ಹರಿಹರ (Harihara): ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮತ್ತು ಗ್ರಾವೆಲ್ ಗಣಿಗಾರಿಕೆಯಿಂದಾಗಿ ಹಲವು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಟವರ್ ಗಳ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.
ತಾಲ್ಲೂಕಿನ ನದಿ ದಡ ಹಾಗೂ ವಿವಿಧ ಗ್ರಾಮಗಳಲ್ಲಿನ ಜಮೀನುಗಳಲ್ಲಿನ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹಣದ ಆಸೆಗೆ ವಿದ್ಯುತ್ ಟವರ್ಗಳ ಸುತ್ತಲೂ ಕೆಲವು ಅಡಿಗಳಷ್ಟು ಜಾಗ ಬಿಟ್ಟು ಮಣ್ಣು ಗಣಿಗಾರಿಕೆ ನಡೆಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹರಿಹರ ಸಮೀಪದ ಗುತ್ತೂರಿನ 400 ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ ವಿದ್ಯುತ್ ಬರುವ ಹಾಗೂ ಕೇಂದ್ರದಿಂದ ವಿದ್ಯುತ್ ಹೋಗಲು ಈ ಟವರ್ಗಳೆ ಆಧಾರವಾಗಿವೆ. ಕೈಗಾದ ನ್ಯೂಕ್ಲಿಯರ್ ಹಾಗೂ ಬಳ್ಳಾರಿ ಜಿಂದಾಲ್ನ ಉತ್ಪಾದನಾ ಕೇಂದ್ರಗಳಿಂದ ಇಲ್ಲಿಗೆ ವಿದ್ಯುತ್ ಸರಬರಾಜು ಆಗುತ್ತಿದೆ. ಕ್ರಮೇಣ ಮಣ್ಣು ಶಿಥಿಲಗೊಂಡು ಈ ಟವರ್ಗಳು ನೆಲಕ್ಕೆ ಉರುಳಿದರೆ ಅದರ ಲೈನ್ಗಳಲ್ಲಿ ಹರಿಯುವ 4000 ವೋಲ್ಟ್ ವಿದ್ಯುತ್ ಭೂ ಸ್ಪರ್ಶವಾಗಿ ಅಪಾರ ಪ್ರಾಣ ಹಾನಿಗೆ ಕಾರಣವಾಗಬಹುದು.
ಜೊತೆಗೆ ಮಧ್ಯ ಕರ್ನಾಟಕದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಹಲವು ದಿನಗಳ ಕಾಲ ವ್ಯತ್ಯಯವಾಗುತ್ತದೆ. ಮೂರ್ನಾಲ್ಕು ಜಿಲ್ಲೆಗಳ ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ.
ಹಲವು ಕೋಟಿ ನಷ್ಟ: ಈಚೆಗೆ ಜಿಲ್ಲಾಧಿಕಾರಿಯವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಹರಿಹರದಲ್ಲಿ ಮಣ್ಣು ಗಣಿಗಾರಿಕೆ ಮಾಡುವವರಿಂದ ರೂ.12 ಲಕ್ಷದಷ್ಟು ರಾಜಧನ, ದಂಡ ವಸೂಲಿ ಮಾಡಲಾಗಿದೆ, ಅನುಮತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದಾರೆಂದು ಉತ್ತರಿಸಿದ್ದಾರೆ. ಈ ವಿದ್ಯುತ್ ಟವರ್ಗಳು ನೆಲಕ್ಕುರುಳಿದರೆ ಸರ್ಕಾರದ ಖಜಾನೆಗೆ ರೂ.12 ಕೋಟಿಯಷ್ಟು ವೆಚ್ಚ ತಗುಲುವುದನ್ನು ತಪ್ಪಿಸುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕೆಪಿಟಿಸಿಎಲ್ನ ಟ್ರಾನ್ಸ್ಮಿಷನ್ ಲೈನ್ ಮೆಂಟೆನೆನ್ಸ್ ಶಾಖೆಯ ಅಧಿಕಾರಿಗಳು ಕಚೇರಿಯನ್ನು ಬಿಟ್ಟು ಸಂಚರಿಸಿ ತಾಲ್ಲೂಕಿನ ಟವರ್ಗಳ ಭದ್ರತೆಯನ್ನು ಪರಿಶೀಲಿಸಬೇಕು. ಅನಾಹುತ ಆಗುವ ಮುನ್ನ ಎಚ್ಚರವಹಿಸಬೇಕೆಂದು ಅವರು ತಿಳಿಸಿದ್ದಾರೆ.
Read also : Davanagere | ನಕಲು ಕೀ ಬಳಸಿ ಮನೆ ಕಳ್ಳತನ : ಆರೋಪಿ ಸೆರೆ