ದಾವಣಗೆರೆ : ಗ್ರಾಮೀಣ ಪ್ರದೇಶಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರು ಎಲ್ಲಾ