ದಾವಣಗೆರೆ (Davanagere): ರೈತರಿಗೆ ಗುಣಮಟ್ಟದ ಮೋಟಾರ್ ಪಂಪ್ಸೆಟ್ ವಿತರಣೆ ಮಾಡಬೇಕು. ಒಂದು ವೇಳೆ ಕಳಪೆ ಗುಣಮಟ್ಟದ ಮೋಟಾರ್, ಪಂಪ್ಸೆಟ್ ಕೊಟ್ಟಿರುವುದು ಗಮನ ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್,ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ (ಡಿಬಿಟಿ) ಕೊಳವೆಬಾವಿ ಕೊರೆಸಿದ 14 ಅರ್ಹ ಫಲಾನುಭವಿ ರೈತರಿಗೆ ಮೋಟಾರ್ ಪಂಪ್ಸೆಟ್, ಪರಿಕರ ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್, ಆದಿಜಾಂಬವ, ವಾಲ್ಮೀಕಿ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಡಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿದ ಅರ್ಹ ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಮೋಟಾರ್, ಪಂಪ್ಸೆಟ್, ಪರಿಕರ ವಿತರಣೆ ಮಾಡಲಾಗಿದೆ ಎಂದು ರೈತರಿಂದ ದೂರುಗಳು ಬಂದಿವೆ. ಹೀಗಾಗಿ ಕಳಪೆ ಗುಣಮಟ್ಟದ ಮೋಟಾರ್, ಪಂಪ್ಸೆಟ್, ಪರಿಕರ ವಿತರಣೆ ಮಾಡಿರುವುದು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮೋಟಾರ್, ಪಂಪ್ಸೆಟ್, ಪರಿಕರ ವಿತರಿಸುವಾಗ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಬಂದಿವೆ. ಫಲಾನುಭವಿಗಳು ನನ್ನ ಗಮನಕ್ಕೆ ತಂದರೆ ಕ್ರಮ ತೆಗೆದುಕೊಳ್ಳಲಾಗುವುದು. ಫಲಾನುಭವಿಗಳು ಕೂಡ ಹಣ ಕೊಡಬಾರದು. ಸರ್ಕಾರ ಕೊಟ್ಟ ಸೌಲಭ್ಯಗಳನ್ನು ಸರಿಯಾಗಿ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಕಂದಗಲ್ಲು ಗ್ರಾಮದ ಗಂಗಾಧರಪ್ಪ ಅವರಿಗೆ ಹಳೆ ಟಿಸಿ ಕೊಟ್ಟಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ವರದಿ ಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಬ್ಬಿಣದ ಮೀಟರ್ ಬೋರ್ಡ್ಗಳಿಂದ ಮಳೆ ಬಂದ ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸಿ ರೈತರು ಮೃತಪಟ್ಟಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇನ್ಮುಂದೆ ರೈತರಿಗೆ ಫೈಬರ್ ಮೀಟರ್ ಬೋಡ್ರ್ಗಳನ್ನು ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Read also : Davanagere |10 ನೇ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಪ.ಜಾತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಇದೇ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯ ಕುರ್ಕಿ, ಗುಮ್ಮನೂರು, ನರಸೀಪುರ, ನಲ್ಕುಂದ, ದಾಗಿನಕಟ್ಟೆ, ಬಾವಿಹಾಳು, ಮಾಯಕೊಂಡ, ಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಅರ್ಹ ಫಲಾನುಭವಿ ರೈತರಿಗೆ ಮೋಟಾರ್, ಪಂಪ್ಸೆಟ್, ಪರಿಕರಗಳನ್ನು ವಿತರಿಸಲಾಯಿತು.
ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬಸವರಾಜ್, ಫೀಲ್ಡ್ ಆಫೀಸರ್ ಮರಿಸ್ವಾಮಿ, ಗುತ್ತಿಗೆದಾರರು ಸೇರಿದಂತೆ ಇನ್ನಿತರರಿದ್ದರು.