ದಾವಣಗೆರೆ (Davangere) : ನಮ್ಮ ದೇಶದ ಗಡಿ ಭದ್ರವಾಗಿರುವುದರಿಂದ ದೇಶದ ಒಳಗಡೆ ಇರುವ ನಾವೆಲ್ಲರೂ ಇಲ್ಲಿ ಶಾಂತವಾಗಿ ನೆಮ್ಮದಿಯುತ ಜೀವನ ಸಾಗಿಸುತ್ತದ್ದೇವೆ ಎಂದು ನಿವೃತ್ತ ಯೋಧರು ಮತ್ತು ನಿವೃತ್ತ ಪೋಲಿಸ್ ಅಧಿಕಾರಿ ಎಚ್.ಬಸವರಾಜಪ್ಪ ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈಗಿನ ಯುವಕರು ಸಿನಿಮಾ ನಟರನ್ನು ಹೀರೊಗಳೆಂದು ಅವರನ್ನು ಅನುಸರಿಸುತ್ತಾರೆ. ಅವರು ರೀಲ್ ಹೀರೊಗಳು. ನಿಜವಾದ ರಿಯಲ್ ಹೀರೊಗಳೆಂದರೆ ನಮ್ಮ ಸೈನಿಕರು. ನಮ್ಮ ಸೈನಿಕರಿಗೆ ಗೌರವವನ್ನು ಕೊಡಬೇಕು.
ಸೈನ್ಯದಲ್ಲಿ ಹನ್ನೆರಡು ತಿಂಗಳು ತರಬೇತಿ ಕೊಟ್ಟು ಸೈನ್ಯಕ್ಕೆ ಕಳುಹಿಸುತ್ತಾರೆ. ಅಲ್ಲಿ ಗಡಿಗಳಲ್ಲಿ ಹೋರಾಡಿ ಪ್ರಾಣವನ್ನು ಕೊಡಬೇಕಾಗಿ ಬಂದರೂ ಸಿದ್ದರಾಗಿರಬೇಕಾಗುತ್ತದೆ, ಬುಲೆಟ್ ಫ್ರೂಫ್ ಮತ್ತು ಹೆಲ್ಮೆಟ್ ಗಳಿಂದ ನಮ್ಮ ಜೀವ ಉಳಿದಿದೆ ಎಂದು ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿಕೊಂಡು ತಮ್ಮ ಅನುಭವ ಹಂಚಿಕೊಂಡರು.
ಕೇವಲ ಡಾಕ್ಟರ್, ಇಂಜಿನಿಯರ್‌ಗಳಾಗದೆ ಮಕ್ಕಳು ಸೇನೆಯಲ್ಲಿ ಸೇರಿ ದೇಶ ಕಾಪಾಡುವ ಗುರಿಯನ್ನು ಹೊಂದಬೇಕು. ನಮ್ಮ ದೇಶದ ಮಿಲಿಟರಿ ಪಡೆ ಪ್ರಪಂಚದಲ್ಲೇ ನಂಬರ್ 1 ಆಗಿದೆ ಎಂದು ಹೆಮ್ಮೆಯಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕೆಂದು ಮಾತನಾಡಿದರು.
ಶಾಲಾ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಡೀ ದೇಶವೇ ಬಹಳ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ನಮ್ಮ ದೇಶ ಸ್ವಾತಂತ್ರ ಪಡೆಯಲು ಅನೇಕ ಮಹನೀಯರು ಪ್ರಾಣಾರ್ಪಣೆ ಮಾಡಿದ್ದಾರೆ. ಭಾರತವನ್ನು ವಿಶ್ವ ಗುರು ಎಂದು ಹೇಳಲಾಗುತ್ತದೆ. ವಿಶ್ವಗುರುವಾಗಬೇಕಾದರೆ ಭಾರತದ ಸ್ವಾತಂತ್ರ್ಯ ವೀರರ ತ್ಯಾಗ, ಬಲಿದಾನ ಎಂತಹುದು ಎಂಬುದು ತಿಳಿಯುತ್ತದೆ ಎಂದರು.
Read also : Davanagere Crime News | ಗಾಂಜಾ ಮಾರಾಟ: ಆರೋಪಿ ಬಂಧನ
ಇಂದಿನ ಯುವ ಪೀಳಿಗೆಯಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿರುವುದು ವಿಶಾದನೀಯ. ನಮ್ಮ ದೇಶವನ್ನು ೨೦೦ ವರ್ಷಗಳ ಕಾಲ ಬ್ರಿಟಿಷರು ಕೊಳ್ಳೆ ಹೊಡೆದಿದ್ದರೂ ಕೂಡ ನಮ್ಮ ದೇಶ ಸಂಪದ್ಭರಿತವಾಗಿದೆ. ನಮ್ಮ ದೇಶದ ಭದ್ರತೆಯನ್ನು ಸಂಸ್ಕೃತಿಯನ್ನು ಏಕತೆಯನ್ನು ನಾವು ಕಾಪಾಡಿಕೊಳ್ಳಬೇಕು. ಸ್ವಾತಂತ್ರ್ಯದ ಜವಾಬ್ದಾರಿಯನ್ನು ನಾವು ತಿಳಿಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಲೆಯ ನರ್ಸರಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ವೇಷಭೂಷಣ ಧರಿಸಿ ಹಾಗೂ ಹಿರಿಯ ಪ್ರಾಥಮಿಕ & ಪ್ರೌಢ ಶಾಲಾ ವಿದ್ಯಾರ್ಥಿಗಳು ದೇಶಪ್ರೇಮ ಬಿಂಬಿಸುವ ದೇಶಭಕ್ತಿಗೀತೆಗಳು ಮತ್ತು ರಾಷ್ಟ್ರ ಪ್ರೇಮಭರಿತ ನೃತ್ಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ, ಸಬೀಹಾ ಬಾನು, ಎಸ್.ಕವಿತಾ, ಎಸ್.ಬಿ.ಅರುಣಾ ಹಾಜರಿದ್ದರು.