ದಾವಣಗೆರೆ: ಕೇಂದ್ರ ಸರ್ಕಾರ ಪ್ರಸ್ತುತ ಬದಲಾವಣೆ ಮಾಡಿರುವ ಮೂರು ಅಪರಾಧಿಕ ಕಾನೂನುಗಳಲ್ಲಿ ಹಿಂದೆ ಶಿಕ್ಷೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ, ಈಗ ನ್ಯಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಲೇಖಕ ಡಾ.ಡಿ.ವಿ. ಗುರುಪ್ರಸಾದ್ ತಿಳಿಸಿದರು.
ಜಿಲ್ಲಾ ವಕೀಲರ ಸಂಘ, ಆರ್.ಎಲ್. ಕಾನೂನು ಕಾಲೇಜು, ಲಾಯರ‍್ಸ ಲಾ ಪಬ್ಲಿಷರ‍್ಸ ಬೆಂಗಳೂರು ಆಶ್ರಯದಲ್ಲಿ ನಗರದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ಅವರು ರಚಿಸಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಸರ್ಕಾರ ಮೂರು ಅಪರಾಧಿಕ ಕಾನೂನುಗಳನ್ನು ಬದಲಾವಣೆ ಮಾಡಿದ್ದು, ಅದರಲ್ಲಿ ಎರಡು ಬ್ರಿಟೀಷರ ಕಾಲದ ಹಳೆಯ ಕಾನೂನುಗಳು ಮತ್ತೊಂದು ಸುಮಾರು ಅರ್ಧ ಶತಕದಷ್ಟು ಹಳೆಯ ಕಾನೂನಾಗಿದೆ. ಆದ್ದರಿಂದ ಈ ಮೂರು ಕಾನೂನುಗಳನ್ನು ಬದಲಾವಣೆ ಮಾಡಿದೆ. ಆಗ ಈ ಮೂರು ಕಾನೂನುಗಳಲ್ಲಿ ಶಿಕ್ಷೆಗೆ ಪ್ರಾಧಾನ್ಯತೆ ನೀಡಲಾಗಿತ್ತು ಈಗ ನ್ಯಾಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ಹಾಗೆಂದು ಶಿಕ್ಷೆಯಿಲ್ಲ ಎಂದರ್ಥವಲ್ಲ ಎಂದು ತಿಳಿಸಿದರು.
ಪ್ರಸ್ತುತ ಬದಲಾವಣೆಯಾಗಿರುವ ಕಾನೂನುಗಳು ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಮತ್ತು ಸಾಮಾಜಿಕ ನಿಯಮಗಳಿಗೆ ಹೊಂದಿಕೆಯಾಗುವಂತೆ ಬದಲಾವಣೆಯಾಗಿವೆ ಎಂದರು.
ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಗುರುಪ್ರಸಾದ್ ಅವರು ಈ ಪುಸ್ತಕಕ್ಕೆ ಹಾಕಿರುವ ಪರಿಶ್ರಮ ಪುಸ್ತಕ ನೋಡಿದರೆ ತಿಳಿಯುತ್ತದೆ. ಕ್ಷಣಮಾತ್ರದಲ್ಲಿ ಪುಸ್ತಕ ಬಿಡುಗಡೆಗೊಳಿಸಬಹುದು ಆದರೆ ಅದರ ಹಿಂದಿನ ಶ್ರಮ ಬಹುದೊಡ್ಡದು ಎಂದು ಹೇಳಿದರು.
ಜಿಲ್ಲಾ ನ್ಯಾಯಲಯದ ಸಿಇಒ ಶ್ರೀನಿವಾಸ್ ಅವರ ಪದೋನ್ನತಿ ಪುಸ್ತಕವೂ ಬಿಡುಗಡೆಗೊಳಿಸಲಾಯಿತು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್. ಅರುಣಕುಮಾರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿದರು. ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ, ಆರ್.ಎಲ್. ಲಾ ಕಾಲೇಜು ಪ್ರಾಂಶುಪಾಲ ಡಾ. ಜಿ.ಎಸ್. ಯತೀಶ್ ಪಾಲ್ಗೊಂಡಿದ್ದರು. ವಕೀಲ ಅಜಯ್ ಪ್ರಾರ್ಥಿಸಿದರು, ವಕೀಲ ಜಿ.ಕೆ. ಬಸವರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.