ದಾವಣಗೆರೆ,ಅ. 29 (Davanagere): ಆಯುರ್ವೇದ ಚಿಕಿತ್ಸಾ ಪದ್ಧತಿ ಅಳವಡಿಕೆಯಿಂದ ದೀರ್ಘಾಯುಷ್ಯ ಸಾಧ್ಯ ಎಂದು ವಿರಕ್ತಮಠದ ಡಾ; ಬಸವಪ್ರಭು ಸ್ವಾಮೀಜಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷಾ ಇಲಾಖೆ, ಸರ್ಕಾರಿ ಆಯುಷಾ ವೈದ್ಯಾಧಿಕಾರಿಗಳ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಸದ್ಯೋಜಾತ ಹಿರೇಮಠದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ 9 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಆಯುರ್ವೇದ ಎಂದರೆ ಅಯುಷ್ಯದ ಜ್ಞಾನ ಎಂದು ಅರ್ಥ, ಈ ಪದ್ಧತಿ ಅನುಸರಿಸುವವರು ದೀರ್ಘಾಯುಷ್ಯಿಗಳಾಗುತ್ತಾರೆ. ನಮ್ಮ ಪೂರ್ವಜರು ಆಯುರ್ವೇದ ಪದ್ಧತಿ ಅನುಸರಿದ ಹಿನ್ನೆಲೆಯಲ್ಲಿ ಶತಾಯುಷಿಗಳಾಗಿ ಬುದಕಿದ್ದರು. ಇಂದಿನ ಪೀಳಿಗೆ ಕೂಡ ನೂರು ವರ್ಷ ಬದುಕಬೇಕಾದರೆ, ಆಯುರ್ವೇದ ಪದ್ಧತಿಗೆ ಒಳಗಾಗಬೇಕು ಎಂದು ಕರೆ ನೀಡಿದರು.
ನಾಲ್ಕು ವೇದಗಳ ಜೊತೆಗೆ ಪಂಚಮವೇದವಾಗಿ ಆಯುರ್ವೇದ ಜ್ಞಾನವನ್ನು ಸೇರಿಸಬಹುದಾಗಿದೆ. ಅಂಥಹ ಆರೋಗ್ಯ ಜ್ಞಾನವನ್ನು ಹೊಂದಿರುವ ಈ ಪದ್ಧತಿಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿ ಮನೆ ಮನೆಗೆ ಆಯುರ್ವೇದವನ್ನು ಕೊಂಡೊಯ್ಯುವ ಕೆಲಸವಾಗಬೇಕೆಂದು ತಿಳಿಸಿದರು.
ಜಿಲ್ಲಾ ಆಯುಷಾ ಅಧಿಕಾರಿ ಡಾ.ಯೋಗೇಂದ್ರ ಕುಮಾರ್.ಯು , ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಈ ವರ್ಷದ ಘೋಷ ವಾಕ್ಯವಾಗಿದ್ದು“ ಈ ನಿಟ್ಟಿನಲ್ಲಿ ಅ.21 ರಿಂದ 4 ದಿನಗಳ ಕಾಲ ಜಿಲ್ಲೆಯ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.
ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಗಳಾದ ಡಾ.ಉಜ್ಜಪ್ಪ ಎಸ್.ಮಾಳಾಪುರ, ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಜ್ಞಾನೇಶ್ವರ, ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಶ್ವಿನಿ, ಸುಶೃತ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಕ್ಬರ್ ಖಾನ್, ಪತಂಜಲಿ ಆಯುರ್ವೇದ ಸಮಿತಿ ಮುಖ್ಯಸ್ಥರಾದ ಷಣ್ಮುಖಪ್ಪ ಇತರರು ಉಪಸ್ಥಿತರಿದ್ದರು.