ಹರಿಹರ (Davangere District) : ಹರಿಹರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಆಗ್ರಹಿಸಿ ನಗರಸಭೆ ಸದಸ್ಯರೆ ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು.
ನಗರಸಭಾ ಸದಸ್ಯ ದಾದಾ ಖಲಾಂದರ್, ಆರ್.ಸಿ.ಜಾವಿದ್, ಎಂ.ಆರ್.ಮುಜಮ್ಮಿಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಸದಸ್ಯ ದಾದಾ ಖಲಂದರ್ ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸಲು ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವುದೆ ಪ್ರಯೋಜನವಾಗದ ಕಾರಣ ಇಂದು ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದೇವೆ ಎಂದರು.
ನಗರದ ಬಹುತೇಕ ವಾರ್ಡುಗಳಲ್ಲಿ ನಾಯಿಗಳ ಸಂಖ್ಯೆ ಅಧಿಕವಾಗಿದೆ. ಹಂದಿಗಳನ್ನು ಹಿಡಿದು ಬೇಟೆಯಾಡುತ್ತಿವೆ, ಅವುಗಳಿಗೆ ಆಹಾರ ಸಿಗದಿದ್ದರೆ ಮಕ್ಕಳು, ಹಿರಿಯ ನಾಗರೀಕರ ಮೇಲೆ ದಾಳಿ ಮಾಡುವ ಅಪಾಯವಿದೆ. ಈಚೆಗೆ ಬೆಂಗಳೂರಿನಲ್ಲಿ ನಾಯಿಗಳ ಹಿಂಡು ದಾಳಿ ಮಾಡಿದ ಪರಿಣಾಮ ವೃದ್ಧಿಯೊಬ್ಬರು ಸಾವನ್ನಪ್ಪಿರುವ ಉದಾಹರಣೆ ಇದೆ.
Read also : Davanagere | ವಿಕಲಚೇತನರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ ಮಾತನಾಡಿ, ನಾನು ಈಗಾಗಲೆ ನಾಯಿ ಹಿಡಿಯುವವರ ಜೊತೆ ಮಾತನಾಡಿದ್ದೇನೆ, ಕೆಲವು ದಿನಗಳಲ್ಲಿ ಅವರು ಆಗಮಿಸಲಿದ್ದು ನಾಯಿಗಳನ್ನು ಹಿಡಿಸಿ ದೂರದ ಸ್ಥಳಕ್ಕೆ ಬಿಡಲಾಗುವುದೆಂದರು ಭರವಸೆ ನೀಡಿದ ನಂತರ ಕಚೇರಿಯ ಬೀಗ ತೆಗೆಯುವ ಮೂಲಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ದಾದಾಪೀರ್ ಭಾನುವಳ್ಳಿ, ರಹಮತ್ ಉರ್ ರಹಮಾನ್, ಆರೋಗ್ಯ ನೀರಿಕ್ಷಕ ಸಂತೋಷ್ ನಾಯ್ಕ್ ಸೇರಿದಂತೆ ಸಾರ್ವಜನಿಕರಿದ್ದರು.