ದಾವಣಗೆರೆ ಸೆ.17 (Davanagere): ನಮ್ಮ ದೇಹವನ್ನು ಹೇಗೆ ಶುದ್ಧೀಕರಣ ಮಾಡಿಕೊಳ್ಳುತ್ತೀವೋ ಹಾಗೆ ನಮ್ಮ ಸುತ್ತಮುತ್ತಲಿನ ಪರಿಸರ,ಮನೆ ಹಾಗೂ ನಮ್ಮೂರ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಹಳೆಬಾತಿ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಳೆಬಾತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ಹಿ ಆಂದೋಲನ (ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಆಶಯದಂತೆ ಗ್ರಾಮಗಳ ಸ್ವಚ್ಚತೆ, ಗ್ರಾಮಗಳ ಅಭಿವೃದ್ಧಿ ಇದರ ಮುಖ್ಯ ಉದ್ದೇಶವಾಗಿದೆ. ಇದು ಕೇವಲ ಅಭಿಯಾನಕ್ಕೆ ಸೀಮಿತವಾಗಿರದೆ ಪ್ರತಿ ದಿನ ಸ್ವಚ್ಚತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
Read also : Harihara Electrical variation | ಹರಿಹರದಲ್ಲಿ ಸೆ. 19 ರಂದು ವಿದ್ಯುತ್ ವ್ಯತ್ಯಯ
ಈ 15 ದಿನಗಳ ಅಭಿಯಾನವನ್ನು ನಮ್ಮ ಜಿಲ್ಲೆಯ ಪ್ರತಿ ಮನೆ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಯಶಸ್ವಿಗೊಳಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವುದರ ಮೂಲಕ ಜಿಲ್ಲೆಯಲ್ಲಿ 20,000 ಗಿಡಗಳನ್ನು ನೆಡುವ ಗುರಿಗೆ ಚಾಲನೆ ನೀಡಿದರು. ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕರಕಗಳನ್ನು ವಿತರಿಸಲಾಯಿತು, ಪಿಎಂಎವೈ ವಸತಿ ಪಲಾನುಭಾವಿಗಳಿಗೆ ಕಾರ್ಯದೇಶ ವಿತರಿಸಲಾಯಿತು. ಅಂಗನವಾಡಿ, ಶಾಲೆ, ಸ್ವಚ್ಚ ಸಂಕೀರ್ಣ ಘಟಕ, ದ್ರವ ತ್ಯಾಜ್ಯ ಘಟಕಗಳ ಸ್ಥಳ ಪರಿವೀಕ್ಷಣೆ ಮಾಡಿ ಸರಿಯಾದ ನಿರ್ವಹಣೆ ಜವಾಬ್ದಾರಿಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯಕ್ ,ತಾಲೂಕು ಪಂಚಾಯತ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿ ಗಳು, ಹಾಗೂ ಇನ್ನಿತರರು ಭಾಗವಹಿಸಿದ್ದರು.