ದಾವಣಗೆರೆ (Davanagere): ಜಿಲ್ಲೆಯ 74 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತೆ ಹೊಂದಿರುವ ಗ್ರಾಮಗಳೆಂದು ಗುರುತಿಸಿದ್ದು ಜಿಲ್ಲೆ ಶೇ 85 ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದ್ದು ಇದನ್ನು ಶೇ 100 ರಷ್ಟು ಸಾಧಿಸಲು ಎಲ್ಲರೂ ಶ್ರಮಿಸಬೇಕೆಂದು ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಮಹಾನಗರ ಪಾಲಿಕೆಯ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಲೋಕ ಶಿಕ್ಷಣ ವಿಭಾಗ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಡಯಟ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ, ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 58 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
1947 ರಲ್ಲಿ ನಮ್ಮ ದೇಶದ ಸಾಕ್ಷರತೆ ಪ್ರಮಾಣ ಶೇ 12 ರಷ್ಟಿತ್ತು, 1951 ರಲ್ಲಿ ನಡೆದ ಜನಗಣತಿಯಿಂದ ಈ ಪ್ರಮಾಣ ಶೇ 18 ರ ಸಾಕ್ಷರತಾ ಪ್ರಮಾಣವಿತ್ತು. 2011ರ ಜನಗಣತಿಯಲ್ಲಿ ರಾಜ್ಯದ ಸಾಕ್ಷರತಾ ಪ್ರಮಾಣ ಶೇ 75.36 ಇದ್ದು ಇದರಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಶೇ 82, ಮಹಿಳೆಯರು ಶೇ 68 ರಷ್ಟು ಸಾಕ್ಷರತೆ ಕಂಡು ಬಂದಿದೆ ಎಂದರು.
ಅಂದಾಜಿನ ಪ್ರಕಾರ 2024 ರಲ್ಲಿ ನಮ್ಮ ಜಿಲ್ಲೆ ಶೇ 85.95 ಸಾಕ್ಷರತಾ ಪ್ರಮಾಣ ಹೊಂದಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾ ಪಂಚಾಯತ್ ಲಿಂಕ್ ಡಾಕ್ಯುಮೆಂಟ್ ಅನ್ವಯ ಸರ್ಕಾರ ಒಂದು ಸಾವಿರ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯಿತಿ ಅಂಕಿ ಅಂಶದನ್ವಯ ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 24 ಗ್ರಾಮ ಪಂಚಾಯಿತಿ ಒಳಗೊಂಡ 74 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಜೊತೆಗೆ 280033 ಜನರನ್ನು ಕಲಿಕಾ ಕಾರ್ಯಕ್ರಮದ ಮೂಲಕ ಸಾಕ್ಷರರನ್ನಾಗಿ ಮಾಡಿ ಪ್ರಮಾಣ ಪತ್ರ ನೀಡಲಾಗಿದೆ.
Read also : Davanagere news | ಸೆ.14,15 ರಂದು ವಿವಿಧ ಇಲಾಖೆಗಳ ಗ್ರೂಪ್ ಬಿ.ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ
ದಾವಣಗೆರೆ ಮಹಾನಗರ ಪಾಲಿಕೆಯ ಎಲ್ಲಾ ಪೌರಕಾರ್ಮಿಕರನ್ನು ಸಾಕ್ಷರರನ್ನಾಗಿಸಲು ನಿರ್ದೇಶನ ನೀಡಿದ್ದು. ಅವರು ಸಮೀಕ್ಷೆ ಕೈಗೊಂಡು ಪಾಲಿಕೆಯಲ್ಲಿ ಒಟ್ಟು 440 ಅನಕ್ಷರಸ್ಥರಿದ್ದು ಇವರನ್ನು ಸಾಕ್ಷರರನ್ನಾಗಿಸಲು 120 ಗಂಟೆಗಳ ಕಾಲ ಕಲಿಕೆ ಮತ್ತು 80 ಗಂಟೆಗಳ ಕಾಲ ಪ್ರಾಯೋಗಿಕ ತರಬೇತಿ ನೀಡುತ್ತಿದ್ದು ಮುಂದಿನ ಮೂರು ತಿಂಗಳ ಅವಧಿಯಲ್ಲಿ ತರಬೇತಿ ನೀಡಿ ಸಾಕ್ಷರತಾ ಪರೀಕ್ಷೆ ಮಾಡಲಾಗುತ್ತದೆ, ಈ ಪರೀಕ್ಷೆ ಪಾಸಾದವರಿಗೆ ಸಾಕ್ಷರಸ್ಥರು ಎಂದು ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ವರ್ಷ ಒಟ್ಟು 148 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತೆಗೆ ಒಳಪಡಿಸಬೇಕೆಂಬ ಗುರಿ ಹೊಂದಿದ್ದೇವೆ. ಗ್ರಾಮ ಪಂಚಾಯತಿಯಲ್ಲಿಯೂ 259 ಸದಸ್ಯರು ಅನಕ್ಷರಸ್ಥರಿದ್ದಾರೆ, ಅವರಿಗೂ ಕಲಿಸುವ ಮೂಲಕ ತರಬೇತಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕೇರಳದಲ್ಲಿ ನೂರು ಪ್ರತಿಶತ ಸಾಕ್ಷರತಾ ಪ್ರಮಾಣ ಇದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಸಹ ಶೇ 100 ರಷ್ಟು ಸಾಕ್ಷರತೆ ಹೊಂದಲು ನೀವು ಸಾಕ್ಷರಸ್ಥರಾಗಿ, ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ತಿಳಿಸಿದರು.
ಸಾಕ್ಷರತಾ ಕಾರ್ಯಕ್ರಮದಲ್ಲಿ ಸೇವೆಗೈದ ಸಾಕ್ಷರ ಸೇನಾನಿಗಳಾದ ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು ಇವರಿಗೆ ಸನ್ಮಾನಿಸಲಾಯಿತು. ಸಾಕ್ಷರತಾ ಸಪ್ತಾಹದ ಅಂಗವಾಗಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣ ಶೆಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಧು ಶಾ, ದ್ವಿತೀಯ ಸ್ಥಾನ ಸೌಮ್ಯ.ಎಸ್, ತೃತೀಯ ಸ್ಥಾನ ಪಡೆದ ವಿಜಯಲಕ್ಷ್ಮಿ .ಎಸ್ ಇವರಿಗೆ ಬಹುಮಾನ ನೀಡಲಾಯಿತು.
ಪಾಲಿಕೆ ಸದಸ್ಯರಾದ ವಿ. ನಾಗರಾಜ್, ಪಾಲಿಕೆ ಆಯುಕ್ತೆ ರೇಣುಕಾ, ಡಯಟ್ ಪ್ರಾಂಶುಪಾಲರಾದ ಗೀತಾ ಎಸ್, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ವಾಗಿಸ್ ಮಲ್ಕಿ ಒಡೆಯರ್, ಕೆಸಿ ಬಸವರಾಜ, ಗುರುಸಿದ್ಧ ಸ್ವಾಮಿ, ಸಾಕ್ಷರತಾ ಕಲಾತಂಡದ ಸಿಬ್ಬಂದಿಗಳು, ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ಸಿಬ್ಬಂದಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶಪ್ಪ ಎಚ್ .ದೊಡ್ಮನಿ ಸ್ವಾಗತಿಸಿ ಸಾಕ್ಷರತೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಾಯಕರಾದ ಪೂರ್ಣಿಮಾ ಜಿ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿದರು.