ದಾವಣಗೆರೆ (Davangere district ) : ಪ್ರೀತಿಸು ಎಂದು ಪೀಡಿಸುತ್ತಿದ್ದ ಆರೋಪಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
ನಗರದ ನಿಟುವಳ್ಳಿಯ ಅಲ್ತಾಫ್ (22) ಶಿಕ್ಷೆಗೊಳಗಾದ ಆರೋಪಿ. 16 ವರ್ಷ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅಲ್ತಾಫ್, ನನ್ನನ್ನು ಪ್ರೀತಿಸು ಎಂದು ಪೀಡಿಸಿ ಚುಡಾಯಿಸುತ್ತಿದ್ದನು. ನನ್ನನ್ನು ಪ್ರೀತಿ ಮಾಡಿಲ್ಲವೆಂದರೆ ನಿನ್ನ ಮುಖಕ್ಕೆ ಆಸಿಡ್ ಹಾಕಿ ನಿನ್ನನ್ನು ಕಿಡ್ನಾಪ್ ಮಾಡಿ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿ, ವಾಟ್ಸಾಪ್ ಡಿಪಿಯಿಂದ ಬಾಲಕಿಯ ಫೋಟೋ ತೆಗೆದುಕೊಂಡು ಆತನ ಫೋಟೋದೊಂದಿಗೆ ಸೇರಿಸಿ ಎಡಿಟ್ ಮಾಡಿ ಪ್ಲೆಕ್ಸ್ ಮಾಡಿಸಿ ದಿನಾಂಕ-22.03.2022ರಂದು ರಾತ್ರಿ ವೇಳೆ ಎಚ್ಕೆಆರ್ ಸರ್ಕಲ್ ಬಳಿಯಿರುವ ಸಜ್ಜನ್ ಬೇಕರಿ ಹತ್ತಿರ ಪ್ಲೆಕ್ಸ್ ಕಟ್ಟಿದ್ದ. ಇದನ್ನು ನೋಡಿದ ಸಂಬಂಧಿಕರು ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿದ್ದರು.
ಈ ಕುರಿತು ಬಾಲಕಿಯ ತಂದೆ ಅಲ್ತಾಫ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ತನಿಖಾಧಿಕಾರಿ ಮಲ್ಲಮ್ಮಚೌಬೆ, ಅಲ್ತಾಫ್ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
READ ALSO: DAVANAGERE : ಎಸ್ಸಿ–ಎಸ್ಟಿ ಸಮುದಾಯಗಳು ಅನುದಾನ ಗ್ಯಾರಂಟಿಗೆ ಬಳಕೆ : ಪ್ರತಿಭಟನೆ
ಶುಕ್ರವಾರ ಈ ಪ್ರಕರಣ ವಿಚಾರಣೆ ನಡೆಸಿದಾಗ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮನಾರಾಯಣ ಹೆಗಡೆ ಅವರು, ಆರೋಪಿ ಅಲ್ತಾಫ್ನಿಗೆ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಆರೋಪಿ ಪರವಾಗಿ ಸರ್ಕಾರಿ ವಕೀಲರಾದ ಸುನಂದ ಮಡಿವಾಳರ್ ವಾದ ಮಂಡಿಸಿದ್ದರು.