Kannada News | Dinamaana.com | 23-05-2024
ಹರಿಹರ : ಪ್ರಸ್ತುತ ದಿನಗಳಲ್ಲಿ ಯುವಜನಾಂಗಕ್ಕೆ ಸಾಂಸ್ಕೃತಿಕ ಉತ್ಸವಗಳು ಅಗತ್ಯವಾಗಿ ಬೇಕಾಗಿವೆ ಎಂದು ಹೂವಿನಹಡಗಲಿಯ ಡಾ.ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜಿನ ಪ್ರಾಚಾರ್ಯ ಡಾ.ಕರಿಶೆಟ್ಟಿ ರುದ್ರಪ್ಪ ಅಭಿಪ್ರಾಯ ಪಟ್ಟರು.
ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವೈವಿಧ್ಯ ಮಯ ಸಾಂಸ್ಕೃತಿಕ ಉತ್ಸವ (ಯಥನಿಕ್ ಡೇ)ದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪ್ರತಿಯೊಂದು ಹಬ್ಬ-ಉತ್ಸವಗಳಿಗೆ ತನ್ನದೇ ಆದ ತಾತ್ವಿಕ ಹಿನ್ನೆಲೆ ಇರುತ್ತದೆ.ಜನಾಂಗೀಯ ದಿನದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಆಯೋಜಿಸಿದ್ದ ವೈವಿಧ್ಯ ಮಯ ಸಾಂಸ್ಕೃತಿಕ ಆಚರಣೆ, ಸಂಪ್ರದಾಯಗಳು ಅದ್ಭುತವಾಗಿವೆ ಎಂದು ಪ್ರಶಂಸಿಸಿದರು.
ಇಂದು ಪ್ರದರ್ಶಿಸಿದ ಮದುವೆ ಸಂಪ್ರದಾಯ, ಹೋಳಿ ಆಚರಣೆ, ಗ್ರಾಮದೇವತೆ ಜಾತ್ರೋತ್ಸವ, ರಾಷ್ಟ್ರೀಯ ಗಣೇಶೋತ್ಸವ, ಹಳ್ಳಿಯ ಸೊಗದಿನ ಜೀವನ ಕ್ರಮ ಹಾಗೂ ಕೊಡಗಿನ ಹುತ್ತರಿ ಆಚರಣೆ ಎಲ್ಲರ ಮನಸೆಳೆದವು.ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆ ಯಲ್ಲಿದೆ ಎಂದರು. ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗದಂತೆ ಬಾಳಬೇಕಾಗಿದೆ ಎಂದು ಹೇಳಿದರು.
ಪೌರಸೇವಾ ಸಮಿತಿ ಅಧ್ಯಕ್ಷ ಜಿ.ಎಂ.ತಿಪ್ಪೇಸ್ವಾಮಿ, ಪೌರಸೇವಾ ಸಮಿತಿ ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್, ಪಟೇದಾರ್ ಸಾಮಿಲ್ ಮಾಲೀಕರಾದ ಆರ್.ವಿ.ಪಟೇಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಬಿ.ಗಂಗಾಧರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಯೋಜಕ ರಾದ ಪ್ರೊ.ರೋಹಿಣಿ ಎಂ.ಶಿರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರದಲ್ಲಿ ತೀರ್ಪುಗಾರರು ನೀಡಿದ ಫಲಿತಾಂಶವನ್ನು ಘೋಷಿಸಿದರು. ಪ್ರಥಮ ಬಹುಮಾನ ಮದುವೆ ಸಂಪ್ರದಾಯ, ದ್ವಿತೀಯ ಬಹುಮಾನ ಹಳ್ಳಿಯ ಸೊಗಡಿನ ಜೀವನ ಕ್ರಮ, ತೃತೀಯ ಬಹುಮಾನ ಗ್ರಾಮದೇವತೆ ಜಾತ್ರೋತ್ಸವ ಪಡೆದರು. ಹೋಳಿ ಆಚರಣೆ, ರಾಷ್ಟ್ರೀಯ ಗಣೇಶೋತ್ಸವ, ಕೊಡಗಿನ ಹುತ್ತರಿ ಆಚರಣೆಗಳು ಸಮಾಧಾನಕರ ಬಹುಮಾನ ನೀಡಲಾಯಿತು.
ಆರಂಭದಲ್ಲಿ ಪ್ರಥಮ ಬಿ.ಎ.ವಿದ್ಯಾರ್ಥಿನಿ ಭೂಮಿಕಾ ಸಿ.ಕೆ. ಪ್ರಾರ್ಥಿಸಿದರು,ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅನುಷಾ ಸಿ.ಆರ್. ಸ್ವಾಗತಿಸಿದರು,ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವ ರಾಜಯ್ಯ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.ತೃತೀಯ ಬಿ.ಕಾಂ.ವಿದ್ಯಾರ್ಥಿನಿ ಸೌಜನ್ಯ ಎಂ. ಕಾರ್ಯಕ್ರಮ ನಿರ್ವಹಿಸಿದರು. ಪ್ರಥಮ ಬಿ.ಕಾಂ.ವಿದ್ಯಾರ್ಥಿನಿ ದಿವ್ಯಾ ಎಸ್.ಆರ್. ವಂದಿಸಿದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ನೃತ್ಯಗಳು ಜರುಗಿದವು.