿಸುತ್ತಲೇ ಬಂದ ಇಲ್ಲಿನ ನೆಲದ ದನಿಗಳ ಪೈಕಿ ಡಿ.ಬಿ.ಬಡಿಗೇರರದೂ ಬಹು ಮುಖ್ಯ ಮತ್ತು ನಿಷ್ಠುರವಾದ ದನಿ.
ಮೇಷ್ಟ್ರಾಗಿ ಅತ್ಯಂತ ಯಶಸ್ವಿಯಾಗಿ ಹೆಸರು ಮಾಡಿದ್ದ ಬಡಿಗೇರರಿಗೆ ವಿದ್ಯಾರ್ಥಿಗಳೆಂಬ ಗೆಳೆಯರ ಬಲವೂ ಸೇರಿದಂತೆಲ್ಲ ಅವರೊಳಗೆ ಒಬ್ಬ ಕ್ರಾಂತಿಕಾರಿ ಭಾಷಣಕಾರ,ಬರೆಹಗಾರ ಹೊರಬರಲು ಸಾಧ್ಯವಾಯಿತೆನ್ನಬಹುದು.
Read also : ದಿನಮಾನ ಹೆಮ್ಮೆ : ಜನರ ನಂಬಿಕೆಯ ಲೋಕದೊಳಗೆ ಪ್ರವೇಶಿಸಿ ಬರೆವ ಕವಿ–ಡಿ.ರಾಮನಮಲಿ
ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆಯ ಈ ಮೇಷ್ಟ್ರು ಬಾಯಲ್ಲಿ”ಹಡಸೀಮಗನ”ಎಂದು ಬೈಸಿಕೊಳ್ಳೋದು ಕೂಡ ಒಂದು ಕಾಲಕ್ಕೆ ಹೆಮ್ಮೆಯ ವಿಷಯವಾಗಿ ಹೋಗಿತ್ತು. ಜಾತಿ ವ್ಯವಸ್ಥೆಯ ,ಬಂಡವಾಳಶಾಹಿ ವ್ಯವಸ್ಥೆಯ ಪೋಷಕರನ್ನು ತರಾಟೆಗೆ ತೆಗೆದುಕೊಳ್ಳವ ಪರಿಗೆ ವಿದ್ಯಾರ್ಥಿಗಳಿಂದ ಕರತಾಡನವೋ ಕರತಾಡನ. ಜನ,ಜನರ ನೋವಿಗೆ ಕವಿತೆ ಸ್ಪಂದಿಸಬೇಕು ಮತ್ತು ಪ್ರತಿಭಟಿಸಬೇಕು ಎನ್ನುವುದು ಅವರ ಬರೆಹದ ಮೂಲ ಆಶಯವಾಗಿತ್ತು.
ಪ್ರಧಾನಿಯೊಬ್ಬರ ಬಹುನಿರೀಕ್ಷಿತ ಭಾರತ ಪ್ರಕಾಶಿಸುತ್ತಿದೆ ಎಂಬ ವರ್ತಮಾನವನ್ನು ಅವರು ,
ಭಾರತ ಪ್ರಕಾಶಿಸಬೇಕಾಗಿದೆ
ಹಸಿರು ಉಡಲಾರದ ಮಣ್ಣು ಮಣ್ಣುಗಳಲ್ಲಿ
ಬಸಿರು ಹೊರಲಾರದ ಬಾಳು ಬಾಳುಗಳಲ್ಲಿ
ನಿಜ ಭಾರತ ಪ್ರಕಾಶಿಸಬೇಕಾಗಿರುವುದು ಎಲ್ಲಿ ಎಂಬುದನ್ನು ಹೇಳುತ್ತಾರೆ.
ತೊಂಭತ್ತರ ಶ್ರೀರಾಮ ಯಾತ್ರೆ ಸೃಷ್ಟಿಸಿದ ಅವಾಂತರಗಳನ್ನು,
ರಾಜ್ಯ ತ್ಯಾಜ್ಯ ಮಾಡಿದ ರಾಮ
ಅಂಗಡಿ ತೆರೆದಿರುವನು
ಚೈನು,ಚಾಕು,ಚೂರಿ ಮಾರಲು
ನೆತ್ತರು ರಸ್ತೆಗೆ ತೂರಲು
ಕಮಲವನು ಊರಲು
ಎಂದು ವಿಷಾದದಿಂದಲೇ ಹೇಳುತ್ತಾರೆ.
