Kannada News | Dinamaanada Hemme | Dinamaana.com | 04-07-2024
ಕವಿತೆಗಳನ್ನು ಓದಿದಾಗ ಮನಸ್ಸು ಅಭಿಮಾನದಿಂದ ತುಂಬಿದೆ..
ಒಬ್ಬ ಸಾಮಾನ್ಯ ರೈತ ಚಳುವಳಿಗಾರನಾಗುವುದು ಮತ್ತು ಕವಿಯಾಗುವುದರ ಹಿಂದೆ ಅದೆಷ್ಟುಅನುಭವಗಳಿವೆ , ಅದೆಷ್ಟು ಕಷ್ಟ,ಬಡತನಗಳ ಬೆಟ್ಟಗಳನ್ನು ಹಾದು ಬರಬೇಕು ಎಂಬುದನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದ ಎಪ್ಪತ್ತರ ಅಂಚಿನಲ್ಲಿರುವ ಮೇಟಿ ಕೊಟ್ರಪ್ಪ ಎಂಬ ಕವಿಯ ಕವಿತೆಗಳನ್ನು ಓದಿದಾಗ ಮನಸ್ಸು ಅಭಿಮಾನದಿಂದ ತುಂಬಿ ಬಿಡುತ್ತದೆ,
ತನ್ನ ಕೃತಿಯ ಕುರಿತು ” ನನ್ನ ಕವನಗಳು ಓದುಗರಿಗೆ ತಲುಪದೇ ಹೋದಲ್ಲಿ ಬರೀ ಕಾಗದ ದಂಡವಲ್ಲ ಕಾಗದಕ್ಕೆ ಉಪಯೋಗಿಸಿದ ಕಾಡೆಲ್ಲ ಹಾಳಾಗಿದೆ ಎಂಬ ಅರ್ಥಕ್ಕೆ ವಿಷಾದಿಸುತ್ತೇನೆ ಎನ್ನುತ್ತಾರೆ.
ಬರೆಹಗಾರನೊಬ್ಬನ ಬಹುದೊಡ್ಡ ಬದ್ಧತೆ …
ನನ್ನ ಮಟ್ಟಿಗೆ ಇದು ಕನ್ನಡದ ಇದುವರೆಗೆ ಬಂದ ಬಹುದೊಡ್ಡ ವಿಮರ್ಶೆಯಾಗಿದೆ.ಇದೊಂದು ಕೇವಲ ಸ್ವ-ವಿಮರ್ಶೆಯಾಗಿರದೆ , ಬರೆಹಗಾರನೊಬ್ಬನ ಬಹುದೊಡ್ಡ ಬದ್ಧತೆಯಾಗಿಯೂ ಮೆಚ್ಚುವಂತದ್ದು. ಯಾವ ಕನ್ನಡ ಕಾವ್ಯಲೋಕ ನಿರ್ಲಕ್ಷ್ಯ ವಹಿಸಿತ್ತೋ ಅಂಥವರ ಎದೆಯಲ್ಲಿ ಕೆಂಡದಂಥ ಪ್ರಜ್ಞೆ ಇರುವುದನ್ನು ಗಮನಿಸಲಿಲ್ಲ.ಇದು ಕೇವಲ ಮೇಟಿ ಕೊಟ್ರಪ್ಪನವರ ವಿಷಯದಲ್ಲಿ ಮಾತ್ರವಲ್ಲ,ಬಳ್ಳಾರಿ ಸೀಮೆಯ ಸುತ್ತೂರುಗಳಲ್ಲಿ ಬರೆಯುತ್ತಿದ್ದವರೆಲ್ಲರ ಪ್ರತಿನಿಧಿಯಾಗಿ ಇವರು ಮತ್ತು ಇವರ ಬರೆಹ ಕಾಣಿಸುತ್ತಿದೆ.
ಕನ್ನಡ ಕಾವ್ಯಕ್ಕೆ ಬೆಲೆ ಬರದ ದಿನಗಳಿವು…
“ನನ್ನೆದೆಯ ಹಾಡು” ಸಂಕಲನದ ಲೇಖಕನ ಅರಿಕೆಯಲ್ಲಿ “ಕನ್ನಡ ಕಾವ್ಯಕ್ಕೆ ಬೆಲೆ ಬರದ ದಿನಗಳಿವು. ಬರೆದ ಕವನಗಳನ್ನು ಪ್ರಕಟಿಸಲೋ, ಮುನ್ನುಡಿ ಬರೆಸಲೋ ದೈನಾಸ ಬೀಳುವ ಸಂದರ್ಭ.ಇಂತಹ ವಾತಾವರಣದಲ್ಲಿ ಕವನ ಸಂಕಲನವನ್ನು ಧೈರ್ಯವಹಿಸಿ ಸ್ವಂತಕ್ಕೆ ಪ್ರಕಾಶಗೊಳಿಸಿದ್ದೇನೆ. ಇದಕ್ಕೆ ಮೂಲಪ್ರೇರಣೆ ಒದಗಿಸಿದವರು ಏಣ್ಗಿ ಬಸಾಪುರದ ಹಾಲುಮತದ ಸನ್ಮಿತ್ರ ಸಿ.ಹನುಮಂತಪ್ಪ.
ಸಾಹಿತ್ಯ ಪ್ರೀತಿಯಿಂದಲೇ ದಾನ…
ಈತ ಬಡತನದೊಂದಿಗೆ ಸಹಬಾಳ್ವೆ ನಡೆಸುವಾತ. ಹೈಸ್ಕೂಲು ಕಟ್ಟೆಯನ್ನಸ್ಟೇ ಹತ್ತಿದಾತ ಮತ್ತು ವಾಙ್ಮಯ ಕರುಣಿ. ತನ್ನ ದುಡಿಮೆಯ ಪಾಲಿನಲ್ಲಿ ಉಳಿತಾಯ ಮಾಡಿದ ಸಾವಿರಾರು ರೂಪಾಯಿಗಳನ್ನು ಸಾಹಿತ್ಯ ಪ್ರೀತಿಯಿಂದಲೇ ದಾನಗೈದಿದ್ದಾನೆ.ಇದೊಂದು ಅಪರೂಪದ ಘಟನೆಯಾಗಿದೆ ಎಂದು ನನಗನ್ನಿಸುತ್ತಿದೆ”.
ಮೇಲಿನ ಮಾತುಗಳನ್ನು ಓದುವಾಗ ಭಾರತದ ಯಾವುದೋ ಮೂಲೆಯಲ್ಲಿರುವ ಹಳ್ಳಿಯೊಂದರ ರೈತರು ಹಗಲಿಡೀ ಹೊಲದಲ್ಲಿ ಕೆಲಸ ಮಾಡಿ, ಸಂಜೆ ಹೊತ್ತು ಬುಡ್ಡೀದೀಪದ ಬೆಳಕಿನಲ್ಲಿ ಸಾಹಿತ್ಯ,ಬರವಣಿಗೆ ಎಂತೆಲ್ಲ ಮಾತನಾಡುವುದೇ ಬಹುದೊಡ್ಡ ರೂಪಕದಂತೆ ಕಾಣಿಸುತ್ತದೆ. ಅವರ ಸನ್ಮಿತ್ರ ಏಣ್ಗಿ ಬಸಾಪುರದ ಹನುಮಂತಪ್ಪನವರ ಮಾತುಗಳನ್ನು ಇಲ್ಲಿ ಕೇಳಿ, “ಏನು ಪ್ರೇರಣೆಯೋ ಏನೋ ನಾ ಕಾಣೆ. ಚಿಕ್ಕಂದಿನಿಂದಲೂ ನನಗೆ ಓದುವ ಗೀಳು.
ಚಿಕ್ಕ ಪೇಪರ್ ತುಂಡು ಸಿಕ್ಕರೂ ಓದುವ ಹಪಾಹಪಿ. ಆಗಿನ್ನೂ ನಾನು ಶಾಲೆಗೆ ಹೋಗಿರಲಿಲ್ಲ.ಆದರೂ ಓದೋದನ್ನು ಕಲಿತಿದ್ದೆ.ಆಗಲೇ ಓದುವ ಗೀಳು ಇತ್ತು. ಸರಿ, ಶಾಲೆಗೆ ತಡವಾಗಿಯಾದರೂ ಸೇರಿ ವಿದ್ಯಾಭ್ಯಾಸ ಪ್ರಾರಂಭಿಸಿದೆ.
