Kannada News | Dinamaanada Hemme | Dinamaana.com | 10-07-2024
ಕಳೆದ ಮೂರು ದಶಕಗಳಲ್ಲಿ ಭಾರತದ ಕೆಲ ಊರುಗಳಲ್ಲಿ ಮತೀಯ ಹಿಂಸೆಗೆ ನಲುಗಿ ಹೋದ ಜನರು ತಮ್ಮ ಇಡೀ ಜೀವನದ ಆಸ್ತಿಪಾಸ್ತಿಯನ್ನು ಒಂದೆರೆಡು ಚೀಲಗಳಲ್ಲಿ ಗಂಟು ಕಟ್ಟಿಕೊಂಡು ರಸ್ತೆ ಸೇರಿದಾಗ ಮನಸ್ಸು ವ್ಯಗ್ರವಾಗುತ್ತದೆ.
ಅರ್ಥವಾಗದ ಮುಗ್ಧ ಲೋಕ ಹಳ್ಳಿಗಾಡಿನಲ್ಲಿದೆ (Ramanamali)
ಸೌಹಾರ್ದತೆಯನ್ನೇ ಉಸಿರಾಡಿ ಕೊಂಡು ಬದುಕಿದ ಎಷ್ಟೋ ಹಿರಿಯ ಜೀವಿಗಳಿಗೆ, ಕಳೆದ ಶತಮಾನದ ಅಂತ್ಯದ ಕಾಲಕ್ಕೆ ಆರಂಭವಾಗಿ ಇಡೀ ಭಾರತಕ್ಕೆ ವ್ಯಾಪಿಸಿರುವ ದಟ್ಟ “ಕೋಮು ಹಿಂಸೆ”ಎಂದರೆ ಏನೆಂದೇ ಅರ್ಥವಾಗದ ಮುಗ್ಧ ಲೋಕವು ಇನ್ನೂ ಹಳ್ಳಿಗಾಡಿನಲ್ಲಿ ಜೀವಂತವಿದೆ.
ಹುಲಗೂರ ಸಂತಿಯಲಿ ಇವತ್ತಿಗೂ ಶರೀಫಜ್ಜನನ್ನು ಆತ ಹಿಂದೂವೋ ಮುಸಲ್ಮಾನನೋ ಎಂದು ಯಾರೂ ಕೇಳುವುದಿಲ್ಲ.”ನಮ್ಮೂರಿಗೆ ಯಾವಾಗಲೂ ಮಳೆ ಕಮ್ಮಿ ಸಾಹೇಬರ, ಯಾಕಂದ್ರ ಶರೀಫಜ್ಜನು ಆಶೀರ್ವಾದ ಸಿಕ್ಕಿಲ್ಲರೀ ಅದಕ್ಕಾ…” ಎಂದು ಮಾತನಾಡುವ ಪಶುಪತಿಹಾಳದ ಜನರ ಲೋಕದಲ್ಲಿ, ಶರೀಫಜ್ಜನು ಜಾತ್ರೆಗೆ ಬಂಡಿಗಳು ಸಾಲಾಗಿ ಹೊರಡುತ್ತವೆ.
ಶರೀಫ ಸಾಬರನಂತೆ ಹೌದಾ? (Ramanamali)
ಆಗ, ಶರೀಫಜ್ಜ ನೀನಂತೂ ನಮ್ಮ ಊರಿಗೆ ಆಶೀರ್ವಾದ ಮಾಡಲಿಲ್ಲ ತಾತಾ….ನಿಮ್ ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಸೈತ ನಾವೇ ನಿಂತಾಕ ಬಂದೀವಿ ನೋಡ ಯಪ್ಪಾ…”ಎನ್ನುತ್ತಿದ್ದ ಆ ಲೋಕದ ಜನರಲ್ಲೂ ಈಗ, ” ಶರೀಫ ಸಾಬರನಂತೆ ಹೌದಾ?”ಎಂಬಂತಹ ಪ್ರಶ್ನೆಗಳು ಎದುರಾಗುತ್ತಿವೆ. ಕಳೆದ ಎರಡು ಶತಮಾನಗಳಲ್ಲೂ ಕೇಳಿಬರದ ಇಂತಹ ಪ್ರಶ್ನೆಗಳು ಎದೆ ನಡುಗಿಸುತ್ತವೆ. ನಾಳೆಗಳು ಹೇಗಿರುವವೋ ಏನೋ…? ಎಂಬ ಆತಂಕದಲ್ಲಿಯೇ
ರಾಮನಮಲಿಯಂತಹ ಕವಿಯ ಲೇಖನಿಯಿಂದ
ಅಮರವಾಗುವುದಾದರೆ ಶ್ರೇಷ್ಟ ಕಾವ್ಯ
ಅದ್ದಿ ಬರೆಯಬಹುದು ಕೆಂಪು ನೆತ್ತರ ಅಕ್ಷರಗಳಿಂದ
ಎಂಬಂತಹ ಮಾತುಗಳು ಮೂಡಿಬರುತ್ತವೆ.
ಬೆಟ್ಟದ ಹೆಸರು “ರಾಮನಮಲೆ” (Ramanamali)
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ರಾಮಘಡದ ಬೆಟ್ಟದ ಸಾಲುಗಳು ಸಮೃದ್ಧ ಕಬ್ಬಿಣದ ಅದಿರಿನ ನಿಕ್ಷೇಪಗಳಿಗೆ ಹೆಸರುವಾಸಿ. ಆ ಪ್ರದೇಶದ ಸಾಲು ಬೆಟ್ಟಗಳ ಪೈಕಿ ಒಂದು ಬೆಟ್ಟದ ಹೆಸರು “ರಾಮನಮಲೆ”. ಅಲ್ಲಿ ಒಂದು ರಾಮನ ಗುಡಿ ಮತ್ತು ಮಸೀದಿಯು ಇದೆ.
Read also : ದಿನಮಾನ ಹೆಮ್ಮೆ : ಬತ್ತಲೆ ನಗೆಯ ಬೀದಿಯಲಿ ಕಾವ್ಯದ ನೆಲೆ ಹುಡುಕಾಡುವ ಕವಿ – ಪರಶುರಾಮ್ ಕಲಾಲ್
ಅಲ್ಲಿಗೆ ಹಿಂದೂಗಳು ಮತ್ತು ಮುಸ್ಲಿಮರು ಇಲ್ಲಿನ ರಾಮನಿಗೆ ಮತ್ತು ಮಸೀದಿಯ ಅಲ್ಲಾಹನಿಗೆ ಇಬ್ಬರಿಗೂ ಒಟ್ಟೊಟ್ಟಿಗೆ ನಡೆದುಕೊಳ್ಳುತ್ತಾರೆ.ಗಣಿ ಧಣಿಗಳ ಆರ್ಭಟಕ್ಕೂ ಮುನ್ನ ಇಲ್ಲಿನ ಹಾದಿಗಳು ಕಿರಿದಾಗಿದ್ದರೂ ಹಸಿರಿನ ಮಧ್ಯೆ ಬಂಡಿಜಾಡಿನಲಿ ಸಾಗುವಾಗ ಹಿಂದು -ಮುಸಲ್ಮಾನರಿಗೆ ಧರ್ಮಗಳ ಗೋಡೆಗಳ ಹಂಗಿರಲಿಲ್ಲ. ಹುಟ್ಟಿದ ಎಷ್ಟೋ ಮಕ್ಕಳಿಗೆ “ರಾಮನಮಲಿ” ಎಂದು ಹೆಸರಿಟ್ಟರು.
ರಾಮನಮಲಿ ಅವರಿಗೆ ನೋವು ತಾಕೀದೆ (Ramanamali)
ಇಂತಹ ಭಾವೈಕ್ಯ ಸ್ವಸ್ಥ ಭಾರತದ ವಾತಾವರಣವೊಂದರಲ್ಲಿ ಹುಟ್ಟಿದ ಕವಿ,ಡಿ.ರಾಮನಮಲಿಯವರ ಬರಹಗಳಲ್ಲಿ,ಬದುಕಿನಲ್ಲಿ ಭಾವೈಕ್ಯ ಅನ್ನೋದು ಸ್ಥಾಯೀಭಾವವಾಗಿ ಇರುವುದರಲ್ಲಿ ಆಶ್ಚರ್ಯವೇನಿಲ್ಲ. ೧೯೯೨ ರ ಬಾಬ್ರಿ ಮಸೀದಿ ಧ್ವಂಸ,ರಥಯಾತ್ರೆಗಳು ಉಂಟುಮಾಡಿದ ಪರಿಣಾಮಗಳ ನೋವನ್ನು ಎಲ್ಲಾ ಭಾರತೀಯ ಎಡಪಂಥೀಯ ಲೇಖಕರ ಹಾಗೆ ಕವಿ ರಾಮನಮಲಿಯವರೂ ಕೂಡ ಅನುಭವಿಸಿದ್ದಾರೆ.
ಅಷ್ಟೇ ಅಲ್ಲ , ನಾವೆಲ್ಲ ಮೇಲ್ನೋಟದಲ್ಲಿ ತಿಳಿದುಕೊಂಡ ಪಂಜಾಬನ್ನು, ಉಗ್ರಗಾಮಿತನದ ತೀವ್ರತೆಯ ಭಾವವನ್ನು ತಮ್ಮ ಸೃಜನಶೀಲ ಗುಣದಿಂದಾಗಿ ಎಷ್ಟು ಸಲೀಸಾಗಿ ನಮ್ಮ ಮನಸ್ಸನ್ನು ಕಾಡುತ್ತಾರೆ ಎಂಬುದಕ್ಕೆ ಅವರು ಬೀದರಿನಲ್ಲಿದ್ದಾಗ ಬರೆದ ಈ ಕವಿತೆ ಸಾಕ್ಷಿಯಾಗುತ್ತದೆ.
ನಮ್ಮ ಮನೆ ಬಾಜೂ ಖೋಲಿಯಲ್ಲಿ
ಸಿಖ್ಖರ ಪಾರಗೋಳು
ನಡೆಸ್ಯಾವ ಅಭ್ಯಾಸ
ಮುಖದ ಮೇಲೆ ದಾಡಿಲ್ಲ ತಲೆಗೆ ರುಮಾಲಿಲ್ಲ
ಕೈಯಲ್ಲಿ ಕಡಗವಿಲ್ಲ
ಬಿಂದ್ರನ್ ವಾಲೆ ತುಣುಕುಗಳಂತೂ
ಅಲ್ಲವೇ ಅಲ್ಲ
ಒಂದು ದಿನ…
ಬಾನಂಗಳದಲ್ಲಿ ಪುರ್ರನೆ ಹಾರುವ ಗುಬ್ಬಚ್ಚಿ
ರೊಪ್ಪನೆ ಬಿತ್ತು ವಿಲಿವಿಲಿ ಅಂತ ಅವುಚಿ
ರೆಕ್ಕೆ ಕಿತ್ತು ಸಂಕಟ ಪಡುವ ಗುಬ್ಬಚ್ಚಿಮರಿ
ಸಿಖ್ಖರ ಹುಡುಗ ಎತ್ತಿತು ಕರುಣೆಯಿಂದ
ಬೆದರುಗೊಂಬೆಯಾಗಿ ಯಾನು ಮಾಡುತೀಯೋ ಬೇಟಾ ಅಂದರೆ,
ಅಂಕಲ್,ಇಸ್ಕೂ ದವಾಲಗೇಯೇಂಗೆ
ಅನಬೇಕೆ ?
ಅಲ್ಲಿ ಮಾನವ ಜೀವದ ನಿತ್ಯಹರಣ
ಇಲ್ಲಿ ಪಕ್ಷಿ ಸಂಕುಲದ ಉಳಿವಿಗಾಗಿ ಕರುಣೆ.
(ಸಿಖ್ಖರ ಹುಡುಗರೂ ಗುಬ್ಬಚ್ಚಿ ಮರಿಯೂ…..
ಋತುಮಾನ, ಪು.ಸಂ.೩)
ಇಡೀ ಕವಿತೆಯಲ್ಲಿ ,
ಬಿಂದ್ರನ್ ವಾಲೆ ತುಣುಕಂತೂ ಅಲ್ಲವೇ ಅಲ್ಲ,ಎನ್ನುವ ಮಾತು,
ಆ ಮಕ್ಕಳು,ಗಾಯಗೊಂಡ ಗುಬ್ಬಚ್ಚಿ ಮರಿಗಳನ್ನು ಅವುಚಿ ಹೇಳುವ ,
ಅಂಕಲ್,ಇಸ್ಕೂ ದವಾಲಗಾಯೇಂಗೆ
ಎನ್ನುವ ಮಾತುಗಳು ಅಂತಃಕರಣ ತಟ್ಟುತ್ತವೆ. ಅಷ್ಟೇ ಅಲ್ಲದೆ,ಇಂದಿರಾ ಹತ್ಯೆಯಾದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಸಿಖ್ಖರ ಲಾರಿಗಳ ಮೇಲೆ,ಅಮಾಯಕ ಡ್ರೈವರುಗಳ ಮೇಲೆ ಹಲ್ಲೆಗಳಾದುವು.ಇಂತಹ ಸನ್ನಿವೇಶಗಳನ್ನು ಕವಿಯೊಬ್ಬ ನೋಡುವ ಮಾನವೀಯ ಕ್ರಮ ಈ ಕವಿತೆಯಲ್ಲಿ ಸಶಕ್ತವಾಗಿ ಮೂಡಿಬಂದಿದೆ.
ಬಿಸಿಲು, ಮಣ್ಣು ಮತ್ತು ಕ್ರಾಂತಿ ಈ ಭಾಗದ ಬಹುತೇಕ ಸೃಜನಶೀಲರ ಜೀವನವನ್ನು ಆವರಿಸಿಕೊಂಡ ಬಹುಮುಖ್ಯ ಆಶಯಗಳು.ವರ್ತಮಾನಕ್ಕೆ ಮುಖಾಮುಖಿಯಾಗುವ ಕವಿ,ಆಗಾಗ ಬಂಡಾಯ ಸಾರುತ್ತಾನೆ.
ಬಂಡಾಯಗಾರರು ಸ್ವಾಮಿ ನಾವು….
ಕಪ್ಪು ಮಣ್ಣಿನಲಿ ಬೆಳೆದಿರುವ ನಾವು
ಕೆಂಗುಲಾಬಿಗಳಾಗಿ ಅರಳಿರುವೆವು
ಕೋಮುವಾದದ ವಿರುದ್ಧ ನಾವು
ಕೆಂಡದುಂಡೆಗಳಾಗುವೆವು
ಹೀಗೆ ಬರೆದಾಗ ಕವಿ ಆಗಿನ್ನೂ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಗಮನಾರ್ಹ.
ನೆಲ್ಸನ್ ಮಂಡೇಲಾ ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಬಂದಾಗ,
ಕಪ್ಪು ಚಿನ್ನಗಳ
ಹುಡುಕಿ ಬಂದ
ನೋಬೆಲ್ ಗಳು
ಗಟ್ಟಿಮೆರುಗು
ಪಡೆದವು.
ಎಂದು ಬರೆಯುತ್ತಾರೆ.
ಕಳೆದ ಅರವತ್ತು ವರುಷಗಳಿಂದ ಭಾರತೀಯ ಜೀವನ ಕ್ರಮದ ಕಥನವನ್ನು ಬಲ್ಲ ರಾಮನಮಲಿಯವರಿಗೆ , ದೇಶದಲ್ಲಿ ಯಾವುದೇ ಸಣ್ಣ ಬದಲಾವಣೆಯಾದರೂ ತಕ್ಷಣ ಗೋಚರಿಸುತ್ತದೆ.ಒಂದು ಸಣ್ಣ ಗಲಭೆ,ದೊಂಬಿಗಳಿಗೆ ಸಿಕ್ಕು ಅಸ್ವಸ್ಥಗೊಂಡ ಭಾರತವನ್ನು ಕಂಡು ಮನಸ್ಸು ಒದ್ದಾಡುತ್ತದೆ.
ಇವೆಲ್ಲಾ ಹೇಗೆ ಗೊತ್ತಾಗುತ್ತದೆ ? ಎಂಬ ಪ್ರಶ್ನೆಗೆ,ಹೊಲದಲ್ಲಿ ಕೆಲಸ ಮಾಡುವ ರೈತನಿಗೆ ಮಣ್ಣು , ಇರುವೆಯ ಚಲನೆ,ತೆವಳುವ ಹುಳುವಿನ ಚಲನೆಯ ಬದಲಾವಣೆಗಳ ಮೇಲೆಯೇ ಏನೋ ಆಗಿದೆ ಎಂದು ಗ್ರಹಿಸಬಲ್ಲ. ಹಳ್ಳದ ನೀರು ಕೈ ತುಂಬಿಕೊಂಡರೆ ಸಾಕು, ಸುತ್ತಲಿನ ವಾತಾವರಣವನ್ನು ಹೇಳಬಲ್ಲ.ಇಂತಹದ್ದೇ ಸೂಕ್ಷ್ಮಗ್ರಾಹಿ ಮನಸ್ಥಿತಿ ಕವಿ,ಲೇಖಕ ರಾಮನಮಲಿಯವರದ್ದು.
ಮತೀಯ ಹಿಂಸೆಗೆ ಕಾರ್ಯ-ಕಾರಣ,ದೇಶದ ರಾಜಕಾರಣ,ಎಲ್ಲವನ್ನೂ ಅರಿತಿರುವ ಕವಿ,ಮನುಷ್ಯನ ಅಂತರಂಗದಲ್ಲಿ ಇರಬಹುದಾದ ಮಾನವೀಯ ಸೆಲೆಗಾಗಿ ಹುಡುಕಾಡುತ್ತಾನೆ ಮತ್ತು ಬರೆಯುತ್ತಾನೆ ಕೂಡ.
ಕರ ಸೇವೆಗೆ ನೆಲಸಮವಾದುದು ಗುಮ್ಮಟಗಳಲ್ಲ….
ಭಾವನೆಗಳ ಸಮಾಧಿ ಎಂದು ವಿಷಾದಭರಿತರಾಗಿ ಹೇಳುತ್ತಾರೆ.
ಅಷ್ಟೇ ಅಲ್ಲ,
ನನ್ನ ಕಾವ್ಯ ಹಸಿದವರಿಗೆ
ಮೃಷ್ಟಾನ್ನ ದೊರಕಿಸಿ ಕೊಡದಿದ್ದರೂ
ಹೋಗಲಿ
ಅವರ ತುತ್ತು ಅನ್ನದ
ದಾರಿ ದೀಪವಾದರೆ ಸಾರ್ಥಕ
ಎನ್ನುತ್ತಾರೆ.
೧೯೯೮ ರ ನಂತರ ಸುದೀರ್ಘ ಒಂದೂವರೆ ದಶಕದ ಅಂತರದಲ್ಲಿ ಬಂದ ಅವರ ಎರಡನೆಯ ಸಂಕಲನ “ಋತುಗಾನ”ದಲ್ಲಿ ಪ್ರತಿರೋಧಗಳಿಗಿಂತ ಭಾವ ತೀವ್ರತೆಗಳೇ ಹೆಚ್ಚಾಗಿವೆ.ಈ ಮಧ್ಯೆ ಅವರು ಗದ್ಯ, ಪ್ರಬಂಧ ಮತ್ತು ಊರಿನ ಶರಣ ಅಕ್ಕಿ ಕೊಟ್ರಪ್ಪನವರ ಕುರಿತು ಗ್ರಂಥವನ್ನೂ ಸಂಪಾದಿಸಿದ್ದಾರೆ.
ಮಾನವ ಪ್ರಗತಿಯ ಭಾವಲೋಕವಿದೆ (Ramanamali)
ಸೊಂಡೂರಿನ ರಾಮನಮಲೆ, ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿಯ ಪರಿಸರದ ಗಾಢ ಪ್ರಭಾವದಿಂದಾಗಿ,ಕವಿ ಬೀದರಿಗೆ ಹೋದರೂ,ಹರಪನಹಳ್ಳಿಗೆ ಹೋದರೂ , ತಂಬ್ರಹಳ್ಳಿಯ ಬಂದರೂ , ದೇಶದ ಯಾವುದೇ ಭಾಗಕ್ಕೆ ಹೋದರೂ ಕವಿ ಮನಸ್ಸು ಮಾನವೀಯತೆಗಾಗಿ ಮಿಡಿಯುತ್ತದೆ.ಅದಕ್ಕೆಂದೇ ಮತ್ತೆ ಮತ್ತೆ ಬರೆಯುತ್ತಾರೆ.ಹೀಗೆ ಜನರ ನಂಬಿಕೆಯ ಲೋಕದೊಳಗೆ ಪ್ರವೇಶಿಸಿ ಬರೆವ ಕವಿಯೊಬ್ಬ ಸುಮ್ಮನೆ ಬರೆಯಲಾರ.ಆತನ ಬರೆಹದಲ್ಲಿ ಮಾನವ ಪ್ರಗತಿಯ ಭಾವಲೋಕವಿರುತ್ತದೆ.
ಹರಪನಹಳ್ಳಿಯ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಲೇ ಹಲವಾರು ಪ್ರಗತಿಪರ ಸಂಘಟನೆಗಳಲ್ಲಿ ಪರೋಕ್ಷವಾಗಿ ದುಡಿದರು. ಸಮುದಾಯ ಸಾಂಸ್ಕೃತಿಕ ಚಳುವಳಿಗೆ ಇವರ ಕೊಡುಗೆಯನ್ನು ಮರೆಯುವಂತಿಲ್ಲ.ಡಿ.ಬಿ.ಬಡಿಗೇರ,ಚಿಕ್ಕಮಠರೊಂದಿಗೆ ಕೆಲಕಾಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಇಪ್ಟಾ ಸಂಘಟನೆಯಲ್ಲಿ ತೊಡಗಿಸಿಕೊಂಡರು.
ಒಟ್ಟಾರೆ,ಇವರು ಮತ್ತು ಇಸ್ಮಾಯಿಲ್ ಎಲಿಗಾರ ಮೇಷ್ಟ್ರು ಸದಾ ಒಂದಿಲ್ಲೊಂದು ಪ್ರಗತಿಪರ ಆಶಯಗಳನ್ನು ಹರಪನಹಳ್ಳಿಯ ನೆಲದಲ್ಲಿ ಜೀವಂತವಾಗಿರಿಸುವಲ್ಲಿ ಇವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ.
ಸಂಗಾತಿ ರಾಮನಮಲಿ ಎನ್ನುತ್ತಿದ್ದ ಬಹುತೇಕ ಸಮಕಾಲೀನರನ್ನು ಕಳೆದುಕೊಂಡಿರುವ ರಾಮನಮಲಿಯವರಿಗೀಗ ಏಕಾಂತದ ಮೌನ ಕಾಡುತ್ತಿರಬಹುದು.ನಮ್ಮಂತಹ ಕಿರಿಯರು “ರಾಮನಮಲಿ ಅಂಕಲ್,ಏನು ಬರೆದಿರಿ?”ಎಂಬ ಪ್ರಶ್ನೆ ಅಪ್ಯಾಯಮಾನವಾಗಿ ಕೇಳಿಸಿದಂತಾಗಿ,ಉತ್ಸಾಹದಿಂದ ಮಾತನಾಡುತ್ತಾರೆ.ಈ ಉತ್ಸಾಹ ಹೀಗೆಯೇ ಇರಲಿ ಎಂಬುದು ನಮ್ಮೆಲ್ಲರ ಆಶಯ
ಬಿ.ಶ್ರೀನಿವಾಸ