ದಾವಣಗೆರೆ : ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಮುಂಜಾಗೃತಾ ಕ್ರಮ ಅನುಸರಿಸುವಂತೆ ಮನೆಮದ್ದು ತಜ್ಞ ಡಾ.ಪ್ರಶಾಂತ್ ಆರಾಧ್ಯ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕಗಳಲ್ಲದೆ, ಮನೆಮದ್ದಿನ ಮೂಲಕವೂ ಸೊಳ್ಳೆಗಳನ್ನು ನಿಯಂತ್ರಿಸಬಹುದು. 2 ಇಂಚು ಶುಂಠಿ, 10 ತುಂಡು ಬೆಳ್ಳುಳ್ಳಿಯನ್ನು ತುರಿದು, 2 ಇಂಚು ಚಕ್ಕೆ, 20 ಲವಂಗ ಪುಡಿ ಮಾಡಿ, 10 ಬೇವಿನೆಲೆ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.
ಈ ಎಲ್ಲಾ ಪದಾರ್ಥಗಳನ್ನು ಪಾತ್ರೆಯಲ್ಲಿ ಒಂದೂವರೆ ಲೀಟರ್ ನೀರಿನಲ್ಲಿ ಬೆರೆಸಿ, ಮಿಶ್ರಣವು ಒಂದು ಲೀಟರ್ ಆಗುವವರೆಗೂ ಕಾಯಿಸಬೇಕು. ನೀರು ತಣ್ಣಗಾದ ಮೇಲೆ ಶೋಧಿಸಿ, 20 ಕರ್ಪೂರಗಳ ಪುಡಿ ಹಾಗೂ 10 ಅಜ್ವನದ ಎಲೆಗಳ ರಸ ಬೆರೆಸಬೇಕು. ಇವೆಲ್ಲವನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಟ್ಟುಕೊಂಡು, ಮನೆಯ ಒಳಗೆ ಮತ್ತು ಹೊರಗಡೆ ಸಿಂಪಡಿಸಿದರೆ ಸೊಳ್ಳೆಗಳು ಮನೆಯಿಂದ ತೊಲಗುತ್ತವೆ ಎಂದರು.
ಡೆಂಗ್ಯೂ ಜ್ವರ ಬಂದವರು ವೈದ್ಯರು ಶಿಫಾರಸ್ಸು ಮಾಡುವ ಔಷಧಿಯ ಜೊತೆಗೆ ಪಪ್ಪಾಯಿ ಎಲೆಗಳನ್ನು ಕುದಿಸಿ, ಶೋಧಿಸಿ ಕುಡಿಯುವುದರಿಂದ ಬೇಗ ಗುಣವಾಗುತ್ತದೆ. ಬೇವಿನ ಸೊಪ್ಪನ್ನು ರುಬ್ಬಿ, ಕೊಬ್ಬರಿ ಎಣ್ಣೆಯ ಜೊತೆಗೆ ಕುದಿಸಿ, ಹೊರಗಡೆ ಹೋಗುವಾಗ ಚರ್ಮಕ್ಕೆ ಹಚ್ಚಿದ್ದಲ್ಲಿ ಸೊಳ್ಳೆಗಳು ಕಚ್ಚುವುದಿಲ್ಲ ಮತ್ತು ಇದರಿಂದ ಅನೇಕ ಧರ್ಮ ಖಾಯಿಲೆಗಳೂ ನಿವಾರಣೆಯಾಗುತ್ತವೆ.
ಈ ರೀತಿಯ ಮನೆಮದ್ದುಗಳು ಡೆಂಗ್ಯೂ ಅಪಾಯವನ್ನು ಎದುರಿಸುವಲ್ಲಿ ಸಹಾಯಕವಾಗಿವೆ. ಹೆಚ್ಚಿನ ಮಾಹಿತಿಗೆ ಮೊ: 94498 88000 ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.