ಹರಿಹರ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಆರೋಪಿತೆಗೆ ವಿಧಿಸಿದ್ದ 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ.4 ಲಕ್ಷದ 5 ಸಾವಿರ ರೂ. ದಂಡ ಪಾವತಿಸುವ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ವಿವರ: ತಾಲ್ಲೂಕಿನ ಮಲೆಬೆನ್ನೂರು ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕಿ ವನಜಾಕ್ಷಿದೇವಿ ಕೋಂ.ವಸಂತ ಕುಮಾರ್ ಎಂಬುವರು ಭಾನುವಳ್ಳಿ ಗ್ರಾಮದ ಮಲ್ಲಿನಾಥ ಎ.ಎಸ್. ಎಂಬುವರಿಂದ ಪಡೆದಿದ್ದ ಸಾಲ ಮರುಪಾವತಿಗಾಗಿ ನೀಡಿದ್ದ ರೂ.4 ಲಕ್ಷ ಮೊತ್ತದ ಚೆಕ್ ಬೌನ್ಸ್ ಆಗಿತ್ತು, ಈ ಕುರಿತು ಮಲ್ಲಿನಾಥ ನ್ಯಾಯಾಲಯದ ಮೊರೆ ಹೋಗಿದ್ದರು.
ಹರಿಹರದ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರೋಪಿತೆ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ದಾಖಲಿಸಿದ್ದ ಅಪೀಲು ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಲಾಯಿತು. ಅಂತಿಮವಾಗಿ ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ದಂಡದ ಮೊತ್ತ ಪಾವತಿಸದಿದ್ದರೆ 2 ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಲು ಹೈಕೋರ್ಟ್ ಏ.4ರಂದು ನೀಡಿದ ತೀರ್ಪಿನಲ್ಲಿ ಆದೇಶಿಸಿದೆ ಎಂದು ಮಲ್ಲಿನಾಥರ ಪರ ವಕೀಲರಾದ ನಾಗರಾಜ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.