ದಾವಣಗೆರೆ :
ರಾಮಕೃಷ್ಣ ಹೆಗಡೆ ನಗರದಿಂದ ಅವರಗೊಳ್ಳ ಗ್ರಾಮದ ಬಳಿ ಸ್ಥಳಾಂತರಗೊಂಡ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ಆಗ್ರಹಿಸಿ ಎತ್ತಂಗಡಿಗೊಂಡ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ಸ್ಲಂ ಜನರ ಸಂಘಟನೆ-ಕರ್ನಾಟಕ, ಸ್ಲಂ ಮಹಿಳೆಯರ ಸಂಘಟನೆ, ದಾವಣಗೆರೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್ (ರಿ) ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ನಿವಾಸಿಗಳು ಘೋಷಣೆ ಕೂಗುತ್ತಾ ಮಹಾನಗರ ಪಾಲಿಕೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ರಾಮಕೃಷ್ಣ ಹೆಗಡೆನಗರ ಸ್ಲಂ ಎಂದು ಘೋಷಣೆಯಾಗಿತ್ತು. ಆದರೆ ವರ್ತುಲ ರಸ್ತೆ (ರಿಂಗ್ ರೋಡ್) ಬಂದಿರುವುದರಿಂದ ಕಳೆದ ಡಿಸೆಂಬರ್ 2 ರಂದು ನಗರ ಪಾಲಿಕೆಯಿಂದ ನೂರಾರು ಕುಟುಂಬ (500 ಕ್ಕೂ ಹೆಚ್ಚು ) ಗಳನ್ನು, ಯಾವುದೇ ಮೂಲಭೂತ ಸೌಲಭ್ಯಗಳಲ್ಲಿದ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಸ್ಥಳಾಂತರ ಮಾಡಿ 4-ತಿಂಗಳು ಕಳೆದರು ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ರಾತ್ರಿಯಾದರೆ ಹಾವು, ಚೋಳು, ಕತ್ತಲ ಭಯ
ಹದಿಹರೆಯದ ಹೆಣ್ಣು ಮಕ್ಕಳು & ವಯಸ್ಸಾದವರು ಇದ್ದರು ಸಹ ಶೌಚಾಲಯಗಳು ಇಲ್ಲ, ಮೊಬೈಲ್ ಶೌಚಾಲಯಗಳು ಉಪಯೋಗವಾಗಿಲ್ಲ. ಬಿಸಿಲು ಧಗೆಯಲ್ಲಿ ಜನರು ಬೆಂದು ಹೋಗುತ್ತಿದ್ದಾರೆ. ಹಗಲಿನಲ್ಲಿ ಚಳಿ, ಬಿಸಿಲು, ಮಳೆಯಿಂದ ತೊಂದರೆಯಾದರೆ ರಾತ್ರಿಯಾದರೆ ಹಾವು, ಚೋಳು, ಕತ್ತಲ ಭಯ ಇಲ್ಲಿನ ಜನರನ್ನು ದಿನನಿತ್ಯ ಕಾಡುತ್ತಿದೆ. ಇದ್ದಕ್ಕಿದ್ದಂತೆ ದಾವಣಗೆರೆ ನಗರದಿಂದ 10/11 ಕಿಲೋ ಮೀಟರ್ ದೂರ ಎತ್ತಂಗಡಿ ಮಾಡಿದ್ದರಿಂದ ಜನರು ಸಿಟೀಗೆ ಬರಲು ಆಟೋಗಳಿಗೆ ನೂರಾರು ರೂಪಾಯಿಗಳನ್ನು ಕೊಡಬೇಕಾಗಿದೆ ಎಂದು ಹೇಳಿದರು.
ನಗರಪಾಲಿಕೆ, ಜಿಲ್ಲಾಡಳಿತ ಹಾಗಾಗಿ 6-ತಿಂಗಳೊಳಗಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿದರು.
ಜಬೀನಾ ಖಾನಂ, ಕರಿಬಸಪ್ಪ ಎಂ, ನಂದಿನಿ, ಐಸಾಕ್ ಅಮೃತ್ರಾಜ್, ನೀಲಯ್ಯ, ಜಾನ್ಸಿ, ಆವರಗೆರೆ ಚಂದ್ರು, ಚಂದ್ರಪ್ಪ ಎಲ್,ಆರ್, ಬುಳ್ಳಾಪುರ ಹನುಮಂತಪ್ಪ ಸೇರಿದಂಥೆ ಇತರರು ಇದ್ದರು.
ನಮ್ಮ ಹಕ್ಕೋತ್ತಾಯಗಳು
ತಕ್ಷಣ ಎತ್ತಂಗಡಿ ರಾಮಕೃಷ್ಣ ಹೆಗಡೆನಗರದಲ್ಲಿ ಮನೆ, ಅಂಗನವಾಡಿ, ಶಾಲೆ, ರಸ್ತೆ, ಸಾರಿಗೆ ವ್ಯವಸ್ಥೆ, ಶೌಚಾಲಯ, ಶುದ್ಧಕುಡಿಯುವ ನೀರು, ಆಸ್ಪತ್ರೆ, ಪಡಿತರ ಅಂಗಡಿ, ವಿದ್ಯುತ್ ವ್ಯವಸ್ಥೆ ಮಾಡಬೇಕು.
ಪಡಿತರ ಅಂಗಡಿಯನ್ನು ತಕ್ಷಣ ಇದೇ ಏರಿಯಾದಲ್ಲಿ ತೆರೆಯಬೇಕು. ಅಂಗನವಾಡಿ, ಶಾಲೆಯಿಂದ / ಶಿಕ್ಷಣದಿಂದ ನೂರಾರು ಮಕ್ಕಳು ವಂಚಿತ ರಾಗುತ್ತಿದ್ದಾರೆ. ಸರಿಯಾದ ವ್ಯವಸ್ಥೆಯನ್ನು ಮಾಡಬೇಕು. (ಈಗ ಒಂದು ಟೆಂಟ್ ಶಾಲೆ ಇದೆ. ಅದು ಸಾಲದು), ಸಾರಿಗೆ ಬಸ್ ಬಿಡಬೇಕು. (ಈಗ ಬಿಟ್ಟಿದ್ದು ಬಸ್ಸು ಸರಿಯಾಗಿ ಬರುತ್ತಿಲ್ಲ). ಸರಿಯಾದ ದಾಖಲಾತಿ ಇಲ್ಲವೆಂದು 35 ಅಥವಾ 40 ಕ್ಕೂ ಹೆಚ್ಚು ಕುಟುಂಬಗಳಿಗೆ ತಕ್ಷಣ ನಿವೇಶನ/ಮನೆ ನೀಡಿ ಹಕ್ಕು ಪತ್ರ ನೀಡಬೇಕು. ಎಲ್ಲಾ ಕುಟುಂಬಗಳಿಗೂ ತಕ್ಷಣ ಹಕ್ಕು ಪತ್ರಗಳನ್ನು ನೀಡಬೇಕು, ಕರ್ನಾಟಕ ಪಬ್ಲಿಕ್ ಸ್ಕೂಲ್, & ಸರಕಾರಿ ಆಸ್ಪತ್ರೆ ನಿರ್ಮಿಸಬೇಕು.