ಹರಿಹರ (davanagere) : ಶುಭೋದಯ ಜನಕಲ್ಯಾಣ ಟ್ರಸ್ಟ್ನಿಂದ ಬಡ ರೋಗಿಗಳ ಅನುಕೂಲಕ್ಕಾಗಿ ಆರೋಗ್ಯ ದತ್ತು ಹಾಗೂ ಮಾತೃ ರಕ್ಷಾ ಯೋಜನೆ ಆರಂಭಿಸಲಾಗಿದೆ ಎಂದು ಇಲ್ಲಿನ ಶುಭೋದಯ ನರ್ಸಿಂಗ್ ಹೋಂ ಮುಖ್ಯಸ್ಥ ಹಾಗೂ ಜೀರ್ಣಾಂಗ ವ್ಯೂಹ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಬಸರಕೋಡ ಹೇಳಿದರು.
ನಗರದ ಶುಭೋದಯ ನರ್ಸಿಂಗ್ ಹೋಂನಲ್ಲಿ ಗುರುವಾರದಂದು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿತೈಷಿ, ಸ್ನೇಹಿತರು ಹಾಗೂ ಬಂಧುಗಳ ಸಹಕಾರದಿಂದ ಈ ಯೋಜನೆ ಆರಂಭಿಸಿದ್ದು, ಸರ್ಕಾರದ ವಿವಿಧ ಆರೋಗ್ಯ ವಿಮಾ ಯೋಜನೆಗಳ ಪಟ್ಟಿಯಲ್ಲಿರದ ಚಿಕಿತ್ಸೆಗಳಿಗೆ ಈ ಯೋಜನೆಗಳಲ್ಲಿ ಸ್ಥಾನ ಕಲ್ಪಿಸಲಾಗಿದೆ ಎಂದರು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಈ ನರ್ಸಿಂಗ್ ಹೋಂನ ಲಾಭಾಂಶ ಹಾಗೂ ಹಿತೈಷಿಗಳ ಸಹಕಾರದಲ್ಲಿ ಬಡ ಒಳ ರೋಗಿಗಳಿಗೆ ರೂ. ೧೦ ಸಾವಿರ ವರೆಗಿನ ರಿಯಾಯಿತಿಗಳನ್ನು ನೀಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಇನಾಯತ್ ಉಲ್ಲಾ ಮಾತನಾಡಿ, ಜನರ ಮನಸ್ಸನ್ನು ಗೆದ್ದ ವೈದ್ಯ, ಆಸ್ಪತ್ರೆಗಳು ಅಭಿವೃದ್ಧಿ ಸಾಧಿಸುತ್ತವೆ, ಅಂತಹ ಆಸ್ಪತ್ರೆಗಳ ಪೈಕಿ ಶುಭೋದಯ ನರ್ಸಿಂಗ್ ಹೋಂ ಒಂದಾಗಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ನರ್ಸಿಂಗ್ ಹೋಂನ ಪಾಲುದಾರೆ ಹಾಗೂ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ಸವಿತಾ ಜೆ. ಮಾತನಾಡಿ, ಮಾತೃ ರಕ್ಷಾ ಯೋಜನೆಯಡಿ ನೊಂದಾಯಿತರಿಗೆ ವೈದ್ಯರ ಸಲಹೆ, ಲ್ಯಾಬ್ ಪರೀಕ್ಷೆಗಳಲ್ಲಿ ರಿಯಾಯಿತಿ, ಹೆರಿಗೆಯಲ್ಲಿ ಸಹಾಯಧನ, ಆಸ್ಪತ್ರೆಯಲ್ಲಿ ಜನಿಸಿದ ಐದು ಮಕ್ಕಳಿಗೆ ರೂ.೧೦ ಸಾವಿರ ಮೌಲ್ಯದ ಸ್ಥಿರ ಠೇವಣಿ ಪತ್ರ, ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಗೆ ಪ್ರೋತ್ಸಾಹ ಧನ ನೀಡಲಾಗುವುದೆಂದರು.
Read also : Davanagere : ಸ್ವಾತಂತ್ರ‍್ಯ ದಿನಾಚರಣೆ : ವಿದ್ಯಾರ್ಥಿವೇತನ ವಿತರಣೆ
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಆರೋಗ್ಯ ದತ್ತು ಹಾಗೂ ಮಾತೃ ರಕ್ಷಾ ಯೋಜನೆ ಕಾರ್ಡ್ಗಳನ್ನು ವಿತರಿಸಲಾಯಿತು. ಔಷಧಾಲಯದ ಹರೀಶ್ ಪಿಸೆ ಹಾಗೂ ಸಿಬ್ಬಂದಿ ಇದ್ದರು.