ದಾವಣಗೆರೆ (Davangere District) : ಪ್ರಕರಣಗಳ ಶೀಘ್ರ ವಿಲೇವಾರಿ, ಪ್ರಕರಣಗಳ ತನಿಖೆಯಲ್ಲಿ ತನಿಖಾಧಿಕಾರಿಗಳಿಂದ ಆಗುವ ಲೋಪಗಳನ್ನು ಸರಿಪಡಿಸಿಕೊಳ್ಳಲು, ನೊಂದವರಿಗೆ ನ್ಯಾಯ ದೊರಕಿಸಕೊಡುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯತೆ ತುಂಬಾ ಪ್ರಮುಖವಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗ್ಡೆ ಹೇಳಿದರು.
ಭಾನುವಾರ ಜಿಲ್ಲಾ ಪೊಲೀಸ್ ಕಛೇರಿ (District Police Office) ಯ ಪೊಲೀಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮನ್ವಯ ಸಭೆಯಿಂದ ಜ್ಞಾನ, ಕಾರ್ಯ ದಕ್ಷತೆ ಹೆಚ್ಚುತ್ತದೆ, ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಉಂಟಾಗುವ ಗೊಂದಲಗಳು, ಲೋಪದೋಷಗಳು, ಕಾನೂನುಗಳ ಪಾಲನೆ ಬಗ್ಗೆ ವಿಸ್ತೃತ ಚರ್ಚೆ ಮಾಡುವ ಮೂಲಕ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ನೊಂದವರಿಗೆ ಸರಿಯಾದ ನ್ಯಾಯ ದೊರಕಿಸುವ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತದೆ. ಎಲ್ಲರೂ ಈ ಸಮನ್ವಯ ಕಾರ್ಯಗಾರದಲ್ಲಿ ಮುಕ್ತವಾಗಿ ಭಾಗವಹಿಸುವ ಮೂಲಕ ಸಭೆ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
Read also : Davanagere news | ಪಾದಯಾತ್ರೆ ಕೂಡಾ ಯೋಗದ ಒಂದು ಭಾಗ: ಬಸವಪ್ರಭು ಶ್ರೀ
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ ಮಾತನಾಡಿ, ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು, ಇಲಾಖೆಗಳ ನಡುವೆ ಆಗುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಹಮ್ಮಿಕೊಂಡಿರುವ ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಭೆಯು ತುಂಬಾ ಉಪಯುಕ್ತವಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾನತಾಡಿ, ನ್ಯಾಯಾಂಗ ಇಲಾಖೆ, ಅಭಿಯೋಜನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯ ಸಭೆ ಹಮ್ಮಿಕೊಂಡಿರುವ ಉದ್ದೇಶ ಈಡೇರಿದಾಗ ಮಾತ್ರ ಸಭೆಗೆ ಮಹತ್ವ ಬರುತ್ತದೆ. ಹೊಸ ಹೊಸ ಕಾನೂನುಗಳು ಬಂದಿದ್ದು ಅವುಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಾಗಿದೆ, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಎವಿಡೆನ್ಸ್ ಗಳನ್ನು ಹೇಗೆ ಸಂಗ್ರಹಿಸಬೇಕು, ನ್ಯಾಯಾಲಗಳಿಗೆ ಸಲ್ಲಿಸುವ ಬಗ್ಗೆ ಅರಿವು ಇರುವುದು ತುಂಬಾ ಅವಶ್ಯಕವಾಗಿದೆ. ನಾವುಗಳು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದಾಗ ನೊಂದವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
1 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್, ಹಿರಿಯ ಕಾನೂನು ಅಧಿಕಾರಿ ಬಸವರಾಜ್, 2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಪ್ರವೀಣ್ ಕುಮಾರ್, ಪೋಕ್ಸೋ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಸಿವಿಲ್ ನ್ಯಾಯಾಧೀಶರಾದ ನಿವೇದಿತ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಹೆಚ್.ಕೆ., ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಸವರಾಜ, ಸರ್ಕಾರಿ ಅಭಿಯೋಜಕರು. ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಸಿಇಎನ್ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.