ಚನ್ನಗಿರಿ : ಕಳೆದ ಸಾಲಿನ ಆ. 1ರಂದು ಒಳಮೀಸಲಾತಿ ಆಯಾ ರಾಜ್ಯಗಳು ಜಾರಿಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಆದರೆ 1 ವರ್ಷವಾದರೂ ಸರ್ಕಾರ ಜಾರಿಗೊಳಿಸದೇ ಮೀನಮೇಷ ಮಾಡುತ್ತಿದೆ’ ಎಂದು ರಾಜ್ಯ ಮಾದಿಗ ಸಮಾಜದ ಹಿರಿಯ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ತಿಳಿಸಿದರು.
ಪಟ್ಟಣದ ಗಾಂಧಿ ವೃತ್ತದಲ್ಲಿ ಮಂಗಳವಾರ ಒಳಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಮಾದಿಗ ಸಮಾಜ ಒಳಮೀಸಲಾತಿ ವಿಷಯದಲ್ಲಿ ತುಂಬಾ ಅನ್ಯಾಯಕ್ಕೊಳಗಾಗಿದೆ. ನಮ್ಮ ಸಮುದಾಯಕ್ಕೆ ಒಳಮೀಸಲಾತಿ ಸಿಗದಂತೆ ಮಾಡಲು ರಾಜ್ಯ ಸಚಿವ ಸಂಪುಟದಲ್ಲಿರುವ ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ ಖರ್ಗೆ, ಆರ್.ಬಿ. ತಿಮ್ಮಾಪುರ ಹಾಗೂ ಕೆ.ಎಚ್. ಮುನಿಯಪ್ಪ ಅಡ್ಡಗಾಲು ಹಾಕುತ್ತಿದ್ದಾರೆ. ಇದೇ ಏ. 5ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಳಮೀಸಲಾತಿ ನಮ್ಮ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಬದ್ಧವಾಗಿದೆ ಎಂದು ವೇದಿಕೆಯಲ್ಲಿ ತಿಳಿಸಿದ್ದರು. ಆದರೆ ಇದುವರೆಗೂ ಒಳಮೀಸಲಾತಿ ಜಾರಿಗೊಳಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿರುವುದಿಲ್ಲ ಎಂದರು.
Read also : ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ
ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊಣೆಗೇಡಿ ಹಾಗೂ ನಂಬಿಕೆದ್ರೋಹಿ ಮುಖ್ಯಮಂತ್ರಿಯಾಗಿದ್ದಾರೆ. ಕ್ರಾಂತಿಕಾರಿ ರಥಯಾತ್ರೆ ಪ್ರಾರಂಭಿಸಿ ಇಂದಿಗೆ 80 ದಿನಗಳಾಗಿವೆ. ಇಡೀ ರಾಜ್ಯಾದ್ಯಾಂತ ರಥಯಾತ್ರೆ ಪ್ರವಾಸ ಮಾಡುತ್ತಿದೆ. ಒಳಮೀಸಲಾತಿ ಜಾರಿಗೊಳಿಸದೇ ಬಡ್ತಿ ಹಾಗೂ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದ ಸರ್ಕಾರ ಮಾತಿಗೆ ತಪ್ಪಿ ಬಡ್ತಿ ಹಾಗೂ ಒಳಮೀಸಲಾತಿ ಇಲ್ಲದೇ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದೆ. ಒಳಮೀಸಲಾತಿಯನ್ನು ಜಾರಿಗೊಳಿಸದೇ ಹೋದರೇ ಜೂನ್ 9ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಕೂಡಾ ಹಮ್ಮಿಕೊಳ್ಳಲಾಗಿದೆ ಎಂದರು.
ಮಾದಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೋಗಲೂರು ಪ್ರಕಾಶ್, ಗೌರವಾಧ್ಯಕ್ಷ ಬಿ. ಮಂಜುನಾಥ್, ಮುಖಂಡರಾದ ದೀಪಕ್ ಕುಮಾರ್, ಎಚ್.ಎನ್. ಮೂರ್ತಿ, ಎಸ್. ಆನಂದ್, ಪ್ರಭಾಕರ್, ಶಿವಲಿಂಗಪ್ಪ, ಶಿವಣ್ಣ, ರುದ್ರಪ್ಪ, ಕುಬೇಂದ್ರಸ್ವಾಮಿ ಉಪಸ್ಥಿತರಿದ್ದರು.