ದಾವಣಗೆರೆ.ಮೇ.17 ; ಡೆಂಗ್ಯೂ ನಿಯಂತ್ರಣದ ಬಗ್ಗೆ ಜನರಿಗೆ ಜಾಗೃತಿ ಇದ್ದಾಗ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ನಿಯಂತ್ರಣ ಕುರಿತ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.
ನಿಂತ ನೀರು ಸೊಳ್ಳೆಗಳ ತವರು, ಡೆಂಗಿ ಜ್ವರ ಈಡಿಸ್ ಎಂಬ ಸೊಳ್ಳೆಯಿಂದ ಹರಡುತ್ತದೆ, ನೀರಿನ ಸಂಗ್ರಹದ ಪರಿಕರಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಚಗೊಳಿಸಿ, ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ನೀರಿನ ಪರಿಕರಗಳಲ್ಲಿನ ಬಾಲಹುಳುಗಳೇ ಸೊಳ್ಳೆ, ಇವುಗಳ ಉತ್ಪತ್ತಿಯನ್ನು ನಿಯಂತ್ರಣದಲ್ಲಿಟ್ಟು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಡೆಂಗ್ಯೂ ಮಹಾಮಾರಿಯನ್ನು ಸೋಲಿಸಿ ಎಂದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಕೆ.ಎಚ್. ಗಂಗಾಧರ್, ದಾವಣಗೆರೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ದೇವರಾಜ್ ಪಟಾಗೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕರು ಡಾ.ಮಧು, ಡಾ. ಸುರೇಶ್ ಬಾರ್ಕಿ ಡಿಹೆಚ್‍ಓ, ಡಾ. ರೇಣುಕಾ ಆರಾಧ್ಯ ಆರ್ ಸಿ ಎಚ್ , ಡಾ. ರಾಘವನ್ ಡಿಎಸ್‍ಓ, ಡಾ. ರುದ್ರಸ್ವಾಮಿ ಎಫ್‍ಡಬ್ಲ್ಯೂಓ ಹಾಗೂ ಎಲ್ಲಾ ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರು ಇನ್ನಿತರರು ಭಾಗವಹಿಸಿದ್ದರು.