ದಾವಣಗೆರೆ (Davanagere) : ವಿವಿಧ ಕಾರಣಗಳಿಂದ ವಿವಾಹ ವಿಚ್ಚೇದನ ಮತ್ತು ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ 25 ಜೋಡಿಗಳು, ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ರಾಜಿ ಮೂಲಕ ಮತ್ತೊಮ್ಮೆ ಜೀವನ ನಡೆಸಲು ಒಪ್ಪಿದ್ದಾರೆ.
ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ 17, ಹರಿಹರದಲ್ಲಿ 3, ಚನ್ನಗಿರಿ ಮತ್ತು ಜಗಳೂರಿನಲ್ಲಿ ತಲಾ 2 ಹಾಗೂ ಹೊನ್ನಾಳಿ ತಾಲೂಕು ನ್ಯಾಯಾಲಯದಲ್ಲಿ 1 ಜೋಡಿ ಸೇರಿ ಒಟ್ಟು 25 ಜೋಡಿಗಳು ನಾನಾ ಕಾರಣಕ್ಕೆ ತಮ್ಮ ಬಾಳಿನಲ್ಲಿ ಎದುರಾಗಿದ್ದ ಕಲಹ ಮರೆತು, ಮರಳಿ ಒಂದಾದರು.
ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಮರಳಿ ಒಂದಾದ 17 ಜೋಡಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹಾಗೂ ಇತರೆ ನ್ಯಾಯಾಧೀಶರು ಅಭಿನಂದಿಸಿ, ಮುಂಬರುವ ಜೀವನ ಸುಖಕರವಾಗಲಿ ಎಂದು ಹಾರೈಸಿ, ಸಿಹಿ ಹಂಚಿ, ಜವಳಿ ವ್ಯಾಪಾರಿಯೊಬ್ಬರ ಸಹಕಾರದಿಂದ ಸೀರೆಯೊಂದಿಗೆ ಬಾಗಿನ ಇಟ್ಟು ಮನೆಗೆ ಕಳುಹಿಸಿಕೊಟ್ಟರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಲೋಕ ಅದಾಲತ್ನಲ್ಲಿ ರಾಜೀ ಮೂಲಕ ಒಟ್ಟು 7,042 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು, 11,48,01,784 ರೂ. ಮತ್ತು 1,46,134 ವ್ಯಾಜ್ಯಪೂರ್ವ ಪ್ರಕರಣ ಇತ್ಯರ್ಥಪಡಿಸಿ, 61,38,25,221 ರೂ. ವ್ಯವಹರಣೆ, ಸರಕಾರಿ ವಸೂಲಾತಿ ಮತ್ತು ಪರಿಹಾರ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.
Read also : Davanagere | ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ಧ ಸಂದೇಶ ಸಾರುವ “ನೋಡು ಬಾ ನಮ್ಮೂರ ಮಸೀದಿ” ಕಾರ್ಯಕ್ರಮ
71 ಅಪರಾಧಿಕ, 142 ಚೆಕ್ ಅಮಾನ್ಯ, 42 ಬ್ಯಾಂಕ್ ವಸೂಲಾತಿ, 8 ಇತರೆ ಹಣ ವಸೂಲಾತಿ, 51 ಅಪಘಾತ ಪರಿಹಾರ, 112 ವಿದ್ಯುತ್ ಕಳ್ಳತನ, 6 ಅಕ್ರಮ ಮರಳು ಗಣಿಗಾರಿಕೆ ಪ್ರಕರಣ, 23 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 122 ಜಾರಿ ಅರ್ಜಿಗಳು ಅಲ್ಲದೆ ಹಲವು ಕಾರಣಕ್ಕಾಗಿ ದಾಖಲಿಸಿದ 52 ದಾವೆ ಮತ್ತು 39 ಜೀವನಾಂಶ ಕೋರಿ ದಾಖಲಿಸಿದ್ದ ದಾವೆ ಸೇರಿ ಒಟ್ಟು 7,042 ಜಾರಿಯಲ್ಲಿದ್ದ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ಜಿಲ್ಲಾದ್ಯಂತ 290ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರುಗಳಿಗೆ ಸರಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಡಲಾಗಿದೆ ಎಂದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಸೇರಿ ನ್ಯಾಯಾಧೀಶರು ಇದ್ದರು.