ಹಾಗೆಂದು ನಿರಾಶರಾಗದೆ,
ಕಾಲದ ಕೂಗು ಕಾವು ಕುಳಿತಿದೆ
ರಾತ್ರಿ ರಾತ್ರಿಗಳೆಲ್ಲವೂ ಎಚ್ಚರವಾಗಿವೆ
ನಳನಳಿಸುವ ನಾಳೆಗಾಗಿ:
ಆಶಯವನ್ನು ವ್ಯಕ್ತಪಡಿಸುತ್ತಾರೆ.
ಎಲ್ಲ ಎಡಪಂಥೀಯರ ಹಾಗೆ ವರ್ತಮಾನದ ಕವಿತೆಗಳನ್ನು ಬರೆದರು ಎನ್ನುವುದಕ್ಕಿಂತಲೂ ಮುಖಾಮುಖಿಯಾಗಿ ಬರೆದ,
ಹವಾಲಾ ಹವಾಲಾ
ಹಾವಾತೋ ಹರಕೊಂತೋ ಹವಾಲಾ
ಹವಾಲಾ ಹವಾಲಾ
ಅರ್ಥವ್ಯವಸ್ಥೆ ದಿವಾಳಿಕೋರ ಹವಾಲಾ
ಕಾಕಿ-ಕಾವಿ-ಖಾದಿಗಳನು
ಸಾಕಿ ಹಿಡಿತೋ ಹವಾಲಾ
ಕೋಟಿ ಕೋಟಿ ಜನರಿರುವ
ಸವಾಲಾತೋ ಹವಾಲಾ.
ಇವರ ಈ ತರಹದ ಪದ್ಯಗಳು ಆ ಕಾಲದ ಕಾಲೇಜು ಹುಡುಗರ ನಾಲಿಗೆಯ ಮೇಲೆ ಘೋಷಣೆಗಳಂತೆ ಕೇಳಿಬರುತ್ತಿದ್ದವು.
ಅವರು ನಂಬಿದ ರಾಜಕೀಯ ಸಿದ್ಧಾಂತಗಳು , ವ್ಯಕ್ತಿಗಳು ಕವಲುದಾರಿ ತುಳಿದರೂ ಮತ್ತು ಅವರ ವೈಯಕ್ತಿಕ ಬದುಕನ್ನ ವಿಚಲಿತಗೊಳಿಸುವಂಥ ಘಟನೆಗಳು ಎಷ್ಟೇ ನಡೆದರೂ ಸಹ ಅವರಿಗೆ,
ಈ ನಾಟಕ
ಬಹುಕಾಲ ಬದುಕದು
ಶ್ರಮಿಕರು
ಬರತಾರ
ಅಂಕ ಪರದೆ
ಎಳೀತಾರ.
ಎಂಬ ಬಹುದೊಡ್ಡ ನಿರೀಕ್ಷೆಯಲ್ಲಿದ್ದಾರೆ ಮತ್ತು ಓದುಗರನ್ನೂ ಹಾಗೆ ಕಾಯುವಂತೆ ಮಾಡುತ್ತಾರೆ ಕೂಡ
ಬದುಕು ಭಾವಗಳ ತದುಕಿ
ಕೋಟಿ ಕೊತ್ತಲ ಕಟ್ಟಲು
ಕೈ ಕಾಲು ಕಣ್ಣು
ಕರುಳು-ಕತ್ತುಗಳ ಕಿತ್ತರು
ಅಣ್ವಸ್ತ್ರಗಳ ಬಸಿರು ಹೊತ್ತು
ಹಿರೊಶಿಮಾ-ನಾಗಾಸಾಕಿ
ದುರಂತ ಕೂಸು ಹೆತ್ತರು
ಶಾಂತಿಗಾಗಿ ಹಂಬಲಿಸುವ ಬಡಿಗೇರರದು ಕಲ್ಪನಾ ವಿಲಾಸದಲ್ಲಿ ತೇಲಿಬರದ ನೇರಾನೇರ ಮಾತು.ಅವರೆಂದಿಗೂ ನೆಲ ಬಿಟ್ಟು ಮೇಲೇಳದೆ ,ನೆಲದ ನಂಟಿಗೆ ಬದ್ಧರಾಗಿಯೇ ಕಾರ್ಯನಿರ್ವಹಿಸಿದರು.
