ದಾವಣಗೆರೆ : ಹಿಂದಿನ ವರ್ಷದ ರಾಜ್ಯದಲ್ಲಿ ಸಂಭವಿಸಿದ ಭೀಕರ ಬರಗಾಲದಿಂದಾಗಿ ತತ್ತರಿಸಿದ್ದ ಅನ್ನದಾತರಿಗೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅತಿ ಹೆಚ್ಚು ಮಳೆಯಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದರೂ ಇನ್ನೆರಡು ಬಾರಿ ಮಳೆಯಾದರೆ ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದೆ. ಹೀಗಾಗಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡುವ ಜೊತೆಗೆ ಭೂಮಿಯನ್ನು ಹದಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಿದ್ದು, 2,45,303 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 1.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿದೆ.
ಬಿತ್ತನೆ ಬೀಜ ದಾಸ್ತಾನು : ಪ್ರಸಕ್ತ ಮುಂಗಾರು ಹಂಗಾಮಿಗೆ 49,869 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 54052 ಕ್ವಿಂಟಲ್ ದಾಸ್ತಾನು ಇದೆ. ಭತ್ತ 16010 ಕ್ವಿಂಟಲ್ ಬೇಡಿಕೆಯಲ್ಲಿ 17260 ಕ್ವಿಂಟಲ್ ದಾಸ್ತಾನು ಇದೆ. ಮೆಕ್ಕೆಜೋಳ 25221 ಕ್ವಿಂಟಲ್ ಬೇಡಿಕೆ ಇದ್ದು, 26763 ಕ್ವಿಂಟಲ್, ಏಕದಳ (ರಾಗಿ, ಜೋಳ) 980 ಕ್ವಿಂಟಲ್ ಬೇಡಿಕೆ ಇದ್ದು, 1298 ಕ್ವಿಂಟಲ್, ದ್ವಿದಳ ಧಾನ್ಯ (ತೊಗರಿ, ಹೆಸರು, ಅಲಸಂದೆ, ಇತರೆ) 776 ಕ್ವಿಂಟಲ್ ಬೇಡಿಕೆ ಇದ್ದು, 1450 ಕ್ವಿಂಟಲ್, ಶೇಂಗಾ 6806 ಕ್ವಿಂಟಲ್ ಬೇಡಿಕೆ ಇದ್ದು, 7100 ಕ್ವಿಂಟಲ್ ಹಾಗೂ ಸೂರ್ಯಕಾಂತಿ 16 ಕ್ವಿಂಟಲ್ ಬೇಡಿಕೆ ಇದ್ದು, 45 ಕ್ವಿಂಟಲ್ ದಾಸ್ತಾನು ಇದೆ.
ವಿವಿಧ ರಸಗೊಬ್ಬರ ದಾಸ್ತಾನು : ಪ್ರಸಕ್ತ ಮುಂಗಾರು ಹಂಗಾಮಿಗೆ ಒಟ್ಟು 1,53,683 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 94964 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ. ಯೂರಿಯಾ 30282 ಮೆ.ಟನ್, ಡಿಎಪಿ 10387 ಮೆ.ಟನ್, ಎನ್‍ಪಿಕೆ ಕಾಂಪ್ಲೆಕ್ಸ್ 50373 ಮೆ.ಟನ್, ಎಂಒಪಿ 2202 ಮೆ.ಟನ್, ಎಸ್‍ಎಸ್‍ಪಿ 1720 ಮೆ.ಟನ್ ಸೇರಿದಂತೆ ಒಟ್ಟು 94,964 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಜೂನ್ ತಿಂಗಳಲ್ಲಿ ಒಟ್ಟು 28178 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದ್ದಾರೆ.
–ಬಾಕ್ಸ್–
ಪ್ರಸಕ್ತ ಸಾಲಿನ ಮಳೆ ವಿವರ…
2024ರ ಜನವರಿ 1 ರಿಂದ ಮೇ 18ರವರೆಗೆ ಜಿಲ್ಲೆಯಲ್ಲಿ 55 ಮಿ.ಮೀ. ಮಳೆಯಾಗಿದೆ. ಚನ್ನಗಿರಿ 54 ಮಿ.ಮೀ., ದಾವಣಗೆರೆ 40 ಮಿ.ಮೀ., ಹರಿಹರ 53 ಮಿ.ಮೀ., ಹೊನ್ನಾಳಿ 60 ಮಿ.ಮೀ., ಜಗಳೂರು 49 ಮಿ.ಮೀ., ನ್ಯಾಮತಿ ತಾಲೂಕಿನಲ್ಲಿ 112 ಮಿ.ಮೀ., ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮೇ ತಿಂಗಳ 1 ರಿಂದ 18ರವರೆಗೆ ಜಿಲ್ಲೆಯಲ್ಲಿ 32 ಮಿ.ಮೀ. ಮಳೆಯಾಗಿದೆ.