ಐದನೇ ತರಗತಿ ಓದಲು ಹಂಪಸಾಗರಕ್ಕೆ 5-6 ಕಿಲೋಮೀಟರು ನಡೆಯುತ್ತಿದ್ದೆ.ಆಗ ನನ್ನ ಓದುವ ಹುಚ್ಚು ಹೆಚ್ಚಾಯ್ತು.ನಾನು ಆಕಸ್ಮಿಕವಾಗಿ ನಮ್ಮೂರ ಪೋಸ್ಟ್ ಆಫೀಸಿಗೆ ಹೋದಾಗ ಗುರುಗಳಾದ , ಸಾಹಿತಿಗಳೂ ಆದ ಉ.ಶಾ.ಬಸವಣ್ಯಪ್ಪರ ಪರಿಚಯವಾಯ್ತು.ಆಗ ಅವರು ಕೈಯಲ್ಲಿ ಪೇಪರ್ ಹಿಡಿದು ಕುಂತಿದ್ದರು. ನನಗೂ ಪೇಪರ್ ಓದುವ ಆಸೆ ಹೆಚ್ಚಾಗಿ ಪೇಪರ್ ಕೈಗೆತ್ತಿಕೊಂಡು ಬಿಟ್ಟೆ.ಅಲ್ಲಿಂದಲೇ ಶುರುವಾಯ್ತು ನೋಡಿ ಈ ನಿರಂತರ ಯಾನ. ಪ್ರತಿದಿನ ಅವರ ಮನೆಗೆ ಹೋಗಿ ಅರ್ಧಗಂಟೆ ಪೇಪರ್ ನೋಡಿ ಬಂದರೆ ಸಮಾಧಾನ” ಎಂದಿದ್ದಾರೆ.
Read also : ದಿನಮಾನದ ಹೆಮ್ಮೆ : ದಿನ ಬಿಟ್ಟು ದಿನ ನೆನಪಾಗುವ ಕಾಟ್ರಹಳ್ಳಿ
ಸರಳ ರೇಖೆಯಂತಹ ಬದುಕಿನ ಈ ಎರಡು ಜೀವಗಳ ಮಾತುಗಳನ್ನು ಇಲ್ಲಿ ಯಾಕೆ ಹೇಳಬೇಕಾಯಿತು ಎಂದರೆ, ಸಾಹಿತ್ಯಿಕ ಸಂದರ್ಭವೊಂದರ ಗರ್ಭೀಕರಿಸುವಿಕೆಯ ಹಿಂದಿರುವ ಭೂಮಿಕೆಯ ಸ್ವರೂಪ ಎಂಥದು ನೋಡಿ. ಒಬ್ಬ ಬರೆಹಗಾರ ಮತ್ತೊಬ್ಬ ಬರೆಹಗಾರನೊಬ್ಬನನ್ನು ಪ್ರೋತ್ಸಾಹಿಸುವ ಅಪರಿಮಿತ ಓದಿನ ಹಸಿವಿನ ವ್ಯಕ್ತಿ.ಇವೆರೆಡರ ಭಾವಗಳ ಮೊತ್ತವಾಗಿ ಕೃತಿಯೊಂದನ್ನು ಜಗತ್ತು ಖರೀದಿಸಿ ಓದಬೇಕು. ಆದರೆ ಹಾಗಾಗುತ್ತಿಲ್ಲ.
ಒಬ್ಬ ಲೇಖಕನಾಗುವ ಕ್ರಿಯೆಯ ಹಿಂದೆ ಎಷ್ಟೊಂದು ಜನರ ಪ್ರಭಾವಗಳಿರುತ್ತವೆ? ವಾಟ್ಸಾಪು, ಫೇಸ್ ಬುಕ್ಕು, ವೆಬ್ ಮ್ಯಾಗಝಿನ್ , ವೆಬ್ಸೈಟು , ಸಾಮಾಜಿಕ ಜಾಲತಾಣಗಳ ಸೋಂಕು ಇಲ್ಲದೆ ,ಯಾವ ಜಾಗತಿಕ ಮಾರುಕಟ್ಟೆಗಳ ಒತ್ತಡಗಳಿಗೂ ಬಲಿಯಾಗದೆ ಉಳಿದ ಇಂಥ ಹಿರಿ ಜೀವಗಳ ಅಕ್ಷರಗಳಿನ್ನೂ ಜವಾರಿತನ ಕಳೆದುಕೊಂಡಿಲ್ಲ.ಇಂಥಾ ಪ್ರಾದೇಶಿಕ ಸೊಗಡಿನ ಲೇಖಕರು ಮತ್ತು ಅಕ್ಷರ ಸಂಗಾತಿಗಳು ಈ ಬಿಸಿಲುನಾಡಿನಲ್ಲಿ ತುಸು ಹೆಚ್ಚಾಗಿಯೇ ಕಾಣಸಿಗುತ್ತಾರೆ.
