Kannada News | Dinamaanada Hemme | Dinamaana.com | 12-07-2024
ಪ್ರಜಾಶಕ್ತಿಯೇ ಮೇಲುಗೈ (Ismail Eligar)
ಹರಪನಹಳ್ಳಿ ಎಂಬ ದೊಡ್ಡ ಹಳ್ಳಿ ಅದೆಷ್ಟು ಜನರಿಗೆ ಆಸರೆ ನೀಡಿದೆ ಎಂಬುದನ್ನು ಯೋಚಿಸಿದರೆ ಆಶ್ಚರ್ಯವಾಗುತ್ತದೆ.
ಇಲ್ಲಿನ ಜನರ ಸಹಜ ಮಾತು,ಕತೆ,ಕವಿತೆಗಳಿಗೂ ಅಂತಹ ಅಂತರವೇನಿಲ್ಲ.ಜಗತ್ತು ಇಪ್ಪತ್ತೆರಡನೆಯ ಶತಮಾನದತ್ತ ದಾಪುಗಾಲು ಹಾಕುತ್ತಿದ್ದರೂ “ಇಲ್ಲಿ ಸ್ವಲ್ಪ ತಿರುಗಿ ..”ಎಂದು ಹನ್ನೆರೆಡನೆ ಶತಮಾನದ ಶರಣರ ಕಾಯಕಜೀವಿಗಳ ಕಥನವನ್ನು ಹೇಳುವ ಹಲವಾರು ದಾರಿಗಳಿವೆ. ಅದೇನು ಕಾರಣವೋ ಏನೋ…ಈ ಊರಿನಲ್ಲಿ ರಾಜಕೀಯದ ರಾಜ್ಯಶಕ್ತಿಗಿಂತ ಪ್ರಜಾಶಕ್ತಿಯೇ ಮೇಲುಗೈ ಸಾಧಿಸಿದೆ.
ನನ್ನ ಕವನದ ಸಾಲುಗಳು
ದುಡಿವ ಜನರ ಬೆವರ ಹನಿಗಳು:
ಹನಿ ಬೆವರಿನಲ್ಲಿ
ನನ್ನವರು ಕೋಟಿ ಸೂರ್ಯರು;
ಅವರೊಮ್ಮೆ
ಗಟ್ಟಿಯಾಗಿ ಕೂಗಿದರೆ ಸಾಕು,
ಅಂಗವಿಕಲರಾಗುತ್ತಾರೆ
ಇಲ್ಲಿನ ಜೀವವಿರೋಧಿಗಳು
ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿ (Ismail Eligar)
ಹೀಗೆ ಗಟ್ಟಿಯಾಗಿ ಹೇಳುವವರನ್ನು, ಖಂಡಿತ ಎಡವಾದಿ ಬದ್ಧತೆಯ ಮತ್ತು ಹೋರಾಟಗಳ ಹಾದಿಯಲ್ಲಿ ಸಾಗುತ್ತಿರುವ ಕವಿ ಎಂದು ಸುಲಭವಾಗಿ ಊಹಿಸಬಹುದು.
ಹರಪನಹಳ್ಳಿಯ ಹಲವು ಪ್ರಗತಿಪರ ಚಿಂತಕರ ಪೈಕಿ , ದುಡಿಯುವ ಜನರ ಹನಿ ಬೆವರಿನಲ್ಲಿ ಸೂರ್ಯನನ್ನು ಕಾಣುವ ಕವಿಯ ಕಾಣ್ಕೆ ಇಸ್ಮಾಯಿಲ್ ಎಲಿಗಾರರ ಪ್ರತಿಭೆಗೆ ಮತ್ತು ಬದ್ಧತೆಗೆ ಸಾಕ್ಷಿಯಂತಿದೆ.
“ಲಿಂಗಾರ್ಚನೆ ಮಾಡುವ ಮಹಿಮರೆಲ್ಲ ಸಲುಗೆಯಿಂದ ಒಳಗೈದಾರೆ.ಆನು ದೇವಾ ಹೊರಗಣವನು, ನಿಮ್ಮ ನಾಮವಿಡಿದ ಅನಾಮಿಕ ನಾನು.ಸಂಬೋಳಿ ಸಂಬೋಳಿ ಎಂದು ಇಂಬಿನಲ್ಲಿ ಇದ್ದೇನೆ “ಚಳುವಳಿಯ ಸಂಕೇತದಂತೆ ಇರುವ ಬಸವಣ್ಣನವರ ಈ ವಚನ ಈ ನೆಲದಲ್ಲಿ ಸದಾ ಪಿಸುಗುಟ್ಟುವಂತೆ ಕೇಳಿಸುತ್ತದೆ.
ಸಮತಾವಾದವನ್ನೇ ಉಸಿರಾಡುವ ಮೇಷ್ಟ್ರು (Ismail Eligar)
ಅಸ್ಪೃಶ್ಯರು ಊರ ಒಳಗೆ ಬರುವ ಸಂದರ್ಭದಲ್ಲಿ ಬಳಸುವ ಸಂಬೋಳಿ ಪದವನ್ನೇ ಬಸವಣ್ಣ ಬಳಸಿದ್ದಾರೆ. ಬಸವಣ್ಣ ಶಿವಾಲಯದ ಹೊರಗೆ ಅಸ್ಪೃಶ್ಯ ರ ಜೊತೆ ನಿಂತು ಅವರಿಗೆ ಮಾನಸಿಕ ಧೈರ್ಯ ತುಂಬುವ ಮತ್ತು ಒಳಗಿರುವ ಜನರ ಟೊಳ್ಳನ್ನು ಬಯಲಿಗೆಳೆಯುವ ಕೆಲಸವನ್ನು , ಹರಪನಹಳ್ಳಿಯ ಕೆಲ ಸಂಗಾತಿಗಳು ತಮ್ಮ ಬರೆಹ ಮತ್ತು ಬದುಕಿನ ಮೂಲಕ ಮಾಡುತ್ತಿದ್ದಾರೆ.
Read also : ದಿನಮಾನಹೆಮ್ಮೆ: ಬಂಡಾಯದ ಕೂಗು:ಡಿ.ಬಿ.ಬಡಿಗೇರ ಮಾಸ್ತರ
ಅಂತಹ ಸಂಗಾತಿಗಳ ಪೈಕಿ ಇಸ್ಮಾಯಿಲ್ ಎಲಿಗಾರ್ ಮೇಷ್ಟ್ರು ಕೂಡ ಒಬ್ಬರು. ಕವಿಗೋಷ್ಟಿಯಿರಲಿ, ರಾಜಕಾರಣಿಗಳ ಮೇಳ ಇರಲಿ, ಮನೆ ಮನೆಯ ಚರ್ಚೆಗಳಿರಲಿ, ಮದುವೆ ಮನೆಯೇ ಆಗಿರಲಿ, ಇವರಿದ್ದಲ್ಲಿ ಲವಲವಿಕೆಯ ಅಂತರ್ ಪ್ರವಾಹ ಸದಾ ಹರಿಯುತ್ತಿರುತ್ತದೆ.
“…..ಸಮತೆಯೆಂಬುದು ಯೋಗದಾಗು ನೋಡಾ”ಎಂದು ಶರಣ ಹಾವಿನಾಳು ಕಲ್ಲಯ್ಯನ ಹಾಗೆ ಸಮತಾವಾದವನ್ನೇ ಉಸಿರಾಡುವ ಎಲಿಗಾರ್ ಮೇಷ್ಟ್ರು ,
ಬರೆಯಬೇಕು
ನಮ್ಮ ಮನೆಯ
ಗೋಡೆಯ ಕ್ಯಾಲೆಂಡರ್ ತುಂಬ
ಸಮತೆಯ ಹಾಡು;
….ಮನುಷ್ಯರೆಲ್ಲಾ ಒಂದಾಗಿ
ಕೋಮು ಸಾಮರಸ್ಯಕ್ಕೆ ಮುಂದಾಗಿ
ಎಂದು ಬರವಣಿಗೆ ಎಂಬ ಚಳುವಳಿಗಳ ಮೂಲಕ ಹೋರಾಟಗಳಿಗೆ ಅಣಿಯಾಗುತ್ತಾರೆ.
ಪ್ರಿಯ ನೆಲವೇ….ಎಂದು ಅಂತಃಕರಣದಿಂದ ಪಿಸುಗುಟ್ಟುವಂತೆ ಕೇಳಿಸುವ ಪದವನ್ನೇ ಸಂಕಲನದ ಹೆಸರಿಟ್ಟ ಕವಿ ಎಲಿಗಾರ್,
ನಮ್ಮ ಮನೆಯ
ಗೋಡೆಯ ಕ್ಯಾಲೆಂಡರ್ತುಂಬಾ
ರಕ್ತದ ಕಲೆಗಳು
ಹಸಿರಾಗಿ ಮತ್ತೆ ಮತ್ತೆ..
ಕೇಸರಿಯಾಗಿ,
ಇಲ್ಲಿ ಮನುಷ್ಯ
ಮನುಷ್ಯನನ್ನೇ ಕೊಲ್ಲುತ್ತಿದ್ದಾನೆ
ಪ್ರಿಯ ನೆಲವೇ
ಮರೆತು ಬಿಟ್ಟೆಯಾ
ಉದ್ದಗಲದ ನಿನ್ನ ಚರಿತ್ರೆಯ
ಕವಿತೆಯ ಉದ್ದಕ್ಕೂ ದೇಶದ ಚರಿತ್ರೆ,ವರ್ತಮಾನಗಳ ವಿಷಾದ ಮತ್ತು ಸಂಕಟದ ಅನುಭವಗಳನ್ನು ತೆರೆದಿಡುತ್ತಾರೆ.ಅಷ್ಟೇ ಅಲ್ಲದೆ,
ಬರೆಯಬೇಕು
ನಮ್ಮ ಮನೆಯ ಗೋಡೆಯ ತುಂಬ
ಸಮತೆಯ ಹಾಡು;
ಎಂದು ಆಶಿಸುತ್ತಾರೆ.
ಇಡೀ ಕವಿತೆಯಲ್ಲಿ ಕವಿ ಉಸುರುವ “ಪ್ರಿಯ ನೆಲವೇ..”ಎನ್ನುವುದಿದೆಯಲ್ಲ ಓದುಗನ ಎದೆ ತಟ್ಟುತ್ತದೆ.ಜಾಗತೀಕರಣದ ದಾಳಿಗೆ ತುತ್ತಾದ ಎಷ್ಟೋ ಜನರ ಪಾಲಿಗೆ , ಪೋಖ್ರಾನ್ ನೆಲ , ಕಾರ್ಗಿಲ್ ಯುದ್ಧ , ಇಂದಿಗೂ ನಡುಕ ತರಿಸಬಲ್ಲುದು.
ಅನ್ನ,ಬಟ್ಟೆ,ಬದಲಿಗೆ
ಬಾಂಬ್ ನೀಡಿದವರೇ
ಬಯಲಾಯಿತು ನಿಮ್ಮ ಬಣ್ಣ:
ನೀವಿಟ್ಟ ಹೆಜ್ಜೆಗಳೇ
ನಿಮಗೆ ಸಾವಾಗುತ್ತವೆ.
ಎಂದು ಹೇಳುತ್ತಲೇ ಜಗತ್ತಿನ ಸುತ್ತ ಕಣ್ಣು ಹಾಯಿಸುವ ಕವಿಗೆ,
ಮಾರುಕಟ್ಟೆ ತುಂಬಾ ಹೆಣದ ರಾಶಿಗಳೇ ಕಾಣಿಸುವ ರೂಪಕ ಹೆಚ್ಚು ಕಾಡುತ್ತದೆ.
ಅಭಿನಯ , ಬರವಣಿಗೆ,ನಾಟಕ ನಿರ್ದೇಶನ , ಬೀದಿನಾಟಕಗಳ ಆಯೋಜನೆ,ಸಮುದಾಯ, ಭಾರತೀಯ ಜನಕಲಾ ಸಮಿತಿ, ಬಿ.ಜಿ.ವಿ.ಎಸ್.,ಕನ್ನಡ ಸಾಹಿತ್ಯ ಪರಿಷತ್,…ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಹರಿದು ಹಂಚಿ ಹೋಗಿರುವ ಇಸ್ಮಾಯಿಲ್ ಎಲಿಗಾರರ ಪ್ರತಿಭೆಗೆ ಮತ್ತು ಅವರ ಬದ್ಧತೆಗೆ ಎಂದೂ ಸಾವಿಲ್ಲ.
ಯಾಕೋ ಏನೋ….
ಪರೀಕ್ಷಿಸಬೇಡಿ
ನಮ್ಮನ್ನು
ಕಾಲಕಾಲಕ್ಕೆ ನಾವೆಲ್ಲರೂ
ಒಂದೇ
ಭಾರತೀಯರು ನಾವು
ಬಹುತ್ವ
ಭಾರತದ ರೂವಾರಿಗಳು!
ಎಂದು ಕೂಗಿ ಕೂಗಿ ಹೇಳುತ್ತಿರುವ, ದೇಶದ ಅಲ್ಪಸಂಖ್ಯಾತನೊಬ್ಬ ಅನುಭವಿಸುತ್ತಿರುವ “ಪರದೇಸಿತನ”ದ ನೋವಿನ ನುಡಿಗಳಂತೆ ಕೇಳಿಸುತ್ತಿದೆ. ಮತ್ತೆ ಮತ್ತೆ “ಸಂಬೋಳಿ,ಸಂಬೋಳಿ”ಎಂಬ ಕೂಗು ಕೇಳಿಸಿದಂತಾಗಿ ಮನ ಬೆಚ್ಚುತ್ತದೆ.
ಸೃಜನಶೀಲ ಕವಿ (Ismail Eligar)
ಆ ಕಾಲದ ಅಸ್ಪೃಶ್ಯರ ಜೊತೆಗೆ ಬಸವಣ್ಣ ನಿಂತಂತೆ , ನಮ್ಮದೇ ಬಂಧುವೊಬ್ಬ ನಮ್ಮಳಗಿದ್ದೂ ಅನ್ಯನಾಗಿರಬೇಕಾದ ಈ ಕಾಲದ ಸಂಕಟಗಳ ಅನಾವರಣ ಮಾಡುವ ಕವಿ ಇಸ್ಮಾಯಿಲ್ ಎಲಿಗಾರರಂತಹ ದೇಶದ ಸಾವಿರಾರು ಸೃಜನಶೀಲ, ಮಾನವೀಯ ಮನಸ್ಸುಗಳ ಜೊತೆ ನಾವೆಲ್ಲ ಇಂದು ನಿಲ್ಲಬೇಕಿದೆ.
ಬಿ.ಶ್ರೀನಿವಾಸ ದಾವಣಗೆರೆ