ದಾವಣಗೆರೆ: ಶಿಕ್ಷಣ ಪಡೆಯುವ ಜೊತೆಗೆ ಮಕ್ಕಳು ನಾಯಕತ್ವ ಗುಣ ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಬೇಕೆಂದು ಮಹಾನಗರಪಾಲಿಕೆ ಮಾಜಿ ವಿಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಶೈಕ್ಷಣಿಕ ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದ ಜೊತೆಗೆ ಸಂಸ್ಕøತಿ, ಶಿಸ್ತು ಬೆಳೆಸುವಂತಹ ಶಾಲೆ ಈಶ್ವರಮ್ಮ ಶಾಲೆಯಾಗಿದೆ. ಆಡಳಿತ ಪಕ್ಷದ ವೈಖರಿ, ತಪ್ಪುಗಳನ್ನು ವಿರೋಧ ಪಕ್ಷ ತಿದ್ದುವ ಕಾರ್ಯದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡು ಶಾಲೆಗೆ, ಪೋಷಕರಿಗೆ ಹಾಗೂ ದೇಶಕ್ಕೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷೆ ಕೆ.ಆರ್.ಸುಜಾತ ಕೃಷ್ಣ, ಮಂತ್ರಿ ಮಂಡಲದ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದಂತೆ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು. ಮಂತ್ರಿಮಂಡಲದ ಉದ್ದೇಶವನ್ನು ಸಾರ್ಥಕ ಮಾಡಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಿರಿ ಎಂದರು.
ಆಡಳಿತ ಪಕ್ಷ ಏನೇ ಮಾಡಿದರೂ ಅದನ್ನು ವಿರೋಧಿಸುವುದು ವಿರೋಧ ಪಕ್ಷದ ಕೆಲಸವಾಗಿದೆ. ಆದರೆ ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದವರು ಒಂದಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೀರಿ ಎಂದು ತಿಳಿಸಿದರು.
ಭಗವಾನ್ ಶ್ರೀಸತ್ಯಸಾಯಿ ಬಾಬಾರವರ ಸಂದೇಶ ಪಾಲಿಸಿರಿ ಬಾಬಾ ಅವರು ಹೇಳುವಂತೆ ಎಲ್ಲರನ್ನು ಪ್ರೀತಿಸಿ ಎಲ್ಲರ ಸೇವೆ ಮಾಡಿರಿ. ಮಕ್ಕಳ ಮೊದಲು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮಾತೃಭೂಮಿ, ತಂದೆ-ತಾಯಿಯರನ್ನು ಗೌರವಿಸಬೇಕು. ನಮ್ಮ ದೇಶದ ಮೇಲೆ ನಮಗೆ ಅಪಾರವಾದ ಪ್ರೀತಿಯಿರಬೇಕು. ವೀರಸನ್ಯಾಸಿ ಸ್ವಾಮಿ ವಿವೇಕಾನಂದರಂತೆ ದೇಶಭಕ್ತರಾಗಿ ಉತ್ತಮ ನಾಯಕತ್ವವನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶಾಲೆಯಲ್ಲಿ ಮೌಲ್ಯ ಶಿಕ್ಷಣ ಪಡೆಯುತ್ತಿರುವ ನೀವು ನಿಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳುವಂತವರಾಗಬೇಕೆಂದರು.
ಚುನಾವಣೆಯಲ್ಲಿ ಅತಿ ಹೆಚ್ಚು ಮತ ಗಳಿಸಿದ 10 ನೇತರಗತಿಯ ವಿದ್ಯಾರ್ಥಿನಿ ಬಿ.ಎನ್.ಭಾವನಾ ಮುಖ್ಯಮಂತ್ರಿಯಾಗಿ, 10ನೇ ತರಗತಿಯ ವಿದ್ಯಾರ್ಥಿನಿ ವಿರೋಧ ಪಕ್ಷದ ನಾಯಕಿಯಾಗಿ ಎ.ಪಿ.ಯಶಸ್ವಿನಿ ಆಯ್ಕೆಯಾಗಿದ್ದರು. ಸಹ ಶಿಕ್ಷಕಿ ಹೇಮಲತಾ ಚುನಾವಣಾ ಪ್ರಕ್ರಿಯೆ ವಿವರಿಸಿದರು.
25 ಸಚಿವರನ್ನೊಳಗೊಂಡ ಶಾಲಾ ಮಂತ್ರಿ ಮಂಡಲದಲ್ಲಿ ರಾಜ್ಯಪಾಲರಾಗಿ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಸಭಾಪತಿಯಾಗಿ ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಸಂಪುಟ ಕಾರ್ಯದರ್ಶಿಯಾಗಿ ಸಹ ಶಿಕ್ಷಕಿ ರೋಹಿಣಿ ಎಂ. ಭಾವಿ ನಾಯಕರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು.
ಸಹಶಿಕ್ಷಕಿ ಬಿ.ಶ್ರೀದೇವಿ ವಿದ್ಯಾರ್ಥಿ ಸಂಘಗಳನ್ನು ಪರಿಚಯಿಸಿದರು.
ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್ ವಿಜಯಾನಂದ್, ಜಿ.ಎಸ್.ಶಶಿರೇಖಾ, ಎನ್.ಎಸ್.ಸವಿತ, ಎಂ.ರೋಹಿಣಿ ಭಾಗವಹಿಸಿದ್ದರು.