ಬಂಡಾಯದ ದನಿಯಾಗಿ..
ಬಂಡಾಯದ ದನಿಯಾಗಿ, ಬದುಕಿನ ಕಷ್ಟಸುಖ ಗಳಿಗೆ ಒಡ್ಡಿಕೊಂಡ ಹಿರಿಜೀವ ಮೇಟಿ ಕೊಟ್ರಪ್ಪನವರಿಗೆ ದೇಶಪ್ರೇಮಿಯೊಬ್ಬ ಮನುಷ್ಯಪ್ರೇಮಿಯೂ ಆಗಬೇಕು ಎನ್ನುವ ಹಂಬಲ. ಕೊಲ್ಲುವ,ಕೆಡಹುವ ಕ್ರಿಯೆಯಿಂದ ಕೆಲಕಾಲವಾದರೂ ಹಿಂದೆಗೆಯಬಹುದು ಎಂಬ ಮಹದಾಸೆಯಲ್ಲಿಯೇ ಕವಿತೆ ಬರೆಯುತ್ತಿದ್ದಾರೆ. ಅವರ “ನಿಬ್ಬೆರಗು” ಕವಿತೆಯ ಸಾಲುಗಳಲ್ಲಿ,
ಹೃದಯ ಬೆಸೆಯುವ ಬದಲು ಯಾಕೆ ಕೆಡುಹುವ ಕ್ರಿಯೆಗಳಿಗಿಳಿಯಬೇಕು? ಎಂದು ಅಯೋಧ್ಯೆ ಕಡೆಗೆ ಕೈ ತೋರಿಸುತ್ತಾರೆ.ಈ ದೇಶಕ್ಕೆ ಜಾಗತೀಕರಣ,ಉದಾರೀಕರಣ -ಕೋಮುವಾದೀಕರಣಕ್ಕಿಂತ ಬಹಳ ಮುಖ್ಯವಾಗಿ ಅಂತಃಕರಣ ಇರಬೇಕಿತ್ತು ಎಂದು ಹೇಳುತ್ತಾರೆ.
“ಒತ್ತಡಗಳ ತಡೆದ ಟ್ರಾನ್ಸ್ಫಾರ್ಮರ್ಸ್ ಗಳೇ ಏಕೆ ಬಡರೈತರ ಮೇಲೆ ಬಾಂಬುಗಳಾಗಿ ಸ್ಫೋಟ ಗೊಳ್ಳಬೇಕು?” ಎನ್ನುವ ಮಾತು-ತಲೆಮಾರಿನಿಂದ ತಲೆಮಾರಿಗೆ ಹರಿದು ಅಕ್ಷರಗಳನ್ನು ಜೀವಂತವಾಗಿಡುತ್ತವೆ.
ನಾನು ಇಲ್ಲಿ ರೈತನಾಗಿ ಹುಟ್ಟಿದ್ದೇ ಪರಪಾಟು
ಹಕ್ಕಿಪಕ್ಕಿಯಾಗಿ ಹುಟ್ಟಿದ್ದರೂ
ಆಕಾಶದ ನೀಲಿಯಲ್ಲಿ ಹಾರಾಡಿ ಕೊಂಡು
ನೆಲೆಸಿಕ್ಕ ಕಡೆ ಖಂಡಾಂತರ
ವಲಸೆ ಹೋಗಬಹುದಾಗಿತ್ತು….
ಹೀಗೆ ಬರೆಯುವ ಕವಿಯೊಬ್ಬ ರೈತನಾಗುವುದು ಮತ್ತು ಇಲ್ಲಿನ ಬವಣೆಗಳಿಗೆ ಬಸವಳಿಯುವುದೂ ಸಹ ಮನಮುಟ್ಟುವ ಕ್ರಿಯೆಯಾಗಿ ತೋರುತ್ತದೆ.ಆದರೆ ನೆಲೆಸಿಕ್ಕ ಕಡೆ ಖಂಡಾಂತರ ವಲಸೆ ಹೋಗಬಹುದಿತ್ತು ಎನ್ನುವುದು ಮೇಲ್ನೋಟದ ಮಾತಾಗಿಬಿಡುತ್ತದೆ.
ಒಂದು ಊರಿಗೆ ಬರ ಬಿತ್ತೆಂದು ಮತ್ತೊಂದು ಊರಿಗೆ ಹೊರಟು ನಿಂತ ಸಾಮಾನ್ಯ ರೈತನನ್ನು ಕಳುಹಿಸಿಕೊಡುವ ಒಂದು ಓಣಿಯ ಜನರ ಕಣ್ಣೀರನ್ನು ಬಲ್ಲೆನಾದ್ದರಿಂದ ಆ ದೃಶ್ಯವನ್ನು ಕಲ್ಪಿಸಿಕೊಳ್ಳಬಲ್ಲೆ. ತೀವ್ರ ಹತಾಶೆ, ನಿರಾಸೆಯಲ್ಲಿ ಆಕಾಶದ ನೀಲಿಯಲ್ಲಿ ಹಾರಾಡಿಕೊಂಡು…ವಲಸೆ ಹೋಗಬಹುದಿತ್ತೆಂದರೂ, ಬೇರುಗಳ ಬಿಟ್ಟು ಹೋಗಲು ಒಲ್ಲದೆ ಅಥವಾ ಹೋಗಲೇಬೇಕಾದ ಅನಿವಾರ್ಯತೆಗಳ ರೈತರ ಮುಖಗಳನ್ನೊಮ್ಮೆ ಕಣ್ಣ ಮುಂದೆ ತಂದುಕೊಂಡರೆ ಸಾಕು.
ಕೇರಿ, ಊರು , ಪಟ್ಟಣ, ರಾಜಧಾನಿಗಳನ್ನೂ ದಾಟಿ, ಅಂತಾರಾಷ್ಟ್ರೀಯ ಒಪ್ಪಂದಗಳ ಒಳಸುಳಿಗಳನ್ನು ಬಿಚ್ಚಿಡುವಂತೆ…ಮೇಟಿ ಕೊಟ್ರಪ್ಪನವರು,
ಗ್ಯಾಟು ಒಪ್ಪಂದ ದಾಟುವ ಬಗೆ ಇನ್ಹ್ಯಾಂಗೋ
ಹೊರೆ ಹೊತ್ತು ಬೆಳೆದ ಬೆಳೆಗಳಿಗೆ
ಆಗಿ ದರಗಳು ಅಗ್ಗ
ಉಸಿರಾಡುವ ಕೊರಳಿಗೂ
ಬಿತ್ತು ಹಗ್ಗ….
ಎಂದು ಬರೆಯುತ್ತಲೇ ,
ನಾನು ಮಣ್ಣು ಬೆರೆಯಬೇಕಿದೆ ಕೊನೆಗೆ
ನನ್ನತನವ ಕಳೆದು ಉಳಿಕೆ ಉಳಿಯದ ಹಾಗೆ..
ತುಂಬಾ ಐಡಿಯಾಲಾಜಿಕಲ್ ಆಗಿ ಬರೆಯದೆ ಪೆನ್ನಿಗೆ,ಕೈಗೆ,ಮೈಯ್ಯಿಗೆ-ಮನಸ್ಸಿಗೆ ಈ ನೆಲದ ಮಣ್ಣಿನ ಘಮಲು ಹಚ್ಚಿಕೊಂಡು ಬರೆಯುವ ಮೇಟಿ ಕೊಟ್ರಪ್ಪನವರ ಲೇಖನಿಯಿಂದ ಬರುವ ಪ್ರತಿ ಅಕ್ಷರಗಳಿಗೆ ಹೋರಾಟದ ದನಿಗಳಿವೆ.ಐಡಿಯಾಲಾಜಿಕಲ್ ಗೋಡೆ ಕಟ್ಟಿಕೊಳ್ಳದೆ ಓದುಗನ ಪ್ರವೇಶವನ್ನು ಮುಕ್ತವಾಗಿರಿಸಿ ಬರೆಯುವ ಇಂಥ ಲೇಖಕರ ದಂಡೇ ಬಳ್ಳಾರಿ ಸೀಮೆಯಲ್ಲಿದೆ.ಅಂಥದೊಂದು ಸೀಮೆಯಲ್ಲಿ ನಾನೂ ಹುಟ್ಟಿರುವುದು ಕೂಡ ನನ್ನ ಹೆಮ್ಮೆ.
ಕೊಟ್ರಪ್ಪನವರಿಗೆ ಶುಭವಾಗಲಿ.
ಬಿ.ಶ್ರೀನಿವಾಸ