ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಮಣಿಸಿ ಭಾರತವು ದಿಗ್ವಿಜಯ ಸಾಧಿಸಿದ ದಿನ. ಈ ದಿನದಂದು ದೇಶವೇ ಹಬ್ಬದ ದಿನದಂತೆ ಆಚರಿಸುತ್ತದೆ. ಯುದ್ಧದಲ್ಲಿ ಗೆಲ್ಲಲು ಯೋಧರ ತ್ಯಾಗ, ಬಲಿದಾನ ಇದೆ. ಅವರೆಲ್ಲರನ್ನೂ ಸ್ಮರಿಸಿಕೊಳ್ಳುವ ದಿನ. ಪ್ರತಿಯೊಬ್ಬರೂ ಹುತಾತ್ಮರಾದವರಿಗೆ ಗೌರವಪೂರ್ಣ ನಮನ ಸಲ್ಲಿಸೋಣ ಎಂದು ಹೇಳಿದರು.
ಭಾರತದ ವಿರುದ್ಧ ಯುದ್ಧ ಸಾರಿದ ಪಾಕ್ ಗೆ ತಕ್ಕ ಪಾಠ ಕಲಿಸಿದ ದಿನ. 1999ರಲ್ಲಿ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನೆಯ ಸ್ವಾಭಿಮಾನ ಪ್ರಶ್ನಿಸುವ ವಿಷಯವಾಗಿತ್ತು. ನೂರಾರು ಸೈನಿಕರು ಹುತಾತ್ಮರಾದರೂ ಅಳುಕದೇ ಮುನ್ನುಗ್ಗಿ ಯೋಧರು ದೇಶದ ಗಡಿ ಸಂರಕ್ಷಿಸುವ ಮೂಲಕ ರಾಷ್ಟ್ರದ ಸೇನೆಯ ಶಕ್ತಿ ವಿಶ್ವಕ್ಕೆ ಗೊತ್ತಾಗುವಂತಾಯಿತು ಎಂದು ತಿಳಿಸಿದರು.
ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಗಾಬೇಕು. ದೇಶದ ಪ್ರತಿಷ್ಠೆ, ಆಂತರಿಕ ವಿಚಾರ, ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಆಗುವುದು ಬೇಡ. ವೀರಯೋಧರ ಧೈರ್ಯ, ಸಾಹಸ, ತ್ಯಾಗ, ಹೋರಾಟ ಬಲಿದಾನದಿಂದಾಗಿ ಯುದ್ಧದಲ್ಲಿ ಜಯಶಾಲಿ ಆಗಿದ್ದ ದೇಶದ ಶಕ್ತಿಯು ಏನೆಂಬುದು ಸಾಬೀತಾಗಿತ್ತು ಎಂದು ಸ್ಮರಿಸಿದರು.
ಕಾರ್ಗಿಲ್ ವಿಜಯೋತ್ಸವದಂದು ಎಲ್ಲೆಡೆ ಸಂಭ್ರಮ ಕಂಡುಬರುತ್ತಿದೆ. ಇಂಥ ವೇಳೆಯಲ್ಲಿ ಹುತಾತ್ಮ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹುತಾತ್ಮ ಯೋಧರ ಕುಟುಂಬದವರ ತ್ಯಾಗಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸೋಣ ಎಂದು ತಿಳಿಸಿದರು.
ಈ ವೇಳೆ ವಾರ್ಡ್ ನ ಪ್ರಮುಖರು, ಹಿರಿಯರು, ಮುಖಂಡರು ಹಾಜರಿದ್ದರು.