Kannada News | Dinamaana.com | 25-05-2024
ಮಳೆಗಾಲ ಶುರು ಆದಂತೆ ಹಲವು ಶ್ವಾಸಕೋಶದ ಕಾಯಿಲೆಗಳು ವಿಜೃಂಭಿಸಲು ಪ್ರಾರಂಭಿಸುತ್ತವೆ. ಇದರಲ್ಲಿ ಮುಖ್ಯವಾದದ್ದು ಅಂದರೆ ಅಸ್ತಮಾ ಹಾಗೂ ಅಲರ್ಜಿ ನೆಗಡಿ ಮತ್ತು ಕೆಮ್ಮು.
ನಾವು ಹಲವಾರು ಜನರ ಬಾಯಿಯಲ್ಲಿ ಕೇಳುತ್ತೇವೆ, ಬೇಸಿಗೆ ಕಾಲದಲ್ಲಿ ಸಂಪೂರ್ಣ ಆರೋಗ್ಯವಾಗಿರುವ ನನಗೆ ಮಳೆಗಾಲ ಶುರು ಆಯಿತೆಂದರೆ ಸಾಕು ಕೆಮ್ಮು, ನೆಗಡಿ, ಉಬ್ಬಸ ಕಾಡಿಸಲು ಆರಂಭಿಸುತ್ತವೆ.
ಇದಕ್ಕೆ ಮುಖ್ಯ ಕಾರಣ ಧಿಡೀರ್ ಎಂದು ಸುಡು ಸುಡು ಬೇಸಿಗೆ ಕಾಲದಲ್ಲಿ ಇರುವಂತಹ ವಾತಾವರಣ ತಕ್ಷಣ ಮಳೆ ಶುರು ಆಗಿ ತಂಪಾಗುವುದು. ಜೊತೆಗೆ ಮೋಡ ಕವಿದ ವಾತಾವರಣ ಕೂಡ ನಮ್ಮೊಳಗಿನ ಅಸ್ತಮಾ ಅಲರ್ಜಿಯನ್ನು ಬಡಿದೆಬ್ಬಿಸುತ್ತದೆ. ಹಾಗೂ ಮಳೆನೀರಲ್ಲಿ ಅಪ್ಪಿ ತಪ್ಪಿ ನೆನೆಯುವುದು (ದೇಹ ಹಾಗೂ ಮುಖ್ಯವಾಗಿ ತಲೆ) ಅಸ್ತಮಾ ಅಲರ್ಜಿಯನ್ನು ಉದ್ರೇಕಿಸುತ್ತದೆ.
Read also : ವಿಶ್ವ ಅಸ್ತಮಾ ದಿನಾಚರಣೆ: ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ
ಇಂತಹ ರೋಗಿಗಳಿಗೆ ವಯಸ್ಸು ಹೆಚ್ಚಾದಂತೆ ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಅಸ್ತಮಾ ಅಲರ್ಜಿ ನಿಧಾನವಾಗಿ ಚಳಿಗಾಲ ಹಾಗೂ ಹಲವು ವರ್ಷಗಳ ನಂತರ ಬೇಸಿಗೆ ಕಾಲದಲ್ಲಿ ಕೂಡ ಕಾಣಿಸಿಕೊಳ್ಳುವ ಸಂಭವ ಇರುತ್ತದೆ.
ಕಾಯಿಲೆ ಲಕ್ಷಣಗಳು
- ಉಸಿರಾಟದ ತೊಂದರೆ, ಉಬ್ಬಸ, ದಮ್ಮು, ಏದುಸಿರು, ಎದೆಯಲ್ಲಿ ಉಸಿರು ಸಿಕ್ಕಿಕೊಂಡ ಅನುಭವ, ಎದೆಯ ಮೇಲೆ ಏನೋ ಭಾರವಾದ ವಸ್ತು ಇಟ್ಟಂತ ಅನುಭವ.
- ನಮಗೆ ಹಾಗೂ ಅಕ್ಕಪಕ್ಕದವರಿಗೂ ಉಸಿರಾಡಿದಾಗ ಕೇಳಿ ಬರುವ ಸಿಳ್ಳೆ ತರಹ ಸುಯ್ ಸುಯ್ ಶಬ್ದ
- ನಿಯಂತ್ರಣಕ್ಕೆ ಬಾರದ ಕೆಮ್ಮು, ಉಸಿರಾಡಲು ಕಷ್ಟ ಪಡಿಸುವ ಕೆಮ್ಮು, ಕೆಮ್ಮಿ ಕೆಮ್ಮಿ ಹೊಟ್ಟೆ ನೋವು ಬರುವುದು
- ಮೂಗು ಕಟ್ಟಿ ಉಸಿರಾಡಲು ಕಷ್ಟ ಆಗುವುದು(ಅದರಲ್ಲೂ ರಾತ್ರಿ ಮಲಗುವಾಗ), ಮೂಗಿನಿಂದ ನೀರು ನೀರಂತೆ ಹರಿಯುವುದು ಮತ್ತು ಸಿಂಬಳ ಸೋರುವುದು/ ಕಟ್ಟುವುದು
- ತಲೆ ಭಾರ, ಕಣ್ಣು ಉರಿ ಕೂಡ ಕಂಡು ಬರಬಹುದು
ಮುನ್ನೆಚ್ಚರಿಕೆ
- ಯಾವಾಗಲೂ ಉಣ್ಣೆಯ ಬಟ್ಟೆ ಧರಿಸಿ ಬೆಚ್ಚಗೆ ಇರುವುದು
- ಹೊರಗಡೆ ಅನಗತ್ಯವಾಗಿ ಅಡ್ಡಾಡುವುದು ಕಡಿಮೆ ಮಾಡಬೇಕು.
- ಮಳೆಯಲ್ಲಿ ನೆನೆಯುವುದು ನಿಷಿದ್ಧ
- ಕೈ ಕಾಲು ತೊಳೆಯುವಂತಹ ಸಣ್ಣ ಪುಟ್ಟ ವಿಷಯಕ್ಕೂ ಬಿಸಿ ನೀರು ಬಳಸಿ
- ಫಿಲ್ಟರ್ ಅಥವಾ ಕಾದು ಅರಿಸಿದ ನೀರು ಸೇವಿಸಿ
- ಫ್ರಿಜ್ ನಲ್ಲಿ ಇರುವ ತಣ್ಣನೆ ಪದಾರ್ಥ ನೇರವಾಗಿ ತೆಗೆದು ತಿನ್ನುವುದು, ತಂಪಾದ ಪಾನೀಯ, ಐಸ್ ಕ್ರೀಂ ವರ್ಜ್ಯ
7) ಬೇರೆ ಊರಿಗೆ ಪ್ರಯಾಣ ಮಾಡುವ ಅನಿವಾರ್ಯತೆ ಬಂದರೆ ನಿಮ್ಮ ಮನೆಯ ನೀರು ತೆಗೆದುಕೊಂಡು ಹೋಗಬೇಕು. ಊರಿಂದ ಊರಿಗೆ ಕುಡಿಯುವ ನೀರಿನ ಬದಲಾವಣೆ ಕಾಯಿಲೆ ಉದ್ರೇಕಿಸುವುದು
ಪರಿಹಾರ
- ಸಣ್ಣ ಪುಟ್ಟ ಕೆಮ್ಮು ನೆಗಡಿ ಕೂಡ ಅಲಕ್ಷಿಸದೆ ನಿಮ್ಮ ವೈದ್ಯರ ಭೇಟಿ ಮಾಡಿ
- ಸ್ವಂತ ಔಷಧಿ ಮಾಡಿಕೊಳ್ಳುವ ಪದ್ಧತಿ ಹಾನಿಕರ
- ನೀವು ಈಗಾಗಲೇ ಹಲವು ವರ್ಷಗಳಿಂದ ಅಸ್ತಮಾ, ಅಲರ್ಜಿ ಇರುವಂತಹ ರೋಗಿ ಆಗಿದ್ದರೆ ನಿಮಗೆ ನಿತ್ಯ ಉಪಯೋಗಿಸಲು ಔಷಧಿ ಹೇಳಿದ್ದರೆ ಅದನ್ನು ತಪ್ಪದೆ ಮುಂದುವರೆಸಿ
- ನೀವು ಈಗಾಗಲೇ ಇನ್ಹೇಲರ್ ಔಷಧಿ ಸೇವಿಸುತ್ತಾ ಇದ್ದರೆ ತಪ್ಪದೆ ಮುಂದುವರೆಸಿ
- ನಿಮಗೆ ಹೊಸದಾಗಿ ಕಾಯಿಲೆಯು ಅವಶ್ಯಕತೆಗೆ ಅನುಗುಣವಾಗಿ ವೈದ್ಯರು ಇನ್ಹೇಲರ್ ಬರೆದರೆ ಅದನ್ನು ಉಪಯೋಗಿಸಲು ಹಿಂಜರಿಕೆ ಅನುಮಾನ ಬೇಡ, ಏಕೆಂದರೆ ಇನ್ಹೇಲರ್ ಅತ್ಯಂತ ಸುರಕ್ಷಿತ ಔಷಧಿ ಆಗಿದ್ದು ಕಾಯಿಲೆ ಎಲ್ಲಿದೆಯೋ (ಶ್ವಾಸಕೋಶ) ಅಲ್ಲಿಗೇ ನೇರವಾಗಿ ಔಷಧಿ ತಲುಪಿಸುತ್ತದೆ.
- ಹೇಗೆ ಕಣ್ಣಿನ ತೊಂದರೆಗೆ ಕಣ್ಣಿನ ಡ್ರಾಪ್ಸ್, ಕಿವಿಗೆ ಕಿವಿ ಡ್ರಾಪ್ಸ್, ಮೊಡವೆಗೆ ಮುಲಾಮು ನೇರ ಕಾಯಿಲೆ ಸ್ಥಳದಲ್ಲಿ ಕೆಲಸ ಮಾಡುತ್ತವೆಯೋ ಹಾಗೆಯೇ ಇನ್ಹೇಲರ್ ಕೂಡ. ಹಾಗೂ ಇದರಿಂದ ತಕ್ಷಣ ಉಪಶಮನ ಹಾಗೂ ಅಡ್ಡ ಪರಿಣಾಮಗಳು ಇರುವುದಿಲ್ಲ.
- ಮೂಗಿನ ಸಮಸ್ಯೆಗೆ ಸ್ಪ್ರೇ ಅಥವಾ ಡ್ರಾಪ್ಸ್ ವೈದ್ಯರು ಬರೆದು ಕೊಟ್ಟರೆ ಉಪಯೋಗಿಸಿ
- ಹಲವು ಬಾರಿ ನೆಬುಲೈಸರ್ ಮತ್ತು ಚುಚ್ಚುಮದ್ದು ವೈದ್ಯರು ನೀಡಬೇಕಾಗುತ್ತದೆ
- ಬೆಳಗಿನ ಜಾವ 2 ಗಂಟೆಯಿಂದ 7 ಗಂಟೆ ತೀವ್ರ ಉಸಿರಾಟದ ತೊಂದರೆ ಬರುವ ಸಮಯ ಆಗಿದ್ದು, ಪರಿಸ್ಥಿತಿ ಕೈ ಮೀರಿದರೆ ತಕ್ಷಣ ಸಮೀಪದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ತೆರಳಬೇಕು.
ಕಾಯಿಲೆಯು ರೋಗ ಲಕ್ಷಣಗಳ ಪರಿಚಯ, ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾದ ಚಿಕಿತ್ಸೆಯಿಂದ ಅಸ್ತಮಾ ಅಲರ್ಜಿ ಮಳೆಗಾಲದಲ್ಲಿ ಹತೋಟಿಗೆ ತರಲು ಸಾಧ್ಯವಿದೆ
ಡಾ.ಎನ್. ಹೆಚ್.ಕೃಷ್ಣ,
ಉಸಿರಾಟದ ಹಾಗೂ ಶ್ವಾಸಕೋಶದ
ಕಾಯಿಲೆಗಳ ಸಲಹಾ ವೈದ್ಯರು,
ದಾವಣಗೆರೆ
drkrishna_nh@yahoo.com