ದಾವಣಗೆರೆ ಅ.18 (Davanagere) : ನಗರದ ಎ.ವಿ.ಕೆ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ನಿಲ್ಯಕ್ಷದಿಂದ ಗ್ರಾಹಕರೊಬ್ಬರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೂಲಕ ಗ್ರಾಹಕರಿಗೆ ಬಡ್ಡಿ ಸಮೇತ ಪರಿಹಾರ ನೀಡಲು ಆದೇಶ ನೀಡಲಾಗಿದೆ.
ದಾವಣಗೆರೆ ನಿವೃತ್ತ ಸರ್ಕಾರಿ ಅಭಿಯೋಜಕರಾದ ನಾಗರಾಜ ಆಚಾರ್ ಅವರು ನಗರದ ಎ.ವಿ.ಕೆ. ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದು. 2023 ರ ಸೆಪ್ಟೆಂಬರ್ 28 ರಂದು ಖಾತೆಯ ವಿವರವನ್ನು ಪರಿಶೀಲಿಸಿದಾಗ ಇದೇ 2023 ರ ಸೆಪ್ಟೆಂಬರ್ 26 ರಂದು ಖಾತೆಯ ಯು.ಪಿ.ಐ. ಮೂಲಕ ರೂ. 99,000 ಮೊತ್ತ ವರ್ಗಾವಣೆಯಾಗಿರುತ್ತದೆ.
ಖಾತೆಯಿಂದ ಹಣವನ್ನು ವರ್ಗಾಹಿಸಲು ತಾವು ಯಾವುದೇ ತೆರನಾದ ಪ್ರಕ್ರಿಯೆಗಳನ್ನು ಪಾಲಿಸದೇ ಅವರ ಗಮನಕ್ಕೆ ಬಾರದಂತೆ ವರ್ಗಾವಣೆಗೊಂಡಿದ್ದರ ಮೊತ್ತದ ಬಗ್ಗೆ ಬ್ಯಾಂಕಿಂಗ್ ಓಂಬಡ್ಸ್‍ಮನ್‍ಗೆ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಪರಿಹಾರ, ನ್ಯಾಯ ಸಿಕ್ಕಿರಲಿಲ್ಲ.
ಈ ಬಗ್ಗೆ ಹಣ ಕಳೆದುಕೊಂಡ ನಾಗರಾಜ ಆಚಾರ್ ಅವರು ದಾವಣಗೆರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು, ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಅವರ ಖಾತೆಯಿಂದ ವರ್ಗಾಹಿಸಲ್ಪಟ್ಟ ರೂ. 99,000 ಗಳನ್ನು ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಸಂಪೂರ್ಣ ಹಣವನ್ನು ಹಿಂತಿರುಗಿಸುವಂತೆ ಮತ್ತು ದೂರುದಾರರಿಗೆ ಉಂಟಾದ ಮಾನಸಿಕ ಪರಿಹಾರ ಮೊತ್ತವಾಗಿ 10,000 ರೂ. ಹಾಗೂ 5000 ರೂ. ದೂರು ದಾಖಲಿಸಲು ಆಗಿರುವ ವೆಚ್ಚ ಕೊಡಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಗಿ, ಸದಸ್ಯರಾದ ತ್ಯಾಗರಾಜನ್ ಆದೇಶಿಸಿದ್ದಾರೆ.
Read also : Davanagere | ಮಹರ್ಷಿ ವಾಲ್ಮೀಕಿ ನಿಗಮದಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