ದಾವಣಗೆರೆ : ನೊಂದವರು ದೂರು ಕೊಡಲು ಹೋದಾಗ ಪೊಲೀಸರು ಎಫ್‌ಐಆರ್ ದಾಖಲಿಸದಿದ್ದರೆ, ಠಾಣೆಯಲ್ಲಿರುವ ಕ್ಯೂಆರ್ ಕೋಡ್ ಮೊಬೈಲ್‌ನಲ್ಲಿ ಸ್ಕಾನ್ ಮಾಡಿ ಮೇಸೆಜ್ ಹಾಕಿ ಇಲ್ಲವೇ ನಮಗೆ ಕರೆ ಮಾಡಿ ಮಾಹಿತಿ ನೀಡಿದರೆ ಪರಿಶೀಲಿಸಿ ಶಿಸ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಇಲ್ಲಿನ ಎಸ್ಪಿ ಕಚೇರಿಯಲ್ಲಿ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತರ ಅಹವಾಲು ಸ್ವೀಕರಿಸಿ ಮಾತನಾಡಿ, “ಪೊಲೀಸರು ನಿಮ್ಮ ದೂರು ಸ್ವೀಕರಿಸದಿರುವ ಬಗ್ಗೆ ತಿಳಿಸಿದರೆ, ಠಾಣೆಗಳಲ್ಲಿರುವ ಸಿಸಿ ಕ್ಯಾಮೇರಾ ಮೂಲಕ ಪರಿಶೀಲಿಸಿ, ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
“ಇಲಾಖೆಯಿಂದಲೂ ಪೊಲೀಸರನ್ನೇ ಮಾರುವೇಷದಲ್ಲಿ ಠಾಣೆಗಳಿಗೆ ಕಳುಹಿಸಿ ದೂರು ಕೊಡಿಸುವ ಮೂಲಕ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ನಮ್ಮ ಇಲಾಖೆಯಿಂದಲೇ ಹೋದವರ ಬಳಿ ದೂರು ದಾಖಲಿಸಿಕೊಳ್ಳದ ಹಾಗೂ ಸರಿಯಾಗಿ ವರ್ತಿಸದ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ” ಎಂದರು.
ಜಗಳೂರು ತಾಲೂಕಿನ ಪಲ್ಲಾಗಟ್ಟೆ ಸುಧಾ ಮಾತನಾಡಿ, ನನ್ನ ಮಗಳಿಗೆಯಾದ ತೊಂದರೆ ಬಗ್ಗೆ ಬಿಳಚೋಡು ಠಾಣೆಯಲ್ಲಿ ದೂರು ಕೊಡಲು ಹೋದಾಗ ಬೆಳಗ್ಗೆಯಿಂದ ಸಂಜೆ ವರೆಗೂ ಕೂರಿಸಿ, ಕೇಸ್ ತೆಗೆದುಕೊಳ್ಳದೇ ವಾಪಸ್ ಕಳಿಸಿದ್ರು” ಎಂದಾಗ, ಎಸ್ಪಿ ಮೇಲಿನಂತೆ ಪ್ರತಿಕ್ರಿಯಿಸಿದರು.
ಮಹಾಂತೇಶ್ ಮಾತನಾಡಿ, “ಜಗಳೂರು ತಾಲೂಕಿನ ತೊಗರಸಿಹಳ್ಳಿಯಲ್ಲಿ ಕ್ಷೌರ ಮಾಡದ ಬಗ್ಗೆ ಅಕಾರಿಗಳ ಗಮನಕ್ಕೆ ತಂದ ಕಾರಣ ೩೦ ಮನೆಗಳ ಜನರನ್ನು ಅಸ್ಪಶೃರಂತೆ ನಡೆಸಿಕೊಳ್ಳುತ್ತಿದ್ದು, ನಾವು ಘನತೆಯಿಂದ ಬದುಕುವಂತಹ ವಾತಾವರಣ ಸೃಷ್ಟಿಸಬೇಕು” ಎಂದು ಮನವಿ ಮಾಡಿದರು.
ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಸರಕಾರದ ನಿಯಮಗಳ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಬೇಡ ಜಂಗಮರಿಲ್ಲ. ಆದರೂ ವೀರಶೈವ ಜಂಗಮರು ತಮ್ಮ ಮಕ್ಕಳ ಜಾತಿ ಬೇಡ ಜಂಗಮ ಎಂದು ಶಾಲೆಗಳಲ್ಲಿ ಬರೆಸುತ್ತಿದ್ದಾರೆ. ಆದ್ದರಿಂದ ಶಾಲಾ ಮುಖ್ಯಸ್ಥರಿಗೆ ಇದಕ್ಕೆ ಆಸ್ಪದ ನೀಡದಂತೆ ಸೂಚನೆ ನೀಡಬೇಕು” ಎಂದು ಒತ್ತಾಯಿಸಿದರು.
ನಿಂಗಪ್ಪ ಬನ್ನಿಹಟ್ಟಿ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಕೋರಿದರು.
ಸೂರ್ಯ ಪ್ರಕಾಶ್ ಮಾತನಾಡಿ, ಎಸ್ಸಿ-ಎಸ್ಟಿ ಕಾಲೊನಿಗಳಲ್ಲಿ ದಾವಣಗೆರೆ ಒನ್ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ಆವರಗೆರೆ ವಾಸು ಮಾತನಾಡಿ, ಕಲ್ಲೇಶ್ವರ ಮಿಲ್ ಬಳಿಯ ಸ್ಲಂವೊಂದರಲ್ಲಿ ೨೩ ಕುಟುಂಬಗಳು ವಾಸಿಸುತ್ತಿದ್ದು, ಅವರಿಗೆ ಶೌಚಾಲಯವಿಲ್ಲ. ಆದ್ದರಿಂದ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕುಎಂದು ಒತ್ತಾಯಿಸಿದರು.
ಸಭೆಯಲ್ಲಿ ಎಸಿ ದುರ್ಗಾಶ್ರೀ, ಎಎಸ್‌ಪಿಗಳಾದ ವಿಜಯಕುಮಾರ್ ಸಂತೋಷ್, ಜಿ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಉಪಸ್ಥಿತರಿದ್ದರು
ಕೋಟ್…
ನಗರದಲ್ಲಿ ಉತ್ತಮ ಜಾಗವೊಂದನ್ನು ಗುರುತಿಸಿ ಅಂಬೇಡ್ಕರ್ ಭವನ ನಿರ್ಮಿಸುವ ಬಗ್ಗೆಯೂ ಜಿಲ್ಲಾಡಳಿತ ಪರಿಶೀಲಿಸುತ್ತಿದೆ. ಪಾಳು ಬಿದ್ದಿರುವ ಬಾಬು ಜಗಜೀವನರಾಂ ಭವನವನ್ನು ಪಾಲಿಕೆಯ ಎಸ್ಸಿ-ಎಸ್ಟಿ ನೌಕರರ ಕೌಶಲ್ಯಾಭಿವೃದ್ಧಿಗೆ ಬಳಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ.
-ಉಮಾ ಪ್ರಶಾಂತ್, ಎಸ್ಪಿ