ದಾವಣಗೆರೆ (Davanagere): ಸೌಲಭ್ಯಗಳನ್ನು ಪಡೆಯಲು ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಹೇಳಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರ್.ಎಲ್ ಕಾನೂನು ಮಹಾವಿದ್ಯಾಲಯ, ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಶನಿವಾರ ದಾವಣಗೆರೆ ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ “ಕಾನೂನು ನೆರವು-ಅರಿವು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸಿಗುವ ಕಾನೂನು ಸೇವೆಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಕಾನೂನಿನ ಜ್ಞಾನ ಇಲ್ಲದಿದ್ದರೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ಸೌಲಭ್ಯಗಳನ್ನು ಪಡೆಯಲು ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಅಗತ್ಯ ಎಂದರು.
ದೇಶದ ಪ್ರತಿಯೊಬ್ಬ ನಾಗರೀಕರಿಗೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ 1987 ಕಾನೂನು ಕಾಯ್ದೆಯನ್ನು ಜಾರಿಗೆ ತರಲಾಯಿತು. ನಂತರ ಹಂತ ಹಂತವಾಗಿ ಬದಲಾವಣೆಯಾಗಿ 1995ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಅಸ್ಥಿತ್ವಕ್ಕೆ ಬಂತು. ಇದರ ನೆನಪಿಗಾಗಿ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕಾನೂನು ವಿದ್ಯಾರ್ಥಿಗಳ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಮಟ್ಟದಿಂದ ಹಿಡಿದು ತಾಲ್ಲೂಕು ಮಟ್ಟದವರೆಗೂ ಕಾನೂನು ಸೇವಾ ಪ್ರಾಧಿಕಾರ ತನ್ನ ಸೇವೆಯನ್ನು ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರು ಉಪಯೋಗ ಪಡೆದುಕೊಳ್ಳಬೇಕು. ಮಹಿಳೆಯರು, ಮಕ್ಕಳಿಗೆ, ಶೋಷಿತರಿಗೆ ಪ್ರಾಧಿಕಾರದಲ್ಲಿ ಉಚಿತ ಕಾನೂನಿನ ನೆರವು ಸಿಗಲಿದ್ದು, ಪ್ರಾಧಿಕಾರದಿಂದ ಲೋಕ್ ಅದಾಲತ್ ಆಯೋಜಿಸಿದಾಗ ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ, ಕಾನೂನು ಇಲ್ಲದೆ ದೇಶವನ್ನು ಶಾಂತಿ, ಸೌಹಾರ್ಧವಾಗಿ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಕಾನೂನು ವಿದ್ಯಾರ್ಥಿಗಳ ಮೇಲೆ ಸಮಾಜವನ್ನು ಕಟ್ಟುವ ಬಹುದೊಡ್ಡ ಜವಾಬ್ದಾರಿಯಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ದಿನಾಚರಣೆಯ ಜೊತೆಗೆ ದೇಶದಲ್ಲಿ ಆಚರಿಸುವ ದಿನಾರಚಣೆಗಳ ಇತಿಹಾಸವನ್ನು ಕಾನೂನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಯಾವುದೇ ದಿನಾಚರಣೆ ಔಪಚಾರಿಕಕ್ಕೆ ಆಚರಣೆ ಮಾಡುವುದಿಲ್ಲ. ಅದರ ಹಿಂದೆ ತ್ಯಾಗ, ಬಲಿದಾನ, ಹೋರಾಟ ಇರುತ್ತದೆ ಎಂದರು.
ದೇಶದಲ್ಲಿರುವ ಬಡತನ, ಹಸಿವು, ದೌರ್ಜನ್ಯವನ್ನು ನಿವಾರಣೆ ಮಾಡುವ ಮನೋಭಾವವನ್ನು ಕಾನೂನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಬಡವರು, ರೈತರ, ಶೋಷಿತರ ಬಗ್ಗೆ ಯೋಚಿಸುವುದರ ಜೊತೆಗೆ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
READ ALSO : Davanagere | ಭರತ್ಯನಾಟ್ಯ ಕಲಾವಿದೆ ಕು.ಮಂದಿರಾಗೆ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಆರ್ ಎಲ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಸ್.ಸತೀಶ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ.ಸಹ ಪ್ರಾಧ್ಯಾಪಕ ವಿದ್ಯಾಧರ ವೇದವರ್ಮ ಸೇರಿದಂತೆ ಇತರರು ಇದ್ದರು.