Kannada News | Dinamaanada Hemme | Dinamaana.com | 17-07-2024
ಅಪ್ಪಟ ಮಲೆನಾಡಿನ ಊರಿನಂತೆ ತೋರುವ ಬಳ್ಳಾರಿ ಜಿಲ್ಲೆಯ ಪಶ್ಚಿಮ ದಿಕ್ಕಿನಲ್ಲಿರುವ ಹೂವಿನಹಡಗಲಿ ಒಂದುಕಾಲದಲ್ಲಿ ಸಮಾಜವಾದಿಗಳು,ಆರೆಸ್ಸೆಸ್ ವಾದಿಗಳಿಂದಲೇ ತುಂಬಿದ್ದ ಊರು ಆಗಿತ್ತು.
ಮಾವೋ ಪೋಟೋ ಸುಟ್ಟಿದ್ದು (PR Venkatesh)
ಇದೇ ತಾಲೂಕಿನ ಮಾಗಳದಂತಹ ಪುಟ್ಟ ಊರೊಂದರಲ್ಲಿ ಅದೊಂದು ದಿನ,ಒಬ್ಬ ಹುಡುಗ ಸಮಾಜವಾದಿಗಳ ಮೆರವಣಿಗೆಯಲ್ಲಿ ಚೀನಾದ ಮಾವೋ ಪೋಟೋವನ್ನು ಸುಟ್ಟು ಬಿಟ್ಟನು.
ಸುಮಾರು ನಲವತ್ತು ವರುಷಗಳ ಕಾಲ ಮೇಷ್ಟ್ರಾಗಿದ್ದ ಸ್ವಂತ ತಂದೆ ಪದ್ಮನಾಭ ಆಚಾರ್ಯರು ಅತ್ಯಂತ ತನ್ಮಯತೆಯಿಂದ ತನ್ನ ಕೈಯಾರೆ ಬಿಡಿಸಿದ್ದ ಆ ಮಾವೋ ಚಿತ್ರವನ್ನು ಮಗ ಪಾಂಡುರಂಗ ರಾಟಿ ವೆಂಕಟೇಶ್ ಸುಟ್ಟಿದ್ದ !.
ಮಾವೋನ ಚಿತ್ರ ಹಿಡಿದು ಹೋರಾಟ (PR Venkatesh)
ಅಪ್ಪಟ ಸಮಾಜವಾದಿಗಳು,ಎಂ.ಪಿ.ಪ್ರಕಾಶರ ಮಾರ್ಗದರ್ಶಿಗಳೂ ಆಗಿದ್ದ ಬಿ.ಎಮ್.ವಿರುಪಾಕ್ಷಯ್ಯ ಮತ್ತು ಡ್ರಾಮಾಟಿಸ್ಟ ಚಂದ್ರಯ್ಯರ ಜೊತೆಗೂಡಿ ಆ ಹುಡುಗ ಈ ಕೆಲಸ ಮಾಡಿದ್ದ.ಅಂದು ಪಿಯುಸಿ ಓದುತ್ತಿದ್ದ ಅದೇ ಹುಡುಗ ಮುಂದೆ ಪಿ.ಆರ್.ವೆಂಕಟೇಶನಾಗಿ,ಕಮ್ಯುನಿಷ್ಟ್ ಪಾರ್ಟಿಯ ಮಾವೋ ನ ಚಿತ್ರ ಹಿಡಿದು ಹೋರಾಟದ ಮಾತುಗಳನ್ನು ಅದೇ ಊರಿನಲ್ಲಿ ಆಡಿದ್ದನ್ನು ,ಆಡುತ್ತಿರುವ ಪಿ.ಆರ್.ವೆಂಕಟೇಶ್ ರನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.
ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಪದ್ಧತಿಯಂತೆ ಅದೊಂದು ದಿನ ಆ ಹುಡುಗನಿಗೆ ಉಪನಯನ ಮಾಡುವ ಎಲ್ಲಾ ತಯಾರಿಯನ್ನೂ ನಡೆಸಲಾಗಿತ್ತು.ಮಾಗಳದ ಜೋಷಿ ಗುಂಡಾಚಾರ್ರು ಎಂಬ ಪುರೋಹಿತರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಊರಿನ ರಂಗಾಪುರ ನರಸಿಂಹಸ್ವಾಮಿ ದೇಗುಲದಲ್ಲಿ ಉಪನಯನ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆದಿದ್ದವು. ಬ್ರಾಹ್ಮಣರ ಅಡುಗೆ ತಯಾರಿಯೂ ಭರ್ಜರಿಯಾಗಿಯೇ ನಡೆದಿತ್ತು.
ದೂರದಲ್ಲಿ ಅಡುಗೆಗಾಗಿ ಒಣ ಕಟ್ಟಿಗೆಯನ್ನು ದಲಿತನೊಬ್ಬ ಜೋಡಿಸುತ್ತಿದ್ದ.ಆತನ ಮಗಳು ಹನುಮಂತಮ್ಮನನ್ನು ದೇವರಿಗೆ ಬಿಟ್ಟಿದ್ದ.ಆಕೆಯ ಪುಟ್ಟ ಮಗುವನ್ನು ದೇಗುಲದ ಎದುರಿಗೆ ಇರುವ ಅಶ್ವತ್ಥ ಮರದ ಕಟ್ಟೆಯ ಮೇಲೆ ಮಲಗಿಸಲಾಗಿತ್ತು.
ತಂಪು ನೆರಳಿನ ಕಟ್ಟೆಯಲ್ಲಿ ಕೆಂಪುಗೊದ್ದಗಳು ಆ ಎಳೆ ಮಗುವಿನ ಚರ್ಮಕ್ಕೆ ಗಾಯಪಡಿಸಿದವು. ನೋವಿನಿಂದ ಮಗು ಅಳತೊಡಗಿತು.ಆ ಮಗು ಜೋರಾಗಿ ಅಳುತ್ತಿದ್ದರು ಸಹ ಆ ಮನುಷ್ಯನಾಗಲಿ, ಆತನ ಮಗಳು ಹನುಮಂತಮ್ಮನಾಗಲೀ ಎಲ್ಲಿಯೂ ಕಾಣಿಸಲಿಲ್ಲ. ಸ್ವತ ಗುಂಡಾಚಾರ್ರು ಮಗು ಅಳುತ್ತಿರುವುದನ್ನು, ಗೊದ್ದಿರುವೆಗಳು ಆ ಮಗುವನ್ನು ಕಚ್ಚುತ್ತಿರುವುದನ್ನು ನೋಡಿಯೂ ನೋಡದಂತೆ ಓಡಾಡುತ್ತಿದ್ದರು.
ಹೋರಾಟಗಳಿಗೆ ಆ ತಾಯಿಯ ಮಮತೆ ಸ್ಫೂರ್ತಿ (PR Venkatesh)
ಉಪನಯನದ ವಟು ವೆಂಕಟೇಶನೆಂಬ ಹುಡುಗನಿಗೆ ತಡೆದುಕೊಳ್ಳಲಿಕ್ಕಾಗದೆ,ಕೊಳ್ಳಾಗಿನ ಹಾರಗೀರ ಬಿಸಾಕಿ ಆ ಮಗುವನ್ನು ಓಡಿ ಬಂದವನೆ ಬಾಚಿ ಎದೆಗವಚಿಕೊಂಡ!ಆ ಮಗುವಿಗೆ ಅಂಟಿದ್ದ ಗೊದ್ದಗಳನ್ನೆಲ್ಲಾ ಓಡಿಸಿ ಆಡಿಸಹತ್ತಿದ. ಸಂಪ್ರದಾಯಸ್ಥ ಬ್ರಾಹ್ಮಣರು ಗೊಣಗುಟ್ಟಿದರು, ಗದರಿದರು. ಅದಾವುದಕ್ಕೂ ಹುಡುಗ ತಲೆ ಕೆಡಿಸಿಕೊಳ್ಳಲಿಲ್ಲ. ತಾಯಿ ಬಂದು ಮಗನ ತಲೆ ಸವರಿದಳು ಬಹುಶಃ ವೆಂಕಟೇಶನೆಂಬ ಹುಡುಗನ ಮುಂದಿನ ಹೋರಾಟಗಳಿಗೆ ಆ ತಾಯಿಯ ಮಮತೆ ಸ್ಫೂರ್ತಿಯಾಯಿತೇನೋ.
ಅನೇಕ ಘಟನೆಗಳಿಗೆ ಸಾಕ್ಷಿ (PR Venkatesh)
ಆ ಪುಟ್ಟ ದಲಿತ ಮಗುವಿನ ತಂದೆ ಯಾರೆಂಬುದೇ ಗೊತ್ತಿಲ್ಲದಿದ್ದರೂ , ಪೌರೋಹಿತ್ಯ ವಹಿಸಿದ್ದ ಗುಂಡಾಚಾರ್ರು ಅಕ್ರಮ ಸಂತಾನ ಎಂದು ಊರಿಗೆಲ್ಲ ಗೊತ್ತಿತ್ತು.ಈ ವಿಷಯ ಗೊತ್ತಾದ ಮೇಲಂತೂ ಆ ಹುಡುಗನಿಗೆ ಹೋರಾಟದ ಕಿಚ್ಚು ಮತ್ತೂ ಹೆಚ್ಚಾಗುತ್ತಾ ಹೋಯಿತು.
ಇಂತಹ ಅನೇಕ ಘಟನೆಗಳಿಗೆ ಸಾಕ್ಷಿಯಾಗಿ ಬೆಳೆದು ಬಂದ ಪಿ.ಆರ್.ವೆಂಕಟೇಶ್ ಎಂಬ ಹುಡುಗ ಕಾಮ್ರೇಡನಾಗಿ,
“ಸಾವಿಗೆ ಗುಲಾಬಿ ಮೂಡಿಸುವ ಕೈ ಸಾಕಷ್ಟಿವೆ ಗೆಳೆಯ
ಗಾಯ ಒರೆಸುವ ಕೈಗೆ ಬರವು ಇಲ್ಲಿ “(ನನ್ನೆದೆಯ ಹಾಡು)
ಎಂದು ಕವಿಯಾಗಿ ಬರೆದದ್ದು ಅತಿಶಯೋಕ್ತಿಯೇನಲ್ಲ.
ಈಗಾಗಲೇ ಮೂರು ಮುಖ್ಯ ಕಾಲಘಟ್ಟಗಳಲ್ಲಿ ಮೂರ್ನಾಲ್ಕು ಕವನ ಸಂಕಲನಗಳನ್ನು ಹೊರ ತಂದಿರುವ ಕವಿ ವೆಂಕಟೇಶರ ಬರೆಹ ಎನ್ನುವುದು ಬಹುತೇಕ ಮೆರವಣಿಗೆಗಳಲ್ಲಿ,ಜೈಲಿನಲ್ಲಿ,ಇಲ್ಲವೇ ಸಭೆಗಳಲ್ಲಿ ಬರೆದವುಗಳಾಗಿವೆ.
ಎಲ್ಲ ಕಾಲದ ಶ್ರಮದ ಸಂಕೇತದಂತೆ ತೋರುವ ಭೂಮಿಯ ಜೊತೆಗಿನ ಹೋರಾಟ,ಕವಿಗೆ ತಾನು ಬದುಕುತ್ತಿರುವ ಸಮಾಜದೊಂದಿಗೆ ಸಾವಯವ ಸಂಬಂಧವನ್ನು ಉಳಿಸುವಂತೆ ಮಾಡಿದೆ.
ಭೂಮಿ ಕೊಡಿ ನಮಗೆ ಭೂಮಿಕೊಡಿ
ಕಳೆ ಕಿತ್ತು ಬದುಕಿನ ಬೆಳೆ
ಬೆಳೆಯುತ್ತೀವಿ
ನೀರು ಕೊಡಿ ನಮಗೆ ನೀರು ಕೊಡಿ
ತೆನೆಗಳನ್ನು ಮುದ್ದಾಡುವ
ದಿನಗಳನ್ನು ಹಡೆಯುತ್ತೇವೆ
ಭೂಮಿ ಕೊಡಿ ನಮಗೆ ನೀರು ಕೊಡಿ
ನಮ್ಮ ಭೂಮಿ ನಮಗೆ ಕೊಡಿ
ನಮ್ಮ ಬದುಕು ನಮಗೆ ಬಿಡಿ
ನಮ್ಮ ಹಸಿರ ಉಸಿರ ಕೊಡಿ
ನಮ್ಮ ನಗೆಯು ನಮಗೆ ಬಿಡಿ
ಭೂಮಿ ಕೊಡಿ ನಮಗೆ ನೀರು ಕೊಡಿ…
ಬದ್ಧತೆ (PR Venkatesh)
ತನ್ನ ಇಡೀ ಜೀವನವನ್ನೇ ಹೋರಾಟಕ್ಕೆ ಮುಡುಪಾಗಿಟ್ಟ ಜೀವವೊಂದು ಸಿದ್ಧಾಂತ ಮತ್ತು ಸೃಜನಶೀಲತೆಗಳ ನಡುವೆ ಎನಿತೂ ಅಂತರ ಕಾಯ್ದುಕೊಳ್ಳದೆ ಅಭಿವ್ಯಕ್ತಿಯ ನೆಲೆಗಳನ್ನು ಪ್ರಕಟಿಸುವುದು ಸವಾಲಿನ ಕೆಲಸ.ಆ ಕೆಲಸವನ್ನು ಅಷ್ಟೇ ಬದ್ಧತೆಯಿಂದ ಪಿ.ಆರ್.ಮಾಡುತ್ತ ಬಂದಿದ್ದಾರೆ.
ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡು ಬರೆಯುವ ಪಿ.ಆರ್.ವಿ.ಗೆ,ಅವರ ಬರೆಹವೇ ಅವರಿಗೆ ಲೋಕಸಂವಾದಿಯಾಗಿದೆ.ಅವರ ಪ್ರತಿ ಅಕ್ಷರಗಳು ಸಹ ಲೋಕದ ಜನರೊಂದಿಗೆ ಸಂವಾದವನ್ನು ಅಪೇಕ್ಷಿಸುತ್ತವೆ.ಇದು ಹೀಗಿರಬೇಕು ಕೂಡ.ಕಾವ್ಯ-ಲೋಕ ತಟಸ್ಥವಾಗಿರದಂತೆ ಕಾಪಾಡುತ್ತದೆ.
Read also : ದಿನಮಾನ ಹೆಮ್ಮೆ : ಭಾವೈಕ್ಯದ ಅನನ್ಯ ಬಂಧು- ಎಲ್.ಖಾದರ್ ಬಾಷಾ
ವೈಚಾರಿಕತೆ,ಸಿದ್ಧಾಂತಗಳು ಒಂದಾಗಿ, ನಿರಂತರ ಸಂಘರ್ಷ, ಬಹುತೇಕ ಎಡಪಂಥೀಯ ಹೋರಾಟಗಾರರ ಬರೆಹಕ್ಕೆ ಇರುವ ದೌರ್ಬಲ್ಯ ಎಂದೇ ಸೋ ಕಾಲ್ಡ್ ಸಾಹಿತ್ಯಿಕ ಪಂಡಿತ ಮಹಾಶಯರ ವಾದ.ಆದರೆ ವಾಸ್ತವದಲ್ಲಿ,ಚಂಪಾ ಹೇಳುವ,
“ಕವಿಯಾಗಲು ಯಾವ
ಉಪಾಧಿಗಳೂ ಬೇಕಾಗಿಲ್ಲ
ಕೇವಲ ಮನುಷ್ಯನಾಗಿದ್ದರೆ ಸಾಕು.
ಯಾವ ಮುಖವಾಡವು ಅಗತ್ಯವಾಗಿರದ ಮುಖ್ಯವಾಗಿದ್ದರೆ ಸಾಕು .
ಎನ್ನುವಂತೆ ಬರೆಯುವುದಷ್ಟೇ ಅಲ್ಲದೆ , ಆ ರೀತಿ ಬದುಕುವುದನ್ನು ರೂಢಿಸಿಕೊಂಡಿರುವ ಪಿ.ಆರ್.ವೆಂಕಟೇಶ್ ಬೆರಗಿನ ಕವಿ.
ರಾಜಕೀಯ ಹೋರಾಟಗಾರನಾಗಿ ಸಕ್ರಿಯನಾಗಿದ್ದ ಜಾರ್ಜ್ ಆರ್ವೆಲ್ ,ಸ್ಪೇನಿನ ನಾಗರಿಕ ಯುದ್ಧದ ಕುರಿತ ಆತನ ಪತ್ರಿಕಾ ವರದಿ ಕೂಡ ಅತ್ಯಂತ ಕ್ರಿಯಾಶೀಲವಾಗುವಂತೆ ಬರೆಯಬಲ್ಲವನಾಗಿದ್ದ.
ಪತ್ರಕರ್ತರಾಗಿಯೂ ಕೆಲಸ (PR Venkatesh)
ಅಂತೆಯೇ ಇಲ್ಲಿನ ವೆಂಕಟೇಶ್ ಕೂಡ ಕೆಲ ಕಾಲ ಪತ್ರಕರ್ತರಾಗಿಯೂ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದರು.ಅಲ್ಲೂ ಕೂಡ ನಿಲ್ಲದೆ ವಾಪಸ್ ಬಂದು ಬರೆಹದಲ್ಲಿ ತೊಡಗಿದರು.ಅವರ ವೈಯಕ್ತಿಕ ಜೀವನವು ಕೂಡ ಬಹುತೇಕ ಸವಾಲುಗಳನ್ನು ಎದುರಿಸುವುದರಲ್ಲಿ,ಬಹಳಷ್ಟು ಕಾಲ ಸಾರ್ವಜನಿಕ ಬದುಕಿನಲ್ಲಿಯೇ ಕಳೆದುಹೋಯಿತು.
ಭೂಮಿ ರಕ್ಷಣೆಗಾಗಿ ಹೋರಾಟ (PR Venkatesh)
ವೈಯಕ್ತಿಕ ನೋವುಗಳನ್ನು ಜೀರ್ಣಿಸಿಕೊಂಡಿದ್ದಾರೆ.ಚಳುವಳಿಯ ಕಾಲಘಟ್ಟದಲ್ಲಿ ಎಷ್ಟೋ ರಾತ್ರಿಗಳನ್ನು ಬೀದಿಯಲ್ಲಿ ಕಳೆದರು.ಉಪವಾಸ ಬಿದ್ದ ದಿನಗಳಿದ್ದವು.ಬಸ್ಸಿಗೆ ಕೊಡಲು ಚಾರ್ಜಿಗೆ ರೊಕ್ಕವಿಲ್ಲದೆ ಬರಿ ಕಾಲ್ನಡಿಗೆಯಲ್ಲಿ ಹಳ್ಳಿಯಿಂದ ಹಳ್ಳಿಗೆ ಓಡಾಡಿ ಚಳುವಳಿಗಳನ್ನು ಸಂಘಟಿಸಿ ಭೂಮಿ ರಕ್ಷಣೆಗಾಗಿ ಮಾಡಿದ ಹೋರಾಟಗಳಿದ್ದಾವಲ್ಲ ಅವು, ಚರಿತ್ರಾರ್ಹ ಸಂಗತಿಗಳಾಗಿವೆ.
ಕಮ್ಮುನಿಷ್ಟ್ ಸಂತ (PR Venkatesh)
ಚಳುವಳಿಕಾರ,ಕವಿ,ಕಾದಂಬರಿಕಾರ,ಸಂಘಟಕ ಏನೇ ಉಪಾಧಿಗಳಿದ್ದರೂ,ವೆಂಕಟೇಶ್ ಅವರ ಈಗಿನ ಹೊರ ಆಕೃತಿಯನ್ನು ಗಮನಿಸಿದರೆ ಅವರೊಬ್ಬ ಕಮ್ಮುನಿಷ್ಟ್ ಸಂತನಂತೆ ಕಾಣಿಸುತ್ತಾರೆ.ನಿಜ ಹೇಳಬೇಕೆಂದರೆ,ಆಗಿನ ಅಖಂಡ ಬಳ್ಳಾರಿ,ರಾಯಚೂರು,ಕೊಪ್ಪಳ ಸೀಮೆಗಳಂತಹ ಊರುಗಳಲ್ಲಿಯೂ ಜನರ ಹಸಿವನ್ನು,ನೋವನ್ನು,ಅವಮಾನಗಳನ್ನು ಪ್ರತಿರೋಧಿಸುವವರ,ಧ್ವನಿಯಾಗಿ,ಪ್ರತಿನಿಧಿಯಾಗಿ ವೆಂಕಟೇಶ್ ಬದುಕಿದ್ದಾರೆ.ಅವರ ಕನಸುಗಳನ್ನೇ ಕವಿತೆಯಾಗಿಸಿದಂತೆ,
ಇಲ್ಲಿ ,
ನನ್ನ ಕವಿತೆಯಲ್ಲಿ
ಹೊರೆ ಹೊತ್ತ ಹಮಾಲಿ ರಾಜ್ಯವಾಳುತ್ತಾನೆ
ದೇವದಾಸಿಯರು ದೇವತೆಗಳಾಗುತ್ತಾರೆ
ದಾರಿಗೆ ಕೊರಳು ಮಾಡಿ ಹಾಡುತ್ತಾರೆ
ಅಂಟಿಸುವೆ ನನ್ನ ಕವಿತೆ ಎಲ್ಲರ ಮನೆ ಗೋಡೆಗೆ!
ಹೀಗೆ ಹೇಳುತ್ತಲೇ,
ಪಂಡಿತರಿಗೆ ಬಹಿಷ್ಕೃತ ನನ್ನ ಕಾವ್ಯ
ಕೋಣೆಯೊಳಗಿನ ಕವಿಗೆ ಅಸ್ಪೃಶ್ಯ ನನ್ನೀ ಕಾವ್ಯ
ಎಂದು ನಿಖರವಾಗಿ ಹೇಳುತ್ತಲೇ,ಬದುಕಿನ ಸವಾಲುಗಳನ್ನು ಆಹ್ವಾನಿಸಿಕೊಳ್ಳುವ ಕವಿ,
ಸುಡುವ ಬೆಂಕಿಯ ಸೊಕ್ಕನು
ಸುಟ್ಟು
ದೀಪ ಹಚ್ಚಬೇಕು
ಹಾರುವ ಹಕ್ಕಿಯ ಕೊರಳಲಿ
ಕೂತು ಹಾಡು ಹಾಡಬೇಕು
ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ
ಕಾವ್ಯ ಬರೆಯಬೇಕು…
ಎಂದು ಆಶಿಸುತ್ತಾರೆ.
ಇಡೀ ಭಾರತವೇ ನರವಿಕಲ್ಪಕ್ಕೆ ಗುರಿಯಾದಂತೆ ತೋರುತ್ತಿರುವ ಈ ಹೊತ್ತು, ಲೇಖಕನಿಗೆ ಢಾಳಾಗಿ ಕಾಣಿಸಬೇಕಾದದ್ದು ,ಆಗಬೇಕಾದದ್ದು ಸಮಾನತೆಯ ಹಸಿವು.ಆ ಹಸಿವಿನ ಕಿಚ್ಚಂತೂ ಕವಿಯ ಒಡಲಲ್ಲಿದೆ.
ನನ್ನೆದೆಯ ತಂತಿಗಳು ಗಡಿರೇಖೆಗಳಲ್ಲ
ಮುಕ್ತ ಬಯಲಾತ್ಮದ ಕರುಳಬಳ್ಳಿ
ನನ್ನೆದೆಯ ತಂತಿಗೆ ಲಯ ಬೇಧಗಳಿಲ್ಲ
ಭಾವ ಒಂದೇ ಬಂಧಿ
ಬಹುತ್ವದ ಹಾಡಿಗೆ
ಹೆಸರಿಲ್ಲ ನನಗೆ
ಮನುಷ್ಯ ಎನ್ನುತ್ತಾರೆ
ಮಣ್ಣ ಕಣ್ಣಿನ ಕರೆಗೆ
ಗಿಣ್ಣವಾದವನು
ಸದಾ ಹೋರಾಟ,ಚಳುವಳಿಗಳ ಸಾಂಗತ್ಯದಲ್ಲಿ ಬದುಕು ಸವೆಸುವ ಕವಿಗೆ,
ಬೆಳಕು ಹೆತ್ತ
ಹಣತೆಗೆ
ಬೆಳಕಿನದೇ ಚಿಂತೆ
ಎಂಬಂಥ ಅದ್ಭುತ ಒಗಟಿನಂತಹ ಸಾಲುಗಳನ್ನು ನೀಡಿದ ಮತ್ತು ಅವರೇ ಬರೆದ ಸಾಲುಗಳ ಈ ಅಕ್ಷರಗಳೂ ಸಹ ಏನನ್ನೋ ಧ್ಯಾನಿಸುತ್ತಿವೆ .ಅಕ್ಷರಶಃ ಈ ಕಾಲದ ಯಾವುದೋ ತತ್ವಪದಕಾರರಂತೆ ಕಾಣುವ ಕವಿಯ ಒಳಗೆ ಅಲ್ಲಮನ ಪ್ರಭಾವವೂ,ಬಸವನ ಬಂಡಾಯದ ಕಿಚ್ಚೂ, ಮಾನವೀಯ ಅಂತಃಕರಣವೂ ಒಟ್ಟಾಗಿ, ಢಾಳಾಗಿ ಕಾಣಿಸುತ್ತದೆ.
1995 ರ ಒಂದು ದಿನ,ಬಳ್ಳಾರಿಯ ಗಾಂಧಿ ಭವನದಲ್ಲಿ ಕವಿ ಹುಲಿಕಟ್ಟಿ ಚನ್ನಬಸಪ್ಪ ಮತ್ತು ಅವರ ಗೆಳೆಯರು ಆಯೋಜಿಸಿದ್ದ ಭಗತ್ ಸಿಂಗ್ ಸ್ಮರಣಾರ್ಥ ಕವಿಗೋಷ್ಟಿಯಲ್ಲಿ ಇದ್ದಕ್ಕಿದ್ದಂತೆ ಗದ್ದಲವೆದ್ದಿತು.ಸಂಗಾತಿ ಚನ್ನಬಸಪ್ಪನವರ ವಿರುದ್ಧವೇ ಪಿ.ಆರ್.ವೆಂಕಟೇಶ್ ಬಂಡಾಯ ಸಾರಿದ್ದರು!.
ಕವಿಗೋಷ್ಟಿಯ ವೇದಿಕೆಯಲ್ಲಿ ಅಂದಿನ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಸ್ವತಃ ಕವಿಯೂ ಆಗಿದ್ದ ರಾಜಪ್ಪನವರ ಯೂನಿಫಾರ್ಮ್ ಸಹಿತವಾದ ಉಪಸ್ಥಿತಿಯು ಬ್ಯೂರಾಕ್ರಸಿಯನ್ನು ಮೆರೆಸುವುದಾಗಿದೆ ಎಂಬುದಾಗಿ ಕೂಗಿದರು.
ಅಧಿಕಾರಕ್ಕಾಗಿ ಹಪಹಪಿಸಲಿಲ್ಲ (PR Venkatesh)
ಯಾರು ಏನೇ ಹೇಳಿದರೂ ಕೇಳದೆ ವೆಂಕಟೇಶ್ ಮತ್ತು ಪೀರ್ ಬಾಷಾ, ರಾಜಪ್ಪನವರು ವೇದಿಕೆಯಿಂದ ಇಳಿಯುವವರೆಗೂ ಪ್ರತಿಭಟಿಸುತ್ತಲೇ ಇದ್ದರು. ಈ ಘಟನೆಯಾಗಿ ಸುಮಾರು ಮೂರು ದಶಕ ಕಳೆದಿದ್ದರೂ ವೆಂಕಟೇಶ್ ಮಾತ್ರ ಬದಲಾಗಿಲ್ಲ.ಇಷ್ಟೊಂದು ಬದ್ಧತೆಯಿಂದ ಬದುಕಿದ ವೆಂಕಟೇಶ್ ಎಲ್ಲೂ ಕೂಡ ರಾಜಿಯಾಗಲಿಲ್ಲ.ಅಧಿಕಾರಕ್ಕಾಗಿ ಹಪಹಪಿಸಲಿಲ್ಲ.ಅಕಾಡೆಮಿಗಳು ಮತ್ತವರ ಪ್ರಶಸ್ತಿಗಳು ನಾಚಿಕೊಳ್ಳುವ ಹಾಗೆ ವೆಂಕಟೇಶ್ ಘನತೆಯ ಬದುಕನ್ನು ಬದುಕಿದರು.
ಇವರು,ತಮ್ಮ ಸಂಗಾತಿಗಳೊಡನೆ ನಡೆಸಿದ ಕೊಮಾರನಹಳ್ಳಿ ಭೂ- ಹೋರಾಟ ಐತಿಹಾಸಿಕವಾದುದು.ಇದು ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ದಾಖಲೆಯಾಗಲೇಬೇಕಾದ ಸಂಗತಿ.
ಹನುಮನ ಹಲಗೆ (PR Venkatesh)
ಇಂಥಾ ಹೋರಾಟಗಾರನೊಬ್ಬ ಬಳ್ಳಾರಿಯಲ್ಲಿದ್ದ ಎಂಬುದೂ ಕೂಡ ಈ ಹೊತ್ತಿನ ಬಹುತೇಕರಿಗೆ ಅರಿವಿಲ್ಲದೆ ಇರುವುದು ಪರಿಸ್ಥಿತಿಯ ವ್ಯಂಗ್ಯ.ಎಲ್ಲ ಕಾಲದ ಚರಿತ್ರೆ ಮತ್ತು ವರ್ತಮಾನಗಳ ಬಹುಮುಖ್ಯ ಶ್ರಮದ ಭಾಗವಾದ ‘ಭೂಮಿ’ಯನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ಕಾದಂಬರಿ “ಹನುಮನ ಹಲಗೆ”ಯಲ್ಲಿ ಇವರ ಸಾಮಾಜಿಕ ಕಾಳಜಿ ಸಾಹಿತ್ಯಿಕ ವಸ್ತುವಾಗಿ ರೂಪುಗೊಂಡಿರುವುದು ಓದುಗನನ್ನು ಚಿಂತನೆಗೆ ಹಚ್ಚುತ್ತದೆ.
ಕಾದಂಬರಿಯ ಹನುಮನ ಹಲಿಗೆಯ ಸದ್ದಿನೊಂದಿಗೆ ವೆಂಕಟೇಶ್ ಸದಾ ನಮ್ಮನ್ನು ಎಚ್ಚರಿಸುವವರಂತೆ ತೋರುತ್ತಾರೆ.ಮತ್ತೊಂದು ಭೂಮಿಯ ಹೋರಾಟದ ಕಥನವನ್ನೇ ಕೇಂದ್ರವಾಗಿಟ್ಟುಕೊಂಡು ಬರೆಯುತ್ತಿರುವ ಹೊಸ ಕಾದಂಬರಿ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೇನು ಸೇರ್ಪಡೆಗೊಳ್ಳಲಿದೆ.
ಇಷ್ಟು ದೀರ್ಘ ಅವಧಿಯ ಚಳುವಳಿ,ಹೋರಾಟಗಳಿಂದ ಅಲ್ಪ ವಿರಾಮ ತೆಗೆದುಕೊಂಡಂತೆ ಕಂಡರೂ ಅವರು ಮನದ ಆಳದಲ್ಲಿ ಹರಳುಗಟ್ಟಿದ ಅನುಭವಗಳೆಲ್ಲ ಅಕ್ಷರಗಳಾಗಿ ಬರುವ ಸಂಧ್ಯಾಕಾಲದಲ್ಲಿ ವೆಂಕಟೇಶ್ ಇದ್ದಾರೆ.
ಈಗವರದು ಏನಿದ್ದರೂ ಅಕ್ಷರಗಳ ಚಳುವಳಿ.ತನ್ನಂತಹ ನೂರಾರು ಕವಿ,ಕವಯಿತ್ರಿಯರನ್ನು ಬೆಳೆಸಲು ಪಣತೊಟ್ಟಿರುವವರಂತೆ ಸಮಾಜ ವಿಜ್ಞಾನ ವೇದಿಕೆ,ಕವಿತೆಯ ಕಟ್ಟೆ,ಬಂಡಾಯ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಹಿರಿಯ ಜೀವ ಪಿ.ಆರ್.ನಮ್ಮಂತವರಿಗೆ ಮತ್ತು ಬಳ್ಳಾರಿ ಸೀಮೆಯ ಹೊಸಹೊಸ ಬರಹಗಾರರಿಗೆ ಇಂದಿಗೂ ಸ್ಫೂರ್ತಿದಾಯಕ ವ್ಯಕ್ತಿ.ಅವರ ಬದುಕು ಮತ್ತು ಬರೆಹದ ಕುರಿತು ಕನ್ನಡ ಸಾಹಿತ್ಯ ಲೋಕವಷ್ಟೇ ಇಡೀ ಭಾರತೀಯ ಸಾಹಿತ್ಯ ಕೂಡ ಚರ್ಚಿಸಬೇಕಾದ ಅಗತ್ಯ ಕೂಡ ಇದೆ.
ಬಿ. ಶ್ರೀನಿವಾಸ ,ದಾವಣಗೆರೆ.