ದಾವಣಗೆರೆ ಜೂ.14 : ತುರ್ತು ಸಂದರ್ಭದಲ್ಲಿ ಜೀವಗಳನ್ನುಳಿಸಲು ರಕ್ತದ ಅವಶ್ಯಕತೆ ಇರುತದೆ. ಈ ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕೆಂದು ಆಡಳಿತಾ ವೈದ್ಯಾಧಿಕಾರಿ ಡಾ.ಗೀತಾ ಹೇಳಿದರು.
ಶುಕ್ರವಾರ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷÀನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ವಿವಿಧ ರಕ್ತ ಕೇಂದ್ರಗಳು, ಜಿಲ್ಲಾ ಆರ್.ಆರ್.ಸಿ ಕಾಲೇಜುಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ, ದಾನದಲ್ಲಿ ಅತಿ ಶ್ರೇಷ್ಠ ದಾನ ರಕ್ತದಾನವೇ ಆಗಿದೆ. ಇದನ್ನು 2005 ರಿಂದ ರಕ್ತದಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಎಲ್ಲರೂ ರಕ್ತದ ಮಹತ್ವವನ್ನು ತಿಳಿದು ರಕ್ತದಾನಕ್ಕೆ ಮುಂದಾಗಬೇಕು ಎಂದರು.
ರಕ್ತದಾನ ಮಾಡುವುದರಿಂದ ರಕ್ತದಾನಿಗಳು ಆರೋಗ್ಯವಾಗಿರುತ್ತಾರೆ. ಕೆಲವರು ಅಪಘಾತ ದಿಂದ ಚಿಕಿತ್ಸೆ ಪಡೆಯುವವರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ತುರ್ತಾಗಿ ರಕ್ತ ಬೇಕಾಗುತ್ತದೆ, ಅಂತಹ ಸಮಯದಲ್ಲಿ ರಕ್ತದ ಅವಶ್ಯವಾಗಿದ್ದು, 18 ರಿಂದ 60 ರ ವಯಸ್ಕರು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ರಕ್ತದಾನವನ್ನು ಮಾಡುವಂತೆ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ವಿಶ್ವದೆಲ್ಲೆಡೆ ಮನುಷ್ಯನಿಗೆ ಎರಡು ರೀತಿಯ ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಮೊದಲನೆಯದಾಗಿ ತುರ್ತು ಪರಿಸ್ಥಿತಿಗಳಲ್ಲಿ ಅಂದರೆ, ಅಪಘಾತ, ಪ್ರಕೃತಿ ವಿಕೋಪಗಳು, ಹೆಣ್ಣು ಮಕ್ಕಳ ಪ್ರಸೂತಿ ಸಮಯ ಮತ್ತಿತರ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳು, ಎರಡನೆಯದಾಗಿ ರಕ್ತಸಂಬಂಧಿ ಖಾಯಿಲೆಗಳಾದ ತಲಸ್ಸೀಮಿಯಾ, ಹಿಮೋಫಿಲಿಯಾ, ಸಿಕಲ್ ಸೆಲ್ ಅನಿಮೀಯ ಮುಂತಾದವುಗಳು. ಈ ಎರಡೂ ಪರಿಸ್ಥಿತಿಗಳಲ್ಲಿ ನವಜಾತ ಶಿಶುಗಳಿಂದ ದೊಡ್ಡವರವರೆಗಿನ ಎಲ್ಲಾ ವಯೋಮಾನದವರಿಗೂ ಸುರಕ್ಷಿತ ರಕ್ತದ ಅವಶ್ಯಕತೆ ಇರುತ್ತದೆ. ಹೀಗೆ ಅತ್ಯಾವಶ್ಯಕವಾಗಿರುವ ರಕ್ತ ಮತ್ತು ರಕ್ತದ ಉತ್ಪನ್ನವನ್ನು ಕೃತಕವಾಗಿ ಸೃಷ್ಟಿಮಾಡಲು ಸಾಧ್ಯವಿಲ್ಲ. ಈ ವೇಳೆ ರಕ್ತದಾನಿಯೊಬ್ಬನೇ ಆಪದ್ಬಾಂಧವನಾಗಿರುತ್ತಾನೆ, ಆದ್ದರಿಂದ ಎಲ್ಲರು ರಕ್ತದಾನ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಪ್ರಶಸ್ತಿಪತ್ರ ಪ್ರದಾನ ಮಾಡಲಾಯಿತು. ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ, ಕೊಬ್ಬಿನ ಅಂಶ ಕಡಿಮೆಯಾಗುತ್ತದೆ, ಹೊಸ ರಕ್ತ ಉತ್ಪಾದನೆಗೊಂಡು, ಚುರುಕುತನ, ಜ್ಞಾಪನಶಕ್ತಿ ವೃದ್ದಿಯಾಗುವುದು, ಗಂಡಸರು 3 ತಿಂಗಳಿಗೊಮ್ಮೆ, ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ.ಮ.ಕರೆಣ್ಣವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಜಾಥಾಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.
ಜಾಥಾ ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ವಿದ್ಯಾರ್ಥಿಭವನ ಸರ್ಕಲ್, ಕೆಇಬಿ ಸರ್ಕಲ್, ಚೇತನ ಹೋಟೆಲ್, ಮೋತಿ ವೀರಪ್ಪ ಕಾಲೇಜ್ ಮೂಲಕ ಸಿ.ಜಿ.ಆಸ್ಪತ್ರೆಗೆ ಬಂದು ಮುಕ್ತಾಯಗೊಳ್ಳಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಆರ್.ಸಿ.ಹೆಚ್ ಅಧಿಕಾರಿ ಡಾ; ರೇಣುಕಾರಾಧ್ಯ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾದ ಡಾ.ಮಧು, ನಿವಾಸಿ ವೈದ್ಯಾಧಿಕಾರಿ ಡಾ.ಮುರುಳೀಧರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್, ಸ್ವಯಂ ಪ್ರೇರಿತ ರಕ್ತದಾನಿಗಳು, ಶುಶ್ರೂಷಕ ಕಾಲೇಜಿನ ವಿದ್ಯಾರ್ಥಿಗಳು, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂಧಿ ವರ್ಗದವರು ಸೇರಿದಂತೆ ಹಲವಾರು ಜನರು ಇದ್ದರು.