ದಾವಣಗೆರೆ (Davanagere): ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಅಪರಿಚಿತರ ಮಾತನ್ನು ನಂಬಬಾರದು ಎಂದು ಯುಬಿಡಿಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಮಹಮ್ಮದ್ ರಫಿ ಸಲಹೆ ನೀಡಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ ಅವಶ್ಯಕತೆ ಅನಿವಾರ್ಯವಾಗಿರುವ ಕಾರಣ ಶಿಕ್ಷಣ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆನ್ ಲೈನ್ ಮುಖಾಂತರ ವ್ಯವಹಾರ, ಸಂವಹನ ಬಳಕೆಯಾಗುತ್ತಿದೆ. ವಾಟ್ಸಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮುಖೇನವೇ ವಂಚನೆಗಳು ಹೆಚ್ಚಾಗಿವೆ. ಸುಳಿವು ಸಿಗದಂತೆ ವಂಚಿಸಲು ಇದೊಂದೇ ಸುಲಭ ದಾರಿಯಂತಾಗಿದೆ. ಹಾಗಾಗಿ, ಸೈಬರ್ ವಂಚನೆಗಳು ಸಾಕಷ್ಟು ನಡೆಯುತ್ತಿವೆ. ವಂಚಕರ ಜಾಲಕ್ಕೆ ಸಿಲುಕಿಕೊಳ್ಳದೇ ವಂಚನೆಗೆ ಒಳಗಾಗದಿರಲು ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.
ಆರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ಉತ್ತಮ ಕಾರ್ಯಕ್ರಮವಾಗಿದ್ದು, ಜ್ಞಾನ ಧಾರೆ ಎರೆಯುವ, ಬದುಕಿನ ದಾರಿಗೆ ಮಾರ್ಗದರ್ಶನ ನೀಡುವ ಅಧ್ಯಾಪಕ ವೃಂದಕ್ಕೆ ಇಂತಹ ವಿಷಯಗಳ ಬಗ್ಗೆ ಅರಿವು ಅತ್ಯಗತ್ಯ. ತಾವು ಮೊದಲು ವಂಚನೆಗಳು ಹೇಗೆ ನಡೆಯುತ್ತವೆ, ಅವುಗಳಿಂದ ಹೇಗೆ ಪಾರಾಗುವುದು, ಜಾಗ್ರತೆ ವಹಿಸುವುದು ಹೇಗೆ ಎಂಬ ಬಗ್ಗೆ ಅರಿತು ಇಂದಿನ ಯುವ ಸಮುದಾಯಕ್ಕೆ ಅದನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಪ್ರಸ್ತುತ ಯುವ ಪೀಳಿಗೆ ಮೊಬೈಲ್, ಸಾಮಾಜಿಕ ಜಾಲ ತಾಣಗಳ ಅತಿ ಹೆಚ್ಚು ವ್ಯಾಮೋಹವಿದ್ದು, ಬಳಕೆಯನ್ನು ಮಿತಿ ಮೀರಿ ಮಾಡುತ್ತಿದ್ದಾರೆ. ಇದು ಭವಿಷ್ಯ ಬದುಕಿಗೆ ಒಳಿತಲ್ಲ. ಯಾವುದೂ ಸಹ ಮಿತಿ ಮೀರಬಾರದು. ಅದು ಅಪಾಯಕ್ಕೆ ದಾರಿ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ಓದುವ ಸಮಯದಲ್ಲಿ, ಭವಿಷ್ಯ ರೂಪಿಸಿಕೊಳ್ಳುವ ಈ ಸಮಯವನ್ನು ವ್ಯರ್ಥ ಮಾಡಿಕೊಂಡರೆ ಮರಳಿ ಬಾರದು. ಇದನ್ನು ಮನಗಾಣಬೇಕು ಎಂದರು.
ಜಿಎಂಐಟಿ ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ, ಮಾನವ ಸಂಪನ್ಮೂಲ ವಿಭಾಗ ನಿರ್ದೇಶಕರು, ಜಿಎಂ ಯೂನಿವರ್ಸಿಟಿ ಮತ್ತು ಎಫ್ ಡಿ ಪಿ ಸಂಚಾಲಕ ಡಾ ವೀರಗಂಗಾಧರ ಸ್ವಾಮಿ ಟಿ.ಎಂ. ಸೇರಿದಂತೆ ಇತರರು ಇದ್ದರು.
Read also : ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಯುವ ರೈತನ ಕುಟುಂಬಕ್ಕೆ ಪರಿಹಾರ ವಿತರಣೆ