ದಾವಣಗೆರೆ: ಬಡ ರೋಗಿಗಳಿಗೆ 108 ತುರ್ತು ಸೇವೆಯ ಆಂಬ್ಯುಲೆನ್ಸ್ ವಾಹನವು ಅವಶ್ಯಕವಾಗಿದ್ದು, ಈ ಭಾಗದ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ಸಾರ್ವಜನಿಕರಿಗೆ ಉತ್ತಮವಾಗಿ ಸದಸ್ಬಳಕೆಯಾಗಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಹೊಸ 108 ಸೇವೆಯ ಆಂಬ್ಯುಲೆನ್ಸ್ ವಾಹನಕ್ಕೆ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯಕೀಯ ಸೇವೆಗಳ ತುರ್ತು ಅಗತ್ಯ ಚಿಕಿತ್ಸೆಯ ತೊಡಕುಗಳನ್ನು ಕಡಿಮೆ ಮಾಡಲು ಮತ್ತು ರೋಗಿಯ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸಲು ಆಮ್ಲಜನಕ ಚಿಕಿತ್ಸೆ, ಸುಧಾರಿತ ಔಷಧ ಮತ್ತು ಗರಿಷ್ಠ ಸಮಯದ ಬಳಕೆಗಾಗಿ ಸಾರಿಗೆಗಾಗಿ ತುರ್ತು ವಾಹನ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ತುರ್ತು ಸಂದರ್ಭಗಳಲ್ಲಿ 108 ವಾಹನ ಬಳಸಿ ಸೌಲಭ್ಯ ಕಲ್ಪಿಸುವತ್ತ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಗಮನ ಹರಿಸಬೇಕೆಂದರು.
ತಹಸೀಲ್ದಾರ್ ಪಿ.ಎಸ್.ರ್ರಿಸ್ವಾಮಿ ಮಾತನಾಡಿ, 108 ತುರ್ತು ಆಂಬ್ಯುಲೆನ್ಸ್ ಸೇವೆಯು 24*7 ನಿರಂತರ ಉಚಿತ ಸೇವೆಯಾಗಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ 108 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಿ.ಜಿ.ಸಚಿನ್, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಗ್ರಾಪಂ ಸದಸ್ಯರಾದ ಸೈಯದ್ ಹಿದಾಯಿತ್, ಹರೋಸಾಗರ ಎ.ಕೆ.ಗಿರೀಶ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಇ.ಸತ್ಯ ಸುಂದರ, ಮುಖಂಡರಾದ ಜಿ.ಪ್ರಕಾಶ್, ಬಿ.ಮಾರುತಿ, ಆಂಬ್ಯುಲೆನ್ಸ್ ಸ್ಟಾಫ್ ನರ್ಸ್ ವಿ.ರಾಮಕೃಷ್ಣ, ಚಾಲಕರಾದ ಎಂ.ಹಾಲೇಶ್, ಆರ್.ದುರ್ಗೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.