ಹರಿಹರ: ಪ್ರತಿ ಮಳೆಗಾಲದಲ್ಲಿ ಹಿನ್ನೀರು ನುಗ್ಗಿ ಮನೆಗಳು ಜಲಾವೃತವಾಗುವ ಇಲ್ಲಿನ ಗಂಗಾನಗರದ ವಾಸಿಗಳಿಗೆ ವ್ಯವಸ್ಥಿತ ವಸತಿ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ (Jaya Karnataka Organization) ಕಾರ್ಯಕರ್ತರು ನಗರಸಭೆ ಎದುರು ಧರಣಿ ನಡೆಸಿದರು.
ನಂತರ ಜಯ ಕರ್ನಾಟಕ ಸಂಘಟನೆ ಹರಿಹರ ತಾಲ್ಲೂಕು ಘಟಕ ಅಧ್ಯಕ್ಷ ಎಸ್.ಗೋವಿಂದ ಮಾತನಾಡಿ, ಎಪಿಎಂಸಿ ಹಿಂಭಾಗದ ರಸ್ತೆ ಬದಿಯಲ್ಲಿ ಕಳೆದ 30 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕಡುಬಡವರು ಸಣ್ಣ, ಪುಟ್ಟ ಗುಡಿಸಲುಗಳಲ್ಲಿ ಅಮಾನೀಯ ಬದುಕು ನಡೆಸುತ್ತಿದ್ದಾರೆ. ಒಂದು ದಶಕದಿಂದ ಇಲ್ಲಿನ ನಿವಾಸಿಗಳು ಶಾಸಕರು, ಸಚಿವರು, ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದಾರೆ ಎಂದರು.
ಹಲವು ರ‍್ಷಗಳಿಂದ ಸ್ಥಳಕ್ಕೆ ಶಾಸಕರು, ಉಸ್ತುವಾರಿ ಜಿಲ್ಲಾ ಕರ‍್ಯರ‍್ಶಿ, ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ, ನೀಡಿದ್ದ ಭರವಸೆಗಳು ಸುಳ್ಳಾಗಿವೆ. ಕಬ್ಬು ಕಡಿಯುವ, ಹಾಸಿಗೆ ದುರಸ್ತಿಯಂತಹ ಕೂಲಿ, ನಾಲಿ ಮಾಡಿ ಬದುಕುವ ಈ ಬಡವರ ಕಷ್ಟ ಕೇಳುವವರಿಲ್ಲದಂತಾಗಿದೆ. 150 ಕ್ಕೂ ಹೆಚ್ಚು ಕುಟುಂಬಗಳಿರುವ ಈ ಭಾಗದ ನಿವಾಸಿಗಳು ಪ್ರತಿ ಮಳೆಗಾಲದಲ್ಲಿ ಒಂದೆರಡು ತಿಂಗಳು ಎಪಿಎಂಸಿ ಆವರಣದ ಕಾಳಜಿ ಕೇಂದ್ರದ ಪಾಲಾಗುವುದು ತಪ್ಪಿಲ್ಲ. ಬಯಲು ಪ್ರದೇಶವಾಗಿರುವುದರಿಂದ ವಿಷ ಜಂತುಗಳ ಕಾಟವೂ ಅಧಿಕವಾಗಿದೆ.
ಜನಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಇವರನ್ನು ಮತ ಹಾಕಲು ಮಾತ್ರ ಬಳಸಿಕೊಳ್ಳುತ್ತಾರೆ, ಉಳಿದಂತೆ ಇವರ ಕನಸಿನ ಮನೆಗಳನ್ನು ದೊರಕಿಸುವ ಕೆಲಸ ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಇವರೂ ಕೂಡ ಮನುಷ್ಯರೆಂಬ ಭಾವನೆ ಯಾರಿಗೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ ಮಾತನಾಡಿ, ಈಗಾಗಲೆ ಸ್ಥಳೀಯ ಶಾಸಕರು ಈಚೆಗೆ ವಿಧಾನಸಭೆಯಲ್ಲಿ ವಸತಿ ಯೋಜನೆಗೆ ಜಮೀನು ಖರೀದಿಸಲು ಅನುದಾನಕ್ಕಾಗಿ ಮಾತನಾಡಿದ್ದಾರೆ. ಅನುದಾನ ದೊರಕಿದಲ್ಲಿ ಗಂಗಾನಗರದ ನಿವಾಸಿಗಳಿಗೂ ಆಧ್ಯತೆ ನೀಡಲಾಗುವುದೆಂದು ಹೇಳಿದರು.
Read also : ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮ : ಜನರಿಂದ ಉತ್ತಮ ಸ್ಪಂದನೆ
ಅನುದಾನ ಬರುವವರೆಗೆ ತಾತ್ಕಾಲಿಕವಾಗಿ ನಿವಾಸಿಗಳಿಗೆ ನಗರಸಭೆಯ ಬೇರೆ ಜಾಗದಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕು, ತಪ್ಪಿದಲ್ಲಿ ಸಂಘಟನೆಯಿಂದಲೆ ಇವರನ್ನು ನಗರಸಭೆ ಜಾಗಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗುವುದೆಂದು ಎಸ್.ಗೋವಿಂದ ಹೇಳಿದರು.
ಸಂಘಟನೆಯ ಪದಾಧಿಕಾರಿಗಳಾದ ಆನಂದ ಕುಮಾರ್, ಸುನೀಲ್ ಕುಮಾರ್ ಸಿ.ಎಚ್., ಶ್ರೀನಿವಾಸ್, ಶಬರೀಶ್, ರಾಜು ಗಾಂಧಿನಗರ, ಭರತ್ ಭಾನುವಳ್ಳಿ, ಗಂಗಾನಗರದ ನಿವಾಸಿಗಳಾದ ಸೈಯದ್ ಅಶ್ರಫ್ ಅಲಿ, ಹುಸೇನಿ, ದಾದಾಪೀರ್, ಸದ್ದಾಂ, ಪೀರ್ ಸಾಬ್, ರಮೀಜಾ, ರ‍್ವಿನ್, ಫಾತಿಮಾ, ಮುಮ್ತಾಜ್ ಹಾಗೂ ಇತರರಿದ್ದರು.