ದಾವಣಗೆರೆ: ಮಾದಿಗ ಸಮುದಾಯದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದ ಕಾಂಗ್ರೆಸ್ ಗೆ ಮತ ನೀಡಿ ಋಣ ತೀರಿಸಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಕರೆ ನೀಡಿದರು.
ನಗರದ ಅಕ್ಕ ಮಹಾದೇವಿ ಸಮುದಾಯ ಭವನದಲ್ಲಿ ನಡೆದ ಮಾದಿಗ ಮುಖಂಡರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಮಾದಿಗರು ಕಾಂಗ್ರೆಸಿನ ಸಾಂಪ್ರದಾಯಿಕ ಮತದಾರರು. ಈಗ ಒಗ್ಗಟ್ಟಾಗಿ ಹೋರಾಡಿ ಕಾಂಗ್ರೆಸ್ ಗೆಲ್ಲಿಸಬೇಕು. ಅಸ್ಪೃಶ್ಯತೆ ನಿವಾರಿಸಿ ನಮ್ಮನ್ನು ರಕ್ಷಿಸಿದವರು ಗಾಂಧೀಜಿ, ನೆಹರೂ ಅಂಥಾ ಕಾಂಗ್ರೆಸ್ಸಿಗರೇ ವಿನಾ ಬಿಜೆಪಿಯವರಲ್ಲ. ಸಮಾನತೆ ಸಾರುವ ಸಂವಿಧಾನಕ್ಕೇ ಇಂದು ಬಿಜೆಪಿಯಿಂದ ಧಕ್ಕೆ ಬಂದಿದೆ. ಬಸವಣ್ಣನ ಕನಸ್ಸನ್ನು ಸಾಕಾರಗೊಳಿಸಿ, ಸಮ ಸಮಾಜದ ಕನಸು ಕಂಡಿದ್ದೇ ಕಾಂಗ್ರೆಸ್. ಎಸ್.ಎಂ. ಕೃಷ್ಣ ಬಡಾವಣೆ ನಿರ್ಮಿಸಿ ಎಲ್ಲರಿಗೂ ಸೂರು ನೀಡಿದ್ದೇ ಶಾಮನೂರು ಕುಟುಂಬ. ಅವಕಾಶ ವಂಚಿತ ಸಮುದಾಯಗಳ ಪರ ಸದಾ ಚಿಂತಿಸುವ ಶಾಮನೂರು ಕುಟುಂಬ ಗೆಲ್ಲಿಸಬೇಕು, ಎಂದು ಅವರು ಕರೆ ನೀಡಿದರು.
ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳ ಸಿಂಹಪಾಲು ನಮ್ಮವರದ್ದು. ಕೇಂದ್ರದಲ್ಲಿ ಅಧಿಕಾರ ಬಂದರೆ ಮನೆಮನೆಗೂ ಒಂದು ಲಕ್ಷ ರೂ. ದೊರೆಯಲಿದೆ ಎಂದರು.
ತನಿಖಾ ದಳದ ದುರುಪಯೋಗ ಮಾಡಿಕೊಂಡು ಬಿಜೆಪಿ ರಾಜಕೀಯ ವಿರೋಧಿಗಳ ದನಿ ಅಡಗಿಸುತ್ತಿದೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ನಾನು ನಗರಸಭಾ ಸದಸ್ಯ, ಅಧ್ಯಕ್ಷ ಮಾತ್ರ ಆಗಬಹುದಾದ ನಾನು ಸಮಾಜ ಕಲ್ಯಾಣ ಸಚಿವನಾಗಲು ಕಾರಣವಾದ ಕಾಂಗ್ರೆಸ್ ನ್ನು ನಾವೆಲ್ಲ ಬೆಂಬಲಿಸಬೇಕು. ಕಾಂಗ್ರೆಸ್ ನಷ್ಟು ಅಪಾರ ಕೊಡುಗೆ ನೀಡಿದ ಪಕ್ಷ ಬೇರೊಂದಿಲ್ಲ. ಆದಕಾರಣ ಅದಕ್ಕೆ ಋಣಿಯಾಗಿರಬೇಕು ಎಂದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಎಚ್. ಆಂಜನೇಯ ಸಮಾಜ ಕಲ್ಯಾಣ ಮಂತ್ರಿಯಾದಾಗ ದಲಿತರ ಅಭಿವೃದ್ಧಿ ಆರಂಭವಾಯಿತು.
