Kannada News | Dinamaanada Hemme | Dinamaana.com | 09-07-2024
1992ರಲ್ಲಿ ಪ್ರಕಟವಾದ ಪರಶುರಾಮ ಕಲಾಲ್ ರ “ಬೇಲಿಯಾಚೆಯ ಹೂವುಗಳು”ಕಾವ್ಯ ಸಂಕಲನ ಕೂಡ ಮೇಷ್ಟ್ರು ಎಸ್.ಎಸ್. ಹಿರೇಮಠರ ಸಮತಾ ಪ್ರಕಾಶನದ ಮೂಲಕ ಬಿಡುಗಡೆಯಾಗಿತ್ತು.
ನಮ್ಮೆಲ್ಲರ ಮನಸ್ಸಿನ ಪ್ರತಿನಿಧಿ (Parashuram Kalal)
ಕಲಾಲರ ಕಾವ್ಯ , ನಮ್ಮೆಲ್ಲರ ಮನಸ್ಸಿನ ಪ್ರತಿನಿಧಿ , ಆದರ್ಶ, ಸಂಕಟಗಳ ಅಭಿವ್ಯಕ್ತಿ ಕೂಡ ಹೌದು ಎನ್ನುವ ಹಿರೇಮಠರ ಮಾತು ಮತ್ತು ಕವಿ, ಕಲಾವಿದ , ಬರೆಯುವ ಯುವಕರೊಂದಿಗೆ ಮೇಷ್ಟ್ರರ ಸಾವಯವ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ.
ಬಳ್ಳಾರಿ ಸೀಮೆಯ ಬಹುತೇಕ ಬಂಡಾಯ ಕವಿಗಳಂತೆ, ಕವಿತೆಗಳು ವಾಚ್ಯ, ಗದ್ಯ ಎಂಬ ಮಾತುಗಳಿಂದ ಹೊರತಾಗಿಲ್ಲ.ಆದರೆ ಅದಕ್ಕೆ ಕವಿ ಪರಶುರಾಮ್ ಕಲಾಲ್ ಉತ್ತರಿಸಿದ ರೀತಿ ನೋಡಿ-
“ನೀವು ಕೇಳುವಿರಿ
ನಿನ್ನ ಕವನ ಯಾಕೆ ಸೊರಗಿವೆ
ನಾನು ಹೇಳುವೆ
ಅವು ನನ್ನ ಮಕ್ಕಳು”
ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು…. (Parashuram Kalal)
ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹಡಗಲಿ ಸುತ್ತಲಿನ ಬರಪೀಡಿತ ಊರುಗಳಲ್ಲಿ ಬಡತನ ತಾಂಡವವಾಡುತ್ತಿತ್ತು. ರಾತ್ರಿ ಧರ್ಮಸ್ಥಳ ಬಸ್ಸಿಗೆ ಕೂಲಿಕಾರರ ದಂಡೆ ತುಂಬಿರುತ್ತಿತ್ತು .ಹಳೆ ಡಬರಿ, ಚಾದರಗಳ ಲಗೇಜಿನೊಂದಿಗೆ ಅಳುಮೋರೆಯ ಪೀಚಲಿನಂತಹ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು….ಇಂತಹ ಚಿತ್ರಗಳು ಇಲ್ಲಿ ಸರ್ವೇ ಸಾಮಾನ್ಯ.
ಕವನ -ನನ್ನ ಮಕ್ಕಳು (Parashuram Kalal)
ಇಂತದ್ದೇ ಊರೊಂದರ ಪರಶುರಾಮ್ ಕಲಾಲರ ಕಾವ್ಯ , ವೈಚಾರಿಕ ಕ್ರಾಂತಿಗೆ ತೆರೆದುಕೊಂಡರೂ ಕಾವ್ಯದ ಲಯ, ಸೋ ಕಾಲ್ಡ್ ರೂಪಕ, ಉಪಮೆಗಳಿಲ್ಲದೆ ಸೊರಗಿದಂತೆ ಕಾಣಿಸಿರಬೇಕು.ಅದಕ್ಕೆ ಕಲಾಲರು,- ಅವು ನನ್ನ ಮಕ್ಕಳು ಎಂದು ಹೇಳುತ್ತಾರೆ. ಕವಿತೆ ಮತ್ತು ಹೋರಾಟಗಳನ್ನು ಹೊದ್ದು ಜೀವಿಸುವವರಿಂದ ಮಾತ್ರ ಇಂಥ ಮಾತು ಬರಲು ಸಾಧ್ಯ.
