ಹುಲಿಗಳ ಕುಣಿತ ನೋಡುವುದೇ ಚೆಂದ (Muharram)
ಮನೆಗೆ ಸುಣ್ಣ ಬಳಿಯದೆ, ಹೊಸ ಬಟ್ಟೆಯಿಲ್ಲದೆ ಸಲೀಸಾಗಿ ಸಾಗುವ ಹಬ್ಬವೆಂದರೆ ಮೊಹರಂ. ಬಣ್ಣ ಬಣ್ಣದ ಹುಲಿವೇಷದ ಯುವ ಹುಲಿ,ಮರಿ ಹುಲಿಗಳ ಕುಣಿತ ನೋಡುವುದೇ ಚೆಂದ.
ಕಾಲುಗಳಿಗೆ ಕುಣಿಯಲಾರದ ನೋವು.. (Muharram)
ವಯಸ್ಸಾದರೂ ವರುಷಕ್ಕೊಂದು ಬಾರಿ ಮೈಗೆ ಬಣ್ಣ ಹಚ್ಚಿಕೊಂಡು ಕುಣಿದರೆ ನಾಕು ರೊಕ್ಕನಾದ್ರೂ ಸಿಗಬಹುದು ಎಂಬ ದೂರದ ಆಸೆಯಲ್ಲಿ ಕುಣಿವ ಮುದುಕರ ಕಾಲುಗಳಿಗೂ ಈಗ ಕುಣಿಯಲಾರದ ನೋವು.
ಕಳ್ಳೊಳ್ಳಿ ಬಿಚ್ಚೊಳ್ಳಿ ಆಟ ಶುರು..(Muharram)
ಗೋಲಿ, ರಾಜಾಬಕ್ಕ ಆಡುತ್ತಾ ಅಪ್ಪ ಅವ್ವನ ಉರಿಸುತ್ತಿದ್ದ ಹುಡುಗರು ಸಹ ಮೈಗೆ ಬಿಳಿ ಕೆಂಪು ಬಣ್ಣ ಹಚ್ಚಿಕೊಂಡು, ರಫಿ ಟೈಲರ್ ಅಂಗಡಿಯಲ್ಲಿ ಬಟ್ಟೆ ಕಟ್ ಮಾಡಿಬಿಟ್ಟ ಕಲರ್ ಕಲರಿನ ತುಂಡುಗಳನ್ನು ಜೋಡಿಸಿ ಮಾಡಿದ ಟೋಪಿ ಹಾಕ್ಕೊಂಡು ಬರುವ ಕಳ್ಳೊಳ್ಳಿ ಬಿಚ್ಚೊಳ್ಳಿ ಆಟ ಶುರು ಹಚ್ಚಿಕೊಂಡಿದ್ಧರು.
ಹೋಟೆಲುಗಳ ಮುಂದೆ ಕೈಯೊಡ್ಡಿ ನಿಂತ ಹುಲಿಗಳು ..(Muharram)
ಚ್ಯಾವಂಗಿಯ ಚಿತ್ತಾರದ ರುಚಿ ಮತ್ತು ಅಲ್ಲೊಂದು ಇಲ್ಲೊಂದು ಮಾಂಸದ ಪೀಸುಗಳನ್ನು ಹುಡುಕಾಡಿ ತಿನ್ನುವ ‘ವಗ್ಗಣೆನ್ನ’ದ ಕನಸು ಕಾಣುತ್ತಲೇ ಕುಣಿಯುವ ಹುಡುಗರಿಗೇನೂ ಕಮ್ಮಿಯಿರಲಿಲ್ಲ. ಬಣ್ಣದ ವೇಷ ಧರಿಸಿ ತಟ್ಟಿ ಹೋಟೆಲುಗಳ ಮುಂದೆ ಕೈಯೊಡ್ಡಿ ನಿಂತ ಹುಲಿಗಳಿಗೆ ‘ನೀನ್ ನಮ್ ಮಾರಣ್ಣನ್ ಮಗ ಅಲ್ಲೇನ?’ಎಂದು ಗುರುತಿಸಿ ಕಳುಹಿಸುವವರೂ ಇದ್ದರು.
ಮೈಯ್ಯ ಬಿರಿಯುವ ಚರ್ಮವನ್ನು ತೊಳೆಯುವಂತಿರಲಿಲ್ಲ ..(Muharram)
ಕುಣಿದು ಸುಸ್ತಾಗಿ ಬಣ್ಣದ ಮೈಯ್ಯ ಬಿರಿಯುವ ಚರ್ಮವನ್ನು ತೊಳೆಯುವಂತಿರಲಿಲ್ಲ.ಇಂತಹ ಒಂದು ಮಧ್ಯಾಹ್ನದ ಮೌನದಲ್ಲಿ ಇಡೀ ಜಗತ್ತೇ ತನ್ನ ಮುಂದೆ ಚಿತ್ರವಿಚಿತ್ರವಾಗಿ ಕುಣಿಯುತ್ತಿರುವಂತೆ ಕನಸು ಕಾಣುತ್ತಿದ್ದರು.