ಎಲ್ಲರ ವಿಶ್ವಾಸ ಗಳಿಸಿದರೆ ಮಾತ್ರ ಮುಂದೆ ಬರಲು ಸಾಧ್ಯ. ಸರ್ಕಾರದ ಋಣ ತೀರಿಸಲು ಕಾಂಗ್ರೆಸ್ಗೆ ಮತ ಹಾಕಬೇಕು. ಸಿದ್ದರಾಮಯ್ಯ ಸರ್ಕಾರ ದಲಿತರ ಏಳಿಗೆಗೆ ಎಸ್ಸಿಪಿ, ಟಿಎಸ್ಸಿಪಿ ಕಾಯ್ದೆಯಡಿ 39000 ಕೋಟಿ ಹಣ ಸಿಗುವಂತೆ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಶಕ್ತಿ ತುಂಬಲು ಆದಿ ಜಾಂಬವ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಕಾಂಗ್ರೆಸ್. ರಾಜ್ಯದ ಎಲ್ಲಾ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದು ಕಾಂಗ್ರೆಸ್. ರಾಜಕಾರಣಿಗಳು ಒಳ್ಳೆಯ ವ್ಯಕ್ತಿತ್ವ ಇರುವವನ್ನು ಮಾತ್ರ ಬೆಂಬಲಿಸಬೇಕು. ಬಿಜೆಪಿ ಸಂಸದರು ಐದು ಸಾರಿ ಗೆದ್ದರೂ ಏನೂ ಕೆಲಸ ಮಾಡಿಲ್ಲ, ಎಂದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಮೋದಿ ಹೊರಟಿರುವ ದಿಕ್ಕನ್ನು ತಾವು ಗಮನಿಸಿದರೆ ಸರ್ವಾಧಿಕಾರಿ ಧೋರಣೆ ನಡೆದಂತೆ ಕಾಣುತ್ತಿದೆ. ಸಂವಿಧಾನದ ಆಶಯ ತಲೆಕೆಳಗೆ ಮಾಡುತ್ತಿದ್ದಾರೆ. ಐಟಿ ರೇಡ್ ಅಸ್ತ್ರವಾಗಿದೆ. ಮೋದಿ, ಬಿಜೆಪಿ ಸ್ವಾತಂತ್ರ್ಯಕ್ಕೆ ಬಲಿದಾನ, ತ್ಯಾಗ ಮಾಡಿಲ್ಲ. ಶ್ರೀಮಂತರನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆಯೇ ವಿನಾ ಬಡವರಿಗೆ ಸಹಾಯ ಮಾಡುತ್ತಿಲ್ಲ. ಕಾಂಗ್ರೆಸ್ ದಲಿತರಿಗೆ , ಪೌರವಕಾರ್ಮಿಕರಿಗೆ ಸೌಲಭ್ಯ ನೀಡಿದೆ. ಬಸವಂತಪ್ಪ, ಆಂಜನೇಯ ಸಮಾಜದ ಮೇಲೆ ಪ್ರಭಾವ ಬೀರಿ, ಸರಿ ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.
ಪಾಲಿಕೆ ಸದಸ್ಯ ಉದಯ ಕುಮಾರ್, ನಿಂಗಪ್ಪ, ನೀಲಗಿರಿಯಪ್ಪ, ಎಲ್.ಡಿ.ಗೋಣೆಪ್ಪ, ಸೋಮ್ಲಾಪುರ ಹನುಮಂತಪ್ಪ, ಸಿದ್ದನೂರು ಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷ ಶಿವಣ್ಣ, ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ,, ರೈತ ಮುಖಂಡ ಹುಚ್ಚವನಹಳ್ಳಿ ಮಂಜುನಾಥ, ಬಿ.ಎಂ. ಹನುಂಮತಪ್ಪ, ಮಂಜುಳಮ್ಮ, ನಗರ ಸಭಾ ಸದಸ್ಯ ಮಾಜಿ ಸದಸ್ಯ ಮಲ್ಲಿಕಾರ್ಜುನ, ನಿವೃತ್ತ ಡಿವೈಎಸ್ಪಿ ರವಿ ನಾರಾಯಣ,ಬಗರ್ ಹುಕುಂ ಸಮಿತಿಯ ಶೇಖರಪ್ಪ ಇತರರು ಇದ್ದರು.