ಹರಿಹರ (Davanagere): ಸಮಾಜ ಸೇವಕರು, ಶಾಲೆಯ ಹಳೆಯ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಅತಿಕ್ರಮಣಕ್ಕೆ ಒಳಗಾಗಿದ್ದ ಕೋಟ್ಯಾಂತರ ರೂ. ಬೆಳೆಬಾಳುವ ಜಮೀನನ್ನು ಮತ್ತೆ ಶಿಕ್ಷಣ ಇಲಾಖೆಯ ಸುಪರ್ದಿಗೆ ಒಪ್ಪಿಸುವ ಮಹತ್ವದ ಕಾರ್ಯ ಇಲ್ಲಿ ನಡೆದಿದೆ.
ನಗರದಲ್ಲಿರುವ ತಾಲ್ಲೂಕಿನ ಪ್ರಥಮ ಸರ್ಕಾರಿ ಪ್ರೌಢಶಾಲೆಗೆ ಜಮೀನ್ದಾರರಾಗಿದ್ದ ದಿ.ನರಸಿಂಹ ಮೂರ್ತಚಾರ್ ಕಟ್ಟಿರವರು ವಿನೋಬಾ ಭಾವೆರವರ ಭೂದಾನ ಚಳವಳಿಯಿಂದ ಪ್ರಭಾವಿತರಾಗಿ 1955ರಲ್ಲಿ ಈ ಪ್ರೌಢಶಾಲೆಗೆ 2 ಎಕರೆ 30 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದರು.
ನಗರ ಹೊರವಲಯದ ಗುತ್ತೂರು ಸಮೀಪದ ಬೇಚಿರಾಗ್ ಗ್ರಾಮ ಬೈರನಹಳ್ಳಿ ರಿ.ಸರ್ವೆ ನಂ.21/3ರಲ್ಲಿ ಈ ಜಮೀನಿದೆ. ನಗರದಂದಿ 5 ಕಿ.ಮೀ. ಅಂತರದಲ್ಲಿ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಗೆ ಅಂಟಿಕೊAಡ ಒಂದು ಜಮೀನಿನ ನಂತರ ಶಾಲೆಯ ಈ ಜಮೀನಿದೆ. ಕಾಲಾಂತರದಲ್ಲಿ ಶಾಲೆಯವರು, ಶಿಕ್ಷಣ ಇಲಾಖೆಯವರು ಜಮೀನಿನ ಬಗ್ಗೆ ಕಾಳಜಿವಹಿಸಿದ್ದಿಲ್ಲ. ಗುತ್ತೂರಿನ ವಾಸಿ ಸಾಮಾಜಿಕ ಕಾರ್ಯಕರ್ತ, ಹಿರಿಯ ಪತ್ರಕರ್ತರಾದ ಐರಣಿ ಹನುಮಂತಪ್ಪರಿಗೆ ಅಕಸ್ಮಿಕವಾಗಿ ಶಾಲೆಗೆ ಸೇರಿದ ಜಮೀನಿರುವ ದಾಖಲೆ ಸಿಕ್ಕಿದೆ.
ನಂತರ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ವಿಷಯವನ್ನು ತಿಳಿಸಿ ಅವರೆಲ್ಲರ ಸಹಕಾರದಿಂದ ದಾಖಲಾತಿಗಳ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ. ನಂತರ ತಹಶೀಲ್ದಾರ್ ಗುರುಬಸವರಾಜ್ ಇವರಲ್ಲಿ ಚರ್ಚಿಸಿದಾಗ ಅವರು ಜಮೀನನ್ನು ಶಾಲೆ ಸುಪರ್ದಿಗೆ ವಹಿಸಲು ಎಲ್ಲಾ ಅಗತ್ಯ ಸಹಕಾರ ನೀಡಿದ್ದಾರೆ.
ಭೂ ಮಾಪಕರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರೆಲ್ಲರು ಸೇರಿ ಪೊಲೀಸ್ ಉಪಸ್ಥಿತಿಯಲ್ಲಿ ಜಮೀನಿನ ಮಾಪನ ಕಾರ್ಯ ಕೈಗೊಂಡು, ಗಡಿಯನ್ನು ಗುರುತಿಸುವ ಮಹತ್ವದ ಕಾರ್ಯ ಮಾಡಿದರು.
ತಹಶೀಲ್ದಾರರ ಸೂಚನೆ ಮೇರೆಗೆ ಅತಿಕ್ರಮಣ ತೆರವುಗೊಳಿಸಿದ ಹಾಗೂ ಜಮೀನನ್ನು ಹಸ್ತಾಂತರಿಸುವ ವರದಿಯನ್ನು ಗ್ರಾಮ ಆಡಳಿತಾಧಿಕಾರಿ ಪ್ರಭುಸ್ವಾಮಿಯವರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪರಿಗೆ ಅಧಿಕೃತವಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಚಾರ್ಯ ಬಿ.ಸಿದ್ಧರಾಮೇಶ್ವರ, ಹಳೆಯ ವಿದ್ಯಾರ್ಥಿಗಳಾದ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಪತ್ರಕರ್ತರಾದ ಮಂಜನಾಯ್ಕ್, ಅಣ್ಣಪ್ಪ ಅಜ್ಜೇರ್, ಗುತ್ತೂರು ಸರ್ಕಾರಿ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಜೆ., ಮಾಜಿ ಅಧ್ಯಕ್ಷ ಕರಿಬಸಪ್ಪ ಎನ್., ಗುತ್ತೂರು ಗ್ರಾಮಸ್ಥರಾದ ಬಿ.ಎನ್.ಜಿ.ನಾಗರಾಜ್, ಪಕ್ಕೀರಪ್ಪ ಬಿ.ಎಂ.ಪಿ., ಅಬ್ಬಾಸ್ ಅಲಿ ಹುರಕಡ್ಲಿ, ತಾಲ್ಲೂಕು ಭೂ ಮಾಪಕ ಜಿ.ಆರ್.ವಿಶ್ವನಾಥ, ಎಎಸ್‌ಐ ನಾಗರಾಜ್, ಭೂದಾನ ಮಾಡಿದ ಕುಟುಂಬದವರ ಗೋಪಾಲ್‌ರಾವ್ ಕಟ್ಟಿ, ಶಿಕ್ಷಕರಾದ ಪ್ರಶಾಂತ್ ಡಿ., ಮಹೇಶ್, ಜಿ., ಕಿರಣ್ ಕುಮಾರ್, ಸಚಿನ್ ಹಿರೇಮಠ್ ಹಾಗೂ ಸುತ್ತಲಿನ ಜಮೀನುಗಳ ರೈತರಿದ್ದರು.
Read also : Davanagere | ಅಕ್ರಮ ಗಾಂಜಾ ಗಿಡ ಬೆಳೆದ ಆರೋಪಿಗೆ ಕಾರಾಗೃಹ ಶಿಕ್ಷೆ