ಹರಪನಹಳ್ಳಿಯೆಂಬ ದೊಡ್ಡ ಹಳ್ಳಿಯಂತಹ ಊರಿನಲ್ಲಿ ಕೂತು ಕವನಿಸುವುದನ್ನು ಧ್ಯಾನಿಸುವಂತೇನೂ ಮಾಡಲಿಲ್ಲ.ತಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಆಡಳಿತ ಮಂಡಳಿಯ ಸರ್ವಾಧಿಕಾರ,ಪುರೋಹಿತಶಾಹಿ ಗುಣ,ಸ್ವಜನಪಕ್ಷಪಾತಗಳ ಧೋರಣೆಗಳ ವಿರುದ್ಧ ಸದಾ ಬಂಡೆದ್ದವರು.
ಬೀದಿಗೆ ಬಿದ್ದರೆ
ಎದಿಗೆ ಒದ್ದರೆ
ಕಂಗಾಲಾಗಿ ಅಂಗಾತ ಬೀಳುವವರಿವರು
ಹಿಟ್ಲರನ ಗೋರಿಯಿಂದೆದ್ದವರು
ಎಂಬಂತೆ ಜಾಗತಿಕವನ್ನು ಸ್ಥಳೀಯವಾಗಿಯೂ ಎದುರಿಸಿದವರು.
‘ಜನಕವಿ'(D.B. Badigera)
ಒಬ್ಬ ಸಾರ್ವಜನಿಕ ವ್ಯಕ್ತಿಯ ಸುತ್ತಲೂ ಸದಾ ಜನತೆಯ ಕನ್ನಡಿ ಇರುತ್ತದೆ.ಬಡಿಗೇರ ಮಾಸ್ತರರಿಗೆ ಅಂಟಿದ ಬಂಡಾಯ ಜನರಿಗೂ ಬೇಕಾಗಿತ್ತು.ಅವರ ನಿರೀಕ್ಷೆಯಂತೆಯೇ ಮಾಸ್ತರರು ಬರೆದರು,ಮತ್ತು ಬದುಕಿದರು.ಆದರೆ ಇವರ ಕಾವ್ಯವನ್ನು ಕನ್ನಡ ಸಾಹಿತ್ಯಲೋಕ ತನ್ನ ಒಡಲೊಳಗೆ ಅಷ್ಟಾಗಿ ಯಾಕೆ ಬಿಟ್ಟುಕೊಳ್ಳಲಿಲ್ಲವೋ..ಆ ಬಗ್ಗೆ ತಲೆಯನೆಂದೂ ಕೆಡಿಸಿಕೊಳ್ಳದೆ ‘ಜನಕವಿ’ಯಾಗಿ ಉಳಿದುಬಿಟ್ಟರು.
ಅದೇನೆ ಇರಲಿ,ಒಬ್ಬ ಸಾಹಿತಿಗೆ ಇರಬೇಕಾಗಿದ್ದುದು ಸಾರ್ವಜನಿಕ ನೈತಿಕತೆಯ ಬಗೆಗಿನ ಎಚ್ಚರ- ಆ ಎಚ್ಚರದಲ್ಲಿಯೇ ಬಡಿಗೇರರು ಜೀವಿಸುತ್ತಿರುವುದು ನಮಗೆಲ್ಲ ಮಾದರಿ.
ಪ್ರೀತಿಯಿರದಿರೆ
ರೈತ-ನೇಗಿಲ ನಡುವೆ
ಅದೆಂತು ಭೂಮಿ ಹದವಾದೀತು
ಕಣ ಕಾಳು ತುಂಬೀತು
ಪ್ರೀತಿಯಿರದಿರೆ
ಗಿಡ ಮರ ಮನುಷ್ಯ ಮಧ್ಯೆ
ಅದೆಂತು ಉಸಿರಾಟ ಉಳಿದೀತು;
ಜೀವ ಭಾವ ತಳಿದೀತು
ಮೇಷ್ಟ್ರು –ವಿದ್ಯಾರ್ಥಿಗಳ ನಡುವೆ ಪ್ರೀತಿಯಿರದಿರೆ ..
ಕವಿ, ಹೋರಾಟಗಾರ ಬಡಿಗೇರ್ ಮಾಸ್ತರರು ನಮ್ಮವರಾಗುವುದು ಹೀಗೆ.
ಬಡಿಗೇರರ ಒಡಲಲ್ಲಿ ಬೆಂಕಿಯಿದೆ (DB Badigera)
ರಾಜಾಶ್ರಯದಿಂದ ಸದಾ ಅಂತರ ಕಾಪಾಡಿಕೊಳ್ಳುತ್ತಲೇ,ಕಚೇರಿ ಸಂಗೀತದ ಕಾವ್ಯದಿಂದ ದೂರವಿದ್ದು,ತಮ್ಮ ಎಂದಿನ “ವಾಚಾಳಿತನ”ವಿಟ್ಟುಕೊಂಡ ಅಪರೂಪದ ಸ್ವತಂತ್ರ ಕವಿಯಾದರು.ಅಪಾರ ಜೀವನದ್ರವ್ಯದ ಬಡಿಗೇರರ ಒಡಲಲ್ಲಿ ಬೆಂಕಿಯು ಇದೆ,ತಂಗಾಳಿಯು ಇದೆ.ಕನ್ನಡದ ಬಹುತೇಕರಂತೆ ಸುಖಾಸುಮ್ಮನೆ ಜೀವನಕಾವ್ಯ ಬರೆಯದೆ,ಜನಪರ ನಿಲುವುಗಳನ್ನು ತಮ್ಮ ಬರೆಹದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿದರು.
ಇಲ್ಲಿನ ವಿದ್ಯಾರ್ಥಿಗಳಿಗೆ , ಚಳುವಳಿಗಾರರಿಗೆ ಎಸ್ಸೆಸ್ ಹಿರೇಮಠರ ಮನೆ ಬಿಟ್ಟರೆ, ನಂತರ ನೆನಪಾಗುತ್ತಿದ್ದುದೇ ಬಡಿಗೇರ್ ಸರ್ ಮನೆ.ನೂರಾರು ಚಳುವಳಿಗಾರರನ್ನು ಸಾಕಿ,ಪೊರೆದವರು.
ಬಡಿಗೇರರು ‘ಪರಕೀಯ’ನಂತೆ ಕಾಣಿಸುತ್ತಾರೆ.. (DB Badigera)
ಸಾಹಿತ್ಯದಲ್ಲಿ ಸತ್ಯಶೋಧನೆಗಿಳಿದವರಂತೆ ಬರೆಯುವ ಕವಿ,ಸಾಮಾಜಿಕವಾಗಿ ಹಾಸುಹೊಕ್ಕಾಗಿರುವ ಮರ್ಯಾದೆ,ದಾಕ್ಷಿಣ್ಯ,ಸಭ್ಯತೆ,ಇವುಗಳಿಂದ ಬಹುತೇಕ ಚಳುವಳಿಗಾರರು ವಂಚಿತರಾದ ಹಾಗೆ,ಬಡಿಗೇರರ ಹಾದಿಯ ಕತೆಯೂ ಅದೇ.ಹೀಗೆ ವಂಚಿತರಾಗಿ ಬರೆಯುವುದು ಮತ್ತು ಹಾಗೆ ಬದುಕುವುದು ಸುಲಭದ್ದಲ್ಲ.ಪ್ರಭುತ್ವದ ಅರಾಜಕತೆಯನ್ನು ಕಣ್ಣುಮುಚ್ಚಿ ಅನುಸರಿಸುವ ಎಷ್ಟೋ ಜನ ಸೋ ಕಾಲ್ಡ್ ಲೇಖಕರ ಮಧ್ಯೆ ಬಡಿಗೇರರು ‘ಪರಕೀಯ’ನಂತೆ ಕಾಣಿಸುತ್ತಾರೆ.ಅವರ ಆ ಕುರುಚಲು ಗಡ್ಡ,ಹಲ್ಲಿನಲ್ಲಿ ಕಡ್ಡಿಯನಿಟ್ಟುಕೊಂಡು ಮಾತನಾಡುವ ಶೈಲಿ ಅವರ ವಿಶೇಷತೆ ಕೂಡ.
ಅವರ ಕವಿತೆಗಳಿಗಿಂತ ಅವರ ಬದುಕಿನ ಸಂವೇದನೆಗಳ ಕಾವ್ಯವ್ಯಕ್ತಿತ್ವ ನನ್ನನ್ನು ಬಹುವಾಗಿ ಆಕರ್ಷಿಸುತ್ತದೆ.ಅವರ ಜವಾರಿತನದ ಮಾತು,ಜೀವಂತ ಕನ್ನಡವನ್ನು ಪ್ರತಿನಿಧಿಸುವುದಷ್ಟೇ ಅಲ್ಲ,ನಮ್ಮೊಳಗಿನ ನಮ್ಮನ್ನು ಸದಾ ಎಚ್ಚರಿಸುವಂತೆ ಮಾಡುವ ಅಪ್ಪಟ ಕವಿ-ಮೇಷ್ಟ್ರು ನೂರು ವಸಂತಗಳನ್ನು ದಾಟಲಿ.
ಬಿ.ಶ್ರೀನಿವಾಸ