ಇಂತದ್ದೆಲ್ಲ ಮುಗಿದು ಸಂಜೆಯಾಗುತ್ತಿದ್ದಂತೆಯೆ ಹುಲಿಗಳು ಕಲೆಕ್ಷನ್ ಆಧಾರದ ಮೇಲೆ ಕುಡಿದು ಚಿತ್ ಆಗಿ ಮತ್ತಷ್ಟು ಕುಣಿಯತೊಡಗುವುವು. ನಂತರ ದೇವರು ಸಾಯಲು ಹೊರಡುವಾಗಲೂ ಮೆರವಣಿಗೆಯಲ್ಲೂ ಅದೇ ಕುಣಿತ. ದೇವರು ಸತ್ತಿದ್ದಕ್ಕೋ ಇಲ್ಲವೇ ಯಾವ ಸಂತೋಷಕ್ಕೋ ಒಂದೂ ಗೊತ್ತಾಗುತ್ತಿರಲಿಲ್ಲ.
ರಾತ್ರಿ ಕೆಂಡದ ಹೊಂಡ ಕಣ್ತುಂಬಿಕೊಂಡರೆ ಎಷ್ಟೋ ದಿನಗಳವರೆಗೆ ಕಣ್ಣಲ್ಲೇ ನಿಗಿನಿಗಿ ಕೆಂಡ ಇರುವಂತೆ ತೋಚುತ್ತಿತ್ತು. ಊರಿನ ಬುಡುಬುಡುಕಿ ಕಾಲುವಿಯೆಂಬ ಓಣಿಯಲ್ಲಿ ಒಂದಿಷ್ಟು ವಿಶಾಲವಾದ ಅಂಗಳವಿತ್ತು. ಸಾಬರ ಗುಡಿಯ ಹಿಂದೆಯೇ ಪ್ಯಾಟಿ ಬಸಣ್ಣನ ಗುಡಿಯಿತ್ತು. ಇಂತದೊಂದು ಅಂಗಳದಲ್ಲಿ ದೊಡ್ಡ ಗುಂಡಿ ತೆಗೆದು ಹೊಂಡ ಮಾಡಿ ಅದರಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹಾಕಿ ಬೆಂಕಿ ಉರಿಸುತ್ತಿದ್ದರು.
ಕೆಂಡದ ಝಳ ಮನುಷ್ಯರ ಬದುಕನ್ನು ನೆಪಿಸುತ್ತೆ .. (Muharram)
ಧಗ ಧಗನೆ ಉರಿಯದೆ ಮೆಲ್ಲಗೆ ಸಣ್ಣಗೆ ಉರಿಯುವ ಹೊಂಡ ಮಧ್ಯರಾತ್ರಿಯಷ್ಟೊತ್ತಿಗೆ ಚಂಡ ಪ್ರಚಂಡ ಕೆಂಡಗಳ ಬೆಳಕು ಸೂಸುತ್ತಿತ್ತು. ಕೆಂಡದ ಝಳ ಮನುಷ್ಯರ ಬದುಕನ್ನು ನೆಪಿಸುವಂತಿರುತ್ತಿತ್ತು. ಬಂದ ಜನರು ಉರಿವ ಹೊಂಡಕ್ಕೆ ಉಪ್ಪು ಹಾಕಿ ಏನನ್ನೋ ಬೇಡಿಕೊಳ್ಳುತ್ತಿದ್ದರು.ಅವರ ಮನಸ್ಸಿನ ತುಮುಲಗಳ ಹಾಗೆ ಚಟ್.. ಛಟ್..ಚಟ್ ಚಟ್ ಎಂದು ಉಪ್ಪು ಕೂಡ ಸವುಂಡು ಮಾಡುತ್ತಿತ್ತು.
ಬುಡುಬುಡುಕಿ ಕಾಲುವಿ ಕಡೀಗೆ ಯಾವಾಗ ಬೇಕು ಆವಾಗ ಈ ಕಡೆಗೆ ಜನರೇನೂ ಬರ್ತಿದ್ದಿಲ್ಲ. ಅಸಲಿಗೆ ಈ ಓಣಿಗೆ ಆ ಹೆಸರು ಯಾವಾಗ ಯಾವ ಮಹಾನುಭಾವರು ಇಟ್ಟರೋ ಏನೋ? ಓಣಿಯ ಹೆಣ್ಣುಮಕ್ಕಳು ಭಲೇ ಜೋರಿದ್ದಾರೆಂದು ತಿಳಿದಿತ್ತು. ಇಲ್ಲಿನ ಹೆಣ್ ಮಕ್ಕಳು ಗಂಡಸರನ್ನು ‘ಇಟ್ಟು’ಕೊಳ್ಳುವರೆಂದೂ, ಬಾಯಿ ಬೊಂಬಾಯಿಯೆಂದೂ ಮತ್ತು ಗಂಡಸರನ್ನು ಬುಡುಬುಡುಕಿ ಆಡಿಸ್ದಂಗ ಆಡಿಸ್ತಾರೆಂದು ಈ ಹೆಸರು ಬಂದಿತಂತೆ.
ಇಂಥದ್ದೇ ಒಂದು ಮೊಹರಮ್ಮಿನ ಹಬ್ಬದಂದು ಆಕೆ ಮಧ್ಯರಾತ್ರಿಯಾದರೂ ಹಿಡಿ ಉಪ್ಪಿಗೆ ಕಾಸು ಸಿಗದೆ ಪರಿತಪಿಸಿದ್ದಳು. ಮಾರಿಕೊಂಡ ಮೈಯ್ಯನ್ನೇ ಮತ್ತೆಷ್ಟು ಬಾರಿ ಮಾಡಿಕೊಳ್ಳುವುದು ಎಂಬ ನಿರಾಶೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಹಂಗೂ ಇರಲಿಲ್ಲ. ಅವಳ ಸುಕ್ಕುಗಟ್ಟಿದ ಕೈಯಲ್ಲಿ ಯಾವ ಬುಡುಬುಡುಕೀಯೂ ಇರಲಿಲ್ಲ. ನಿಶಬ್ದದಲ್ಲಿ ಅವಳ ಬಿಕ್ಕುಗಳು ಹೊರಗೆ ನೀರಾಗಿ ಬರುವುದಕ್ಕೂ ಮುನ್ನವೆ ಆವಿಯಾಗಿ ಹೋಗುತ್ತಿದ್ದವು.
ಕೆಂಡ ಹಾಯುವವರು ಹಾಯುತ್ತಿದ್ದರು. ನಿಂತು ನೋಡುವ ಜನ ನಿಟ್ಟುಸಿರುಗೈಯುತ್ತಿದ್ದರು. ಬೆಳ್ಳಂಬೆಳಿಗ್ಗೆಯೇ ನನ್ನೇಸಾಬು ನಿಗಿನಿಗಿ ಕೆಂಡವನ್ನು ಹಿಡಿಯಲ್ಲಿ ಹಿಡಿದು ಕಣ್ಣುಮುಚ್ಚಿ ದೇವನನ್ನು ಧ್ಯಾನಿಸಿ ಹಿಂದೂ ಮುಸ್ಲಿಮರೆನ್ನದೆ ಸೆರಗೊಡ್ಡಿ ನಿಂತವರ ಸೆರಗಿಗೆ ಹಾಕುವ ಕ್ರಿಯೆಯನ್ನು ಮಂತ್ರಮುಗ್ಧನಂತೆ ನೋಡುತ್ತಿದ್ದ ದಿನಗಳು ನೆನಪಾಗುತಿವೆ.
ಮನೆಗೆ ಹೋಗಿ ಮುಚ್ಚಿದ ಸೆರಗು ಬಿಚ್ಚಿ ನೋಡಲಾಗಿ ನಿಗಿನಿಗಿ ಕೆಂಡಗಳು ನಗುವ ಹೂಗಳಾಗಿದ್ದವು ಎಂದು ಹೇಳಿದವರ ನಲಿವಿನ ಮೊಗಗಳ ನೆನಪೂ ಮಾಸಿ ಹೋಗಿಲ್ಲ. ಆದರೆ, ಬುಡುಬುಡುಕೀ ಕಾಲುವಿಯ ಸಂಜೆಗಳಲಿ ಈ ಬದಿಗೆ ಗಿರಾಕಿ ಹುಡುಕುತ್ತಾ ನಿಂತವಳ ,ಇನ್ನೊಂದು ಬದಿಯಲ್ಲಿಯೇ ಅಪ್ಪನ ಹುಡುಕುತ್ತ ನಿಂತ ಮುಗ್ಧ ಮಕ್ಕಳ ಚಿತ್ರಗಳೇಕೋ ಮನಸ್ಸಿನಿಂದ ಹೋಗುವಲ್ಲುದು. ಉರಿದು ಬೂದಿಯಾದ ಕೆಂಡದ ಹೊಂಡ ಎಷ್ಟೋ ದಿನಗಳವರೆಗೆ ಏನನ್ನೋ ಹೇಳುತ್ತಿರುವ ಹಾಗೆ ಭಾಸವಾಗುತ್ತಿತ್ತು.
ಧಗಧಗನೆ ಉರಿದ ಕೆಂಡಗಳ ಬಿಸಿಗೆ ಆವಿಯಾಗಿ ಹೋದ ಅವಳ ಬಿಕ್ಕುಗಳು ಮೊನ್ನೆ ದಿನ ಧೋ… ಎಂದು ಒಂದೇ ಸಮನೆ ಸುರಿದವು .
ಬಿ.ಶ್ರೀನಿವಾಸ