ದಾವಣಗೆರೆ ಅ.16 (Davanagere) : ಲಿಂಗ ಅಸಮಾನತೆ ಇಲ್ಲದೆ ಹೆಣ್ಣಿರಲಿ, ಗಂಡಿರಲಿ ಸಂವಿಧಾನಾತ್ಮಕವಾಗಿ ಜೀವಿಸುವ ಹಾಗೂ ಶಿಕ್ಷಣ ಪಡೆಯುವ ಹಕ್ಕು ಸಮಾನವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣನವರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಲಲಿತಾ ಇಂಟರ್ ನ್ಯಾಷನಲ್ ಶಾಲೆ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಮಿಷನ್ ಶಕ್ತಿ ಯೋಜನೆಯ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಅಂತರಾಷ್ತ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೆಣ್ಣು ಮಗುವಿನ ಪ್ರಾಮುಖ್ಯತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಹೆಣ್ಣು ಭ್ರೂಣ ಹತ್ಯೆ, ಗಂಡು ಮಗು ಬೇಕು ಎಂಬ ಕುಟುಂಬದವರ ಹಂಬಲ, ಇದು ಪರಿಸರಕ್ಕೆ ವಿರುದ್ಧವಾದ ಚಟುವಟಿಕೆಯಾಗಿದೆ. ಅಪ್ರಾಪ್ತ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯನ್ನು ಮಾಡುವುದರ ಕುರಿತು ಪೋಕ್ಸೋ ಕಾಯ್ದೆಯಲ್ಲಿನ ಕಾನೂನುಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡುತ್ತಾ, ಈ ರೀತಿಯ ಯಾವುದಾದರೂ ಪ್ರಕರಣಗಳು ಕಂಡು ಬಂದಲ್ಲಿ 1098 ಮಕ್ಕಳ ಸಹಾಯವಾಣಿಗೆ, 112 ಏಕ ತುರ್ತು ಸಹಾಯವಾಣಿಗೆ ಕರೆ ಮಾಡುವುದರ ಮುಖಾಂತರ ಅಪಾಯದಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡಬಹುದು ಎಂದು ತಿಳಿಸಿದರು.
ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಾನೂನುಗಳು ಇರುವುದರ ಕುರಿತಾಗಿ ಮಾಹಿತಿ ನೀಡಿದರು. ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸ್ಥಾನಮಾನ ನೀಡಿರುತ್ತಾರೆ. ಆದರೆ ಸುತ್ತ ಮುತ್ತಲಿನ ದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರಾಮುಖ್ಯತೆ ನೀಡಿರುವುದಿಲ್ಲ, ಆದ್ದರಿಂದ ಆ ದೇಶಗಳಲ್ಲಿ ಅಭಿವೃದ್ದಿ ಹೊಂದಿರುವುದಿಲ್ಲ, ಬೇರೆ ದೇಶಗಳು ಹಿಂದುಳಿಯುವುದಕ್ಕೆ ಇದು ಒಂದು ಪ್ರಮುಖ ಕಾರಣವಾಗಿರುತ್ತದೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿಯರಿಗೆ ಕಾರ್ಯಕ್ರಮದ ಕುರಿತಾಗಿ 2 ಪುಟಗಳ ಸಾರಾಂಶವನ್ನು ಬರೆದು ತಮಗೆ ಕಳುಹಿಸಿಕೊಡುವಂತೆ ತಿಳಿಸಿದರು.
Read also : Davanagere | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಡಿಸಿಗೆ ಮನವಿ
ಜಿಲ್ಲಾ ವಕೀಲರ ಸಂಘದ ಮಹಿಳಾ ಪ್ರತಿನಿಧಿ ಸದಸ್ಯರಾದ ಭಾಗ್ಯಲಕ್ಷ್ಮಿ ಮಹಿಳೆಯರ ಮತ್ತು ಮಕ್ಕಳ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರವನ್ನು ಒದಗಿಸುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸ್ತನ್ಯಪಾನವನ್ನು ಮಾಡಿಸುವುದರ ಮೂಲಕ ಮಕ್ಕಳ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಾಣಮಾಡಬೇಕು, ಭೂಮಿತಾಯಿ ಸಕಲ ಜೀವಿಗಳಿಗೆ ಬದುಕಲು ನೆಲ, ಜಲ, ಗಾಳಿ ನೀಡುತ್ತದೆ, ಇದೇ ಸ್ಥಾನ ಹೆಣ್ಣು ಮಕ್ಕಳಿಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ, ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಗು ತಾಯಿಯ ಗರ್ಭದಲ್ಲಿರುವಾಗ ಮತ್ತು ನಂತರ ಬೆಳವಣಿಗೆಯಾಗಲು ತಾಯಿಯ ಆರೈಕೆ ಅತ್ಯಗತ್ಯವಾಗಿದೆ. ಈ ಹಂತದಲ್ಲಿ ತಾಯಿಗೆ ಪೌಷ್ಠಿಕ ಆಹಾರ ಬಹಳ ಮುಖ್ಯವಾಗಿರುತ್ತದೆ. ಮಗು ಹುಟ್ಟುವ ಮುನ್ನ, ನಂತರದ ಬೆಳವಣಿಗೆ ಹಾಗೂ ತನ್ನ ವಿದ್ಯಾಭ್ಯಾಸ ಮಾಡಲು ತಾಯಿಯ ಶ್ರಮ ಸಾಕಷ್ಠಿರುತ್ತದೆ.
ಮಕ್ಕಳ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ, 18 ವರ್ಷದೊಳಗಿನ ಹೆಣ್ಣು ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ ಮತ್ತು ಚಂಚಲತೆಯಿಂದ ಕೂಡಿದ್ದು, ಈ ಸಮಯದಲ್ಲಿ ಮನಸ್ಸನ್ನು ನಾವೇ ಹತೋಟಿಯಲ್ಲಿಟ್ಟುಕೊಳ್ಳಬೇಕು, ಅತೀ ಹೆಚ್ಚು ಮೊಬೈಲ್ ಬಳಕೆ ಮಾಡಬಾರದು, ಹೆಣ್ಣು ಯಾವಾಗಲೂ ನಗುನಗುತ್ತಾ ಇರಬೇಕು, ಸ್ತ್ರೀಯರನ್ನು ಗೌರವಿಸಬೇಕು, ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ತ್ರವಾಗಿದ್ದು, ಈ ರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ ಪೂರಕವಾದ ವಾತಾವರಣವನ್ನು ಸೃಷ್ಠಿಸಿ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ರಾಜಕೀಯ ಆರ್ಥಿಕ ಕ್ಷೇತ್ರದಲ್ಲಿ ನಿರ್ದಿಷ್ಟ ಮೀಸಲಾತಿಯನ್ನು ನೀಡಲಾಗಿದೆ, ಜಾತಿ ಅಸಮಾನತೆ ಉಂಟಾಗಬಾರದೆಂದು ಸಂವಿಧಾನದಲ್ಲಿ ಪ್ರಮುಖ ಮಿಸಲಾತಿಯನ್ನು ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನು ಮಾಡುವುದರಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್ ಜಿ.ಎಸ್. ಪ್ರಾಂಶುಪಾಲರಾದ ಮಣಿಕಂಠನ್ ಕೆ.ವಿ., ಲಲಿತಾ ಇಂಟರ್ ನ್ಯಾಷನಲ್ ಶಾಲೆ, ಆಡಳಿತಾಧಿಕಾರಿ ಸುರೇಶ್ ಜಿ.ಪಿ. ಲಲಿತಾ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರು ಹಾಜರಿದ್ದರು