ಹರಿಹರ: ಅಗತ್ಯ ದೈಹಿಕ ಚಟುವಟಿಕೆಗಳನ್ನು ನಡೆಸುತ್ತಾ, ಆಹಾರ, ವಿಹಾರದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವ ವ್ಯಕ್ತಿ ಕಾಯಿಲೆ ಮುಕ್ತ ಬದುಕು ನಡೆಸಲು ಸಾಧ್ಯ ಎಂದು ಬೆಂಗಳೂರಿನ ನರರೋಗ ಶಸ್ತ್ರ ಚಿಕಿತ್ಸಕ ಡಾ.ಬಿ.ಎಸ್.ಶೈಲೇಶ್ ಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಪಕ್ಕದ ಡಾ.ಶೈಲೇಶ್ ಕುಮಾರ್ ಕುಮಾರ್ ಫೌಂಡೇಶನ್ ಕಚೇರಿಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ಸಲಹಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕ ವಾತಾವರಣದಲ್ಲಿ ಒಂದೆ ಜಾಗದಲ್ಲಿ ಕುಳಿತು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಅದರಲ್ಲೂ ಸಾಫ್ಟ್‍ವೇರ್ ಕ್ಷೇತ್ರ, ಕಂಪ್ಯೂಟರ್ ಆಪರೇಟರ್, ಗುಮಾಸ್ತರು ದಿನಕ್ಕೆ ಹಲವು ಗಂಟೆ ಒಂದೆಡೆ ಕುಳಿತು ವೃತ್ತ ನಿರ್ವಹಣೆ ಮಾಡಬೇಕಿದೆ.
ದೈಹಿಕ ಚಟುವಟಿಕೆಗಳಿಲ್ಲದೆ ಹಲವರಿಗೆ ಬೆವರೆ ಬರುವುದಿಲ್ಲ. ದೇಹದ ಹಲವು ಅಂಗಾಂಗಗಳ ಚಲನೆಯೆ ಆಗುವುದಿಲ್ಲ. ಹೀಗೆ ಒಂದೆಡೆ ಕುಳಿತು ಅಥವಾ ನಿಂತು ಕೆಲಸ ಮಾಡುವವರು ನಿತ್ಯ ನಿಯಮಿತವಾಗಿ ಬಿರುಸಿನ ನಡಿಗೆ, ವ್ಯಾಯಾಮ, ಯೋಗದಂತಹ ದೈಹಿಕ ಚಟುವಟಿಕೆಗಳನ್ನು ರೂಢಿ ಮಾಡಿಕೊಳ್ಳಬೇಕು ಎಂದರು.
ಸಹವಾಸ ದೋಷ ಅಥವಾ ಒತ್ತಡಗಳ ನಿವಾರಣೆಗಾಗಿ ತಂಬಾಕು, ಸಿಗರೇಟು, ಗಾಂಜಾ ಸೇವನೆ, ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಾರೆ. ಬಿಡುವಿನ ವೇಳೆಯಲ್ಲಿ ಸಂಗೀತ, ನೃತ್ಯ, ವ್ಯಾಯಾಮ, ಕುಟುಂಬದ ಸದಸ್ಯರೊಂದಿಗೆ ಆಟೋಟದಲ್ಲಿ ವ್ಯಸ್ತರಾಗುವ ಮೂಲಕ ಇಂತಹ ದುಶ್ಚಟಗಳಿಂದ ದೂರವಾಗಬಹುದಾಗಿದೆ ಎಂದರು.
ಹಸಿರು ತರಕಾರಿ, ಸೊಪ್ಪು, ಕಾಳುಕಡಿ, ಆಯಾ ಸೀಸನ್‍ನಲ್ಲಿ ಸಿಗುವ ಹಣ್ಣು, ಹಂಪಲುಗಳು ನಮ್ಮ ಆಹಾರದ ಮೆನುನಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಹಿರಿಯರು ಸೇವನೆ ಮಾಡುತ್ತಿದ್ದ ಆಹಾರ, ವಿಹಾರ ಶೈಲಿಯನ್ನು ಅನುಸರಿಸುವುದು ಉತ್ತಮ ಎಂದರು.
ಶಿಬಿರದಲ್ಲಿ ದಾವಣಗೆರೆ, ಹಾವೇರಿ, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ ವಿವಿಧ ಸ್ಥಳಗಳಿಂದ 200ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆ ಮಾಡಿ, ಸಲಹೆಗಳನ್ನು ನೀಡಲಾಯಿತು, ನರರೋಗ, ಪಾಶ್ರ್ವವಾಯು, ಸಕ್ಕರೆ, ಹೃದಯ, ಬೆನ್ನು, ಕುತ್ತಿಗೆ ನೋವು, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆ ಪೀಡಿತರು ಆಗಮಿಸಿದ್ದರು.
ಡಾ.ಶೈಲೇಶ್ ಕುಮಾರ್ ಕುಮಾರ್ ಫೌಂಡೇಶನ್‍ನ ಗೋಪಿ, ಹನಗವಾಡಿ ಮಂಜು, ತೌಸಿಫ್, ಜಿಗಳಿ ಪರಮೇಶ್ವರ್, ಜಿಗಳಿ ಬಿದರಿ, ವೀರೇಶ್, ಸುನೀಲ್ ಕುಮಾರ್ ಇದ್ದರು.