ಹರಿಹರ (Harihara): ಜಿಲ್ಲಾಧಿಕಾರಿಯವರೂ ಸೇರಿದಂತೆ ಸಂಬಂಧಿತ ಇಲಾಖಾಧಿಕಾರಿಗಳಿಗೆ ದೂರು ಅರ್ಜಿಗಳನ್ನು ನೀಡಿದ ಹೊರತಾಗಿಯೂ ಹರಿಹರ ತಾಲ್ಲೂಕಿನ ಹಲವು ಗ್ರಾಮಗಳ ಪಟ್ಟಾ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.
ಅಕ್ರಮ ಮಣ್ಣುಗಣಿಗಾರಿಕೆ ತಡೆಯಲು ಹರಿರಹ ತಹಶೀಲ್ದಾರರಿಗೆ ಡಿ. 4ರಂದು, ಜಿಲ್ಲಾಧಿಕಾರಿಯವರಿಗೆ ಡಿ.16ರಂದು ಎಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿಯೊಂದಿಗೆ ದೂರು ಅರ್ಜಿ ನೀಡಲಾಗಿತ್ತು. ಇದರ ಹೊರತಾಗಿಯೂ ತಾಲ್ಲೂಕಿನ ಗುತ್ತೂರು, ಸಾರಥಿ, ಪಾಮೇನಹಳ್ಳಿ, ಭೈರನಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಬೃಹತ್ ಗಾತ್ರದ ಜೆಸಿಬಿಗಳಿಂದ ಎಗ್ಗಿಲ್ಲದೆ ಮಣ್ಣನ್ನು ಅಗೆದು ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಗುತ್ತೂರಿನಲ್ಲಿ ಹೊಸದಾಗಿ ಮಣ್ಣು ಗಣಿಗಾರಿಕೆಯನ್ನು ಬುಧವಾರ ರಾತ್ರಿ ಕೈಗೊಂಡಿರುವುದರಿಂದ ಸಿದ್ದಪ್ಪಜ್ಜರ ಮಠ ಹಾಗೂ ಮುಸ್ಲಿಂ ಖಬರಸ್ತಾನ್ ಹಾಗೂ ನದಿಗೆ ತೆರಳುವ ರಸ್ತೆ ಅಸ್ತಿತ್ವಕ್ಕೆ ಧಕ್ಕೆ ಒದಗಿಸಲಿದೆ ಎಂದು ಅವರು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷಿ ಮಾಡುವ ಜಮೀನಿನ ಒಂದು ಪುಟ್ಟಿ ಮಣ್ಣನ್ನು ಇತರೆಡೆಗೆ ಸಾಗಿಸಲು ಭೂ ಕಂದಾಯ ಕಾಯ್ದೆಯಲ್ಲಿ ಅವಕಾಶ ಇರದಿದ್ದರೂ ರಾಜಾರೋಷವಾಗಿ ಎಕರೆಗಟ್ಟಲೆ ಜಮೀನುಗಳಲ್ಲಿನ ಮಣ್ಣನ್ನು ಸಾಗಿಸುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖವಾಗಿ ತಾಲ್ಲೂಕಿನಾದ್ಯಂತ ಮಣ್ಣು ಗಣಿಗಾರಿಕೆಯನ್ನು ನಿಲ್ಲಿಸಬೇಕು, ಕೃಷಿ ಜಮೀನುಗಳನ್ನು, ಪರಿಸರವನ್ನು ಸಂರಕ್ಷಿಸಬೇಕಾಗಿ ಅವರು ಆಗ್ರಹಿಸಿದ್ದಾರೆ.
Read also : New serial | ಡಿ. 23 ರಿಂದ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ‘ನೂರು ಜನ್ಮಕೂ’ಆರಂಭ