ಅದೇ ಕವಿತೆಯಲ್ಲಿ,
ಮತ್ತೆ ಹೇಳುವಿರಿ-
ಘೋಷಣೆಗಳು ಕಾವ್ಯವಲ್ಲ
ನಾನು ಮತ್ತೆ ಹೇಳುವೆ
ಕಾವ್ಯಗಳು ನಮ್ಮ ಘೋಷಣೆಗಳು.
ಎಂದುತ್ತರಿಸುತ್ತಾರೆ.
ಬೀದಿಯ ಗೋಡೆಗಳ ಮೇಲೆ, ಸರ್ಕಾರಿ ಶಾಲೆ, ಕಾಲೇಜಿನ, ಕಚೇರಿಗಳ ಕಂಪೌಂಡುಗಳ ಮೇಲೆ ಕೆಂಪು ಜಾಜಿನಿಂದ ಬರೆದ ರಕ್ತದಂತಹ ಅಕ್ಷರಗಳನ್ನು ಓದುವ ನಮ್ಮಂತವರನ್ನೂ ಚಳುವಳಿಗಳಿಗೆ ಧುಮುಕುವಂತೆ ಮಾಡಬಲ್ಲವಾಗಿದ್ದವು. ಅವು ಘೋಷಣೆಗಳೇನೋ ನಿಜ. ಆದರೆ ಆ ಘೋಷಣೆಗಳೇ ಕಾವ್ಯವಾಗಿದ್ದನ್ನು ನಾವು ಮರೆಯುವಂತಿಲ್ಲ.
ಬಂಡಾಯ ಕವಿತೆ ಎಂದರೆ ಏನೆಂದು ವಿವರಿಸುವ ಅಗತ್ಯವೇ ಇಲ್ಲಿನ ಜನರಿಗೆ ಬರಲಿಲ್ಲ.ಯಾಕೆಂದರೆ ಬದುಕೇ ಬಹುದೊಡ್ಡ ಬಂಡಾಯವಾಗಿ ಹೋದಾಗ ,
ಬೇಡವೆಂದರೂ
ನುಗ್ಗುತ್ತಿದೆ ಕಾವ್ಯದೊಳಗೆ
ರಕ್ತ, ದುಃಖ
ಹಸಿದ ಮಕ್ಕಳ ಕಂಗಳು…
ಹೀಗೆ ಬರೆಯುತ್ತಲೇ,
ಹೇಗೆ ತಪ್ಪಿಸಿಕೊಳ್ಳಲಿ ?
ಎಂದೂ ಕವಿ ಕೇಳುತ್ತಾನೆ.
ಕವಿತೆ ಎಂದರೆ ಓದಿದವರಿಗೆ ಒಂದು ಬಗೆಯ ಸಂತೋಷವನ್ನೋ ಅಥವಾ ಖುಷಿಯನ್ನು ಕೊಡುವಂತಿರಬೇಕು ಎಂಬ ಮಿಥ್ ಗಳನ್ನಾಗಲೇ ಬಂಡಾಯ ಸಾಹಿತ್ಯದ ಸಿದ್ಧಲಿಂಗಯ್ಯ,ಬರಗೂರು, ದರ್ಗಾ, ಸುಕನ್ಯಾ, ಅಲ್ಲಮಪ್ರಭು ಬೆಟದೂರು, ಪಾತ್ರೋಟ, ಶಂಕರ ಕಟಗಿ, ಸರಜೂರಂಥವರ ಕಾವ್ಯ ಒಡೆದು ಹಾಕಿತ್ತು.
ಕಾವ್ಯ ಭಾಷೆಯು ಜನಭಾಷೆಯೂ ಆಗಿ ಅನುಭವಕ್ಕೆ ಹೊಸ ಆಲೋಚನೆ, ವಿಚಾರಗಳಿಂದ ಹೊಸ ಅರಿವಿನ ಹರವು ಬಂದು ವಿಸ್ತಾರವಾಯಿತು. ಆದರೆ ಇಲ್ಲಿ ಗಮನಿಸಬೇಕಾದ್ದು ಏನೆಂದರೆ, ಪ್ರತಿಯೊಬ್ಬ ಕವಿಗೂ ತನ್ನದೇ ಆದ ಅಭಿವ್ಯಕ್ತಿಯ ಭಾಷಾ ಕ್ರಮವಿರುತ್ತದೆ.ಆದರೆ ತೊಂಭತ್ತರ ದಶಕದಲ್ಲಿ ಬರೆಯಲು ಆರಂಭಿಸಿದ ಈ ಭಾಗದ ಕವಿಗಳಾದ ಪರಶುರಾಮ್ ಕಲಾಲ್,ಹುಲಿಕಟ್ಟಿ ಚೆನ್ನಬಸಪ್ಪ,ಡಿ.ಬಿ.ಬಡಿಗೇರ,ವೆಂಕಟೇಶ್,ಪೀರ್ ಬಾಷಾ,ಖಾದರ್ ಬಾಷರನ್ನು ಒಳಗೊಂಡಂತೆ ಬಹುತೇಕರ ಬಂಡಾಯದ ಕವಿತೆಗಳು ಒಂದು ಕಾಲದಲ್ಲಿ ಏಕತಾನತೆಯ ಪರಿಭಾಷೆಯ ಕ್ರಮಗಳಿಂದ ಹೊರಬರಲು ಸ್ವಲ್ಪ ತಡವಾಯಿತೆನ್ನಬಹುದು. ಅದರಿಂದ ಹೊರಬಂದವರ ಪೈಕಿ ಬಹುಶಃ ಪೀರ್ ಬಾಷಾ ಭಿನ್ನ ಹಾದಿ ತುಳಿದಿರುವುದು ಗಮನಾರ್ಹ.
Read also : ದಿನಮಾನ ಹೆಮ್ಮೆ : ಚಳುವಳಿಗಳ ಮಳೆಗಾಲದಲ್ಲಿ ಉದಯಿಸಿದ ಕವಿ – ಹುಲಿಕಟ್ಟಿ ಚನ್ನಬಸಪ್ಪ
ಈ ಮೊದಲೇ ಹೇಳಿದಂತೆ ಕಲಾಲರ ಬದುಕಿನಲ್ಲಿ, ಕಾವ್ಯ ಮತ್ತು ಬದುಕು, ಒಂದರೊಳಗೊಂದು ಬೆಸೆದ ರೀತಿಯಲ್ಲಿವೆ. ಎಲ್ಲ ಚಳುವಳಿಗಾರರು ಬರಹಗಾರರಲ್ಲ.ಆದರೆ ಬರೆಹಗಾರನೊಬ್ಬ ಚಳುವಳಿಗಾರನೂ ಆಗಿದ್ದರೆ, ಎಂಬುದಕ್ಕೆ ಕಲಾಲರ ಈ ಕಾವ್ಯದ ಸಾಲುಗಳೇ ಎಲ್ಲವನ್ನೂ ಹೇಳಿಬಿಡುತ್ತವೆ .
ಬೇಡವೆಂದರೂ
ನುಗ್ಗುತ್ತವೆ ಕಾವ್ಯದೊಳಗೆ
ರಕ್ತ, ದುಃಖ
ಹಸಿದ ಮಕ್ಕಳ ಕಣ್ಗಳು
ಹೇಗೆ ತಪ್ಪಿಸಿಕೊಳ್ಳಲಿ ಹೇಳಿ?
ಮನುಷ್ಯರಂತೆ ಮಾತಾಡಿ!
ಕೊನೆಯ ಸಾಲು ಓದುಗನ ಎದೆಗೆ ಕೇಳುವ ನೇರಪ್ರಶ್ನೆಯಾಗಿದೆ.
ಬಂಡಾಯ ಕಾವ್ಯದಲ್ಲಿ ,ರಕ್ತ,ಗಾಯ,ಆಕ್ರೋಶಗಳು ಜಾಸ್ತಿಯಾಯ್ತಲ್ಲ ಎನ್ನುವವರಿಗೆ ಕಲಾಲರು,
ಕೋವಿಯನ್ನು
ಮೀರಿ ಹೊರಟ ಹೋರಾಟಗಳು
ಕವಿಯನ್ನು
ಮೀರಿ ಬಂದ ಹಾಡುಗಳು
ಎಂದುತ್ತರಿಸುತ್ತಾರೆ.
ಮೌನವಾಗಿರುವುದು ಕವಿಗೆ ಸಾಧ್ಯವಿಲ್ಲ..
ವರ್ತಮಾನದ ಒತ್ತಡಗಳಿಗೆ ಮೌನವಾಗಿರುವುದು ಕವಿಗೆ ಅದರಲ್ಲೂ ಬಂಡಾಯ ಕಿವಿಗೆ ಸಾಧ್ಯವಿಲ್ಲದ ಮಾತು. ಪರಶುರಾಮ ಕಲಾಲರು ತಮ್ಮ”ಬೇಲಿಯಾಚೆಯ ಹೂವುಗಳು”ಹೊರತಂದು ಈಗಾಗಲೇ ಸರಿ ಸುಮಾರು ಮೂರು ದಶಕಗಳೇ ಸರಿದು ಹೋಗಿವೆ.ಆದರೆ ಅವರ
‘ಬೀದಿಯ ಹಾಡು’ಕವಿತೆಯ ಸಾಲುಗಳಲ್ಲಿ,
ರಸ್ತೆಯಲ್ಲಿ
ನಜ್ಜುಗುಜ್ಜಾಗಿದ್ದ ಡಬರಿ
ದುಃಖಿಸಿತು
ಹಸಿದ ಮಕ್ಕಳಿಗೆ ಅನ್ನ ಬೇಯಿಸುತ್ತಿದ್ದೆ
ಹಸಿದ ಹೊಟ್ಟೆ
ಮತ್ತಾವ ಧರ್ಮ ತುಂಬಿಸುವುದು ಹೇಳಿ?
ಗಾಯಗೊಂಡ ಇಟ್ಟಿಗೆ ಚೂರು
ಚೀರಿತು
ನಾನು ಮನೆಗಳನ್ನು ಗಟ್ಟಿಗೊಳಿಸುತ್ತಿದ್ದೆ ;ಬೀದಿಗೆಳೆದು
ಚೂರುಚೂರಾಗಿಸಿ
ಯಾರ ಸಮಾಧಿ ಕಟ್ಟಬೇಕೆನ್ನುತ್ತೀರಿ ?
ವರ್ತಮಾನ ಭಾರತದ ಶಬ್ದಚಿತ್ರಗಳು (Parashuram Kalal)
ಪ್ರತಿಭಾವಂತನಾದ ಕವಿ ಕಲಾಲರು, ತನ್ನ ಕಾಲವನ್ನು ಮೀರಿ ನಿಲ್ಲುವ ಸತ್ಯವನ್ನು ಹೀಗೆ ಅಭಿವ್ಯಕ್ತಗೊಳಿಸಬಲ್ಲ.ಕಲಾಲರ ಕವನಗಳು ಸೃಷ್ಟಿಸಿದ ವರ್ತಮಾನ ಭಾರತದ ಶಬ್ದಚಿತ್ರಗಳು ಇಂದಿನ ಸಂದರ್ಭಕ್ಕೂ ಅರ್ಣವೆಂಬೊಲ್ ಎಂಬಂತೆ ತೋರುತ್ತವೆ.
ಬಂಡಾಯ ಕಾವ್ಯ ಸೊರಗಿತು (Parashuram Kalal)
ಕವಿ, ತನ್ನ ಕಾವ್ಯದಲ್ಲಿ ತನ್ನ ಆಂತರಿಕ ತುಮುಲಗಳನ್ನು ,ಭಾವನೆಗಳನ್ನು ,ಚಿಂತನೆಗಳನ್ನು ನೇರವಾಗಿ ಹೇಳಿದ್ದರ ಪರಿಣಾಮ ಕಾಲಾಂತರದಲ್ಲಿ ಬಂಡಾಯ ಕಾವ್ಯ ಸೊರಗಿತು ಎಂಬ ಮಾತಿದೆ.
ಬಂಡಾಯ ಕವಿಗಳು ತಮ್ಮ ಅನುಭವಗಳಿಗೆ Artistic vision ಕೊಡದಿರುವ ಕಾರಣ , ದೃಶ್ಯ ಪ್ರತಿಮೆಗಳು ಸೊರಗಿದಂತಾಗಿ ಕವಿತೆಯ ಆಯಸ್ಸು ಬಹು ಕಡಿಮೆಯಾಗಿ ಬಿಡುತ್ತೆ.
ಕಾಲದ ಅಂತರವೇ ಇರಲಿ, ಪ್ರತಿಭಾವಂತ ಕವಿಗೆ ಅದು ಸಮಸ್ಯೆಯಲ್ಲ.ಆತ ಜೀವಲಯವನ್ನು ತನ್ನ ಕಾವ್ಯದಲ್ಲಿ ತರಬಲ್ಲ.ಈ ತೆರನಾದ ಪ್ರಯತ್ನಗಳು ಸಹ ಕಲಾಲರ ಈ ಸಂಕಲನದಲ್ಲಿವೆ.
ಸಾಮಾಜಿಕ, ಸಾಮುದಾಯಿಕ ,ಕೌಟುಂಬಿಕ ಹಾಗೂ ವೈಯಕ್ತಿಕವಾದ ದುಃಖವನ್ನು ಹೇಳಿಕೊಂಡ ಮಾತ್ರಕ್ಕೆ ಕಾವ್ಯವಾಗುವುದಿಲ್ಲ ಎಂಬ ಮಾತಿಗೆ ಉತ್ತರವೋ ಎಂಬಂತೆ,
ನಾನು ಮತ್ತೆ ಹೇಳುವೆ
ಕಾವ್ಯಗಳು ನಮ್ಮ ಘೋಷಣೆಗಳು
ಹೇಳಿ
ನಾನು ನಿಮ್ಮಂತೆ ಕವಿ
ಶುದ್ಧ ಕಲೆಯ ಕಾವ್ಯ ಬರೆಯಬೇಕು
ಹೇಗೆ ಸಾಧ್ಯ?
ಅದೇ ಕವಿತೆಯ ಮುಂದಿನ ಸಾಲುಗಳಲ್ಲಿ ಅವರು ಉತ್ತರಿಸುತ್ತಾರೆ
ಮೊದಲು
ಉರಿಯುವ ಜ್ವಾಲೆ
ಹರಡದಂತೆ
ನನ್ನ ಗುಡಿಸಲು ಉಳಿಸಿಕೊಳ್ಳಬೇಕು
ಬೆಂಕಿ ಹತ್ತಿದ ನಾಡಿಗೆ
ನೀರೆರಚಬೇಕು
ಹಸಿದ ಮಕ್ಕಳ ಹೊಟ್ಟೆ
ತಂಪುಗೊಳಿಸಬೇಕು…
ಕವಿ,ತನ್ನ ಬದ್ಧತೆಯನ್ನು ಅನುಭವದ ಮೂಸೆಯಲ್ಲಿ ಶಬ್ದಚಿತ್ರ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.
ಬಂಡಾಯ ಕಾವ್ಯದಲ್ಲಿ ಗದ್ಯವಿದೆ ಎಂದು ಮೂಗು ಮುರಿಯುವವವರು ಇಂದಿಗೂ ಇದ್ದಾರೆ. ಆದರೆ, ಗದ್ಯದಂತಹ , ಮಾತುಗಳಲ್ಲಿ ಅಂತರ್ಲಯವೊಂದು ಸದಾ ಹರಿಯುತ್ತಿರುತ್ತದೆ.ಅದನ್ನು ನೋಡಲು ಬರೀ ಕಣ್ಣಗಳಿಷ್ಟಿದ್ದರೆ ಸಾಲದು, ದೃಷ್ಟಿಯಿರಬೇಕು. ಪರಶುರಾಮ ಕಲಾಲ್ ಮತ್ತು ಆ ಕಾಲದ ಬಹುತೇಕರ ಕವಿತೆಗಳನ್ನು ಇಂದು ಓದುವವರಿಗೆ ಈ ಮಾತು ಅನ್ವಯಿಸುತ್ತದೆ.
ಬಿ.ಶ್ರೀನಿವಾಸ