ದಾವಣಗೆರೆ (Davanagere) : ವೃದ್ಧ ದಂಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 35 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬೆಂಗಳೂರಿನ ದೊಡ್ಡಬಿದರಕಲ್ಲು ಬಡಾವಣೆಯ ಕುಮಾರ, ಕೊಟ್ಟೂರು ತಾಲೂಕಿನ ಕಳಪೂರ ಗ್ರಾಮದ ಮರಿಸ್ವಾಮಿ, ಹರಪನಹಳ್ಳಿ ತಾಲೂಕಿನ ಹಳ್ಳಿಕೆರೆ ಗ್ರಾಮದ ಪರಶುರಾಮ ಶಿಕ್ಷೆಗೆ ಗುರಿಯಾದವರು.
ತಾಲೂಕಿನ ಎಲೇಬೆತ್ತೂರು ಗ್ರಾಮದ ಗುರುಸಿದ್ದಯ್ಯ ಮತ್ತು ಸರೋಜಮ್ಮ ದಂಪತಿಯನ್ನು 2022ರ ಜನವರಿ 25ರಂದು ರಾತ್ರಿ ಕೊಲೆ ನಡೆದಿತ್ತು. ವೃದ್ಧ ದಂಪತಿ ಗ್ರಾಮದ ಮೂರು ಎಕರೆ ತೋಟದಲ್ಲಿ ವಾಸವಾಗಿದ್ದರು.
ಕೃಷಿಯಿಂದ ಬರುತ್ತಿದ್ದ ಸ್ವಲ್ಪ ಆದಾಯದಲ್ಲಿ ಗ್ರಾಮದ ಜನರಿಗೆ ಕೈಗಡವಾಗಿ ನೀಡುತ್ತಿದ್ದರು. ಮೂಲತಃ ಗ್ರಾಮದ ಕುಮಾರ ಅವರಿಗೆ 3 ಲಕ್ಷ ರೂ. ಸಾಲ ಪಡೆದಿದ್ದ. 2 ಲಕ್ಷ ರೂ. ಮರಳಿ ನೀಡಿದ್ದ. ಉಳಿದ ಹಣವನ್ನು ಹಿಂದಿರುಗಿಸುವ ಬದಲು ವೃದ್ಧ ದಂಪತಿಯ ಮನೆ ದರೋಡೆ ಮಾಡಲು ಸಂಚು ಹೂಡಿದ್ದ. ಪರಶುರಾಮ ಮತ್ತು ಮರಿಸ್ವಾಮಿ ಜೊತೆಗೆ ಸೇರಿ ವೃದ್ಧ ದಂಪತಿಯನ್ನು ಕೊಲೆ ಮಾಡಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎನ್.ಮಿಥುನ್ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
Read also : ಮಕ್ಕಳಲ್ಲಿರುವ ನೂನ್ಯತೆ ಗುರುತಿಸಿ ತಿದ್ದಿ ತೀಡಬೇಕು : ಡಾ.ಪ್ರಭಾ ಮಲ್ಲಿಕಾರ್ಜುನ್
ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಚ್.ಅಣ್ಣಯ್ಯನವರ್ ಆದೇಶ ಪ್ರಕಟಿಸಿದರು. ಸರ್ಕಾರಿ ವಕೀಲ ಕೆ.ಎಸ್.ಸತೀಶ್ ಸರ್ಕಾರದ ಪರ ವಾದ ಮಂಡಿಸಿದರು.