ದಾವಣಗೆರೆ: ಸಾರ್ವಜನಿಕ ಜೀವನದಲ್ಲಿ ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ ಎಂದು ಭಾವಿಸಿ, ಕರ್ತವ್ಯ ನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ದಿಯಾಗಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿಪ್ರಾಯಪಟ್ಟರು.
ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ಕರ್ನಾಟಕ ರಾಜ್ಯ ತಾಂಡ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಕೊಂಡ ಹಿರಿಯ ವಕೀಲ ಎನ್.ಜಯದೇವನಾಯ್ಕರನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಯಾವುದೇ ವ್ಯಕ್ತಿ ಅಧಿಕಾರ ದೊರೆತಾಗ ಹೆಚ್ಚು ವಿನಯವಂತನಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಹೊಂದಿದಾಗ ಮಾತ್ರ ಸ್ಥಾನಮಾನಗಳ ಜತೆ ವ್ಯಕ್ತಿಯ ವ್ಯಕ್ತಿತ್ವ ಬೆಳಗಲು ಸಾಧ್ಯ. ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಯುವ ಜನತೆಗೆ ಆದರ್ಶಗಳನ್ನು ಹೇಳಿಕೊಡುವ, ಆದರ್ಶವಾದ ವ್ಯಕ್ತಿತ್ವದ ಅವಶ್ಯಕೆತೆ ಇದೆ ಎಂದರು.
ಅಭಿನಂದನೆ ಸ್ವೀಕರಿಸಿದ ಎನ್.ಜಯದೇವನಾಯ್ಕ ಮಾತನಾಡಿ, ರಾಜಕಾರಣದಲ್ಲಿ ಪ್ರಾಮಾಣಿಕತೆ, ಬದ್ದತೆ ಮತ್ತು ತತ್ವ ಸಿದ್ದಾಂತಗಳು ಕಣ್ಮರೆ ಆಗುತ್ತಿದ್ದು, ಜನತೆ ರಾಜಕೀಯದಿಂದ ವಿಮುಖರಾಗುತ್ತಿದ್ದಾರೆ. ತಮಗೆ ದೊರೆತಿರುವ ಸ್ಥಾನಮಾನವನ್ನು ಶೋಷಿತ ಅಭಿವೃದ್ದಿ ಮತ್ತು ಸಾರ್ವಜನಿಕರ ಒಳಿತಿಗಾಗಿ ಮೀಸಲಿಡುವುದಾಗಿ ಹೇಳಿದ ಅವರು, ಜಿಲ್ಲಾ ವಕೀಲರ ಸಂಘವು ನೀಡಿದ ಸನ್ಮಾನ ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ಕುಮಾರ್ ಮಾತನಾಡಿ, ಜೂನ್ 28, 1972, ಡಾ.ಬಿ.ಆರ್.ಅಂಬೇಡ್ಕರ್ ವಕೀಲರಾದ ದಿನವಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನದ ಅಡಿಯಲ್ಲಿ ಎಲ್ಲಾ ಅಂಗಗಳು ಕಾರ್ಯ ನಿರ್ವಹಿಸುತ್ತಿವೆ. ಸಂವಿಧಾನ ಅಡಿಯಲ್ಲಿ ಸಾಮಾನ್ಯರೂ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶಗಳು ದೊರೆತಿವೆ. ಜಯದೇವನಾಯ್ಕರು ಸಂವಿಧಾನದ ಆದರ್ಶಗಳಿಗೆ ಅನುಗುಣವಾಗಿ ಸಾಮಾಜಿಕ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಅಚಲವಾದ ನಂಚಿಕೆ ಇದೆ ಎಂದು ಅಭಿನಂದಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹಾವೀರ ಮ.ಕರೆಣ್ಣವರ್, ಹಿರಿಯ ವಕೀಲರಾದ ಹೆಚ್.ಎನ್.ರಾಜಶೇಖರಪ್ಪ, ರಾಮಚಂದ್ರ ಕಲಾಲ್, ಡಿ.ಪಿ.ಬಸವರಾಜ್, ಎನ್.ಎಂ.ಆಂಜನೇಯ, ಮಲ್ಲೇಶ್ ನಾಯ್ಕ, ಟಿ.ಹೆಚ್.ಸಿದ್ದಪ್ಪ ಲೋಕಿಕೆರೆ, ತಿಪ್ಪೇಶ್ ರಾಥೋಡ್ ಮಾತನಾಡಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ.ನೀಲಕಂಠಯ್ಯ, ಟಿ.ಹೆಚ್.ಮಧುಸೂಧನ್, ವಾಗೀಶ್ ಕಟ್ಟಿಗಿಹಳ್ಳಿ ಮಠ, ಎಂ.ಚೌಡಪ್ಪ, ಎಲ್.ನಾಗರಾಜ್ ಇತರರು ಇದ್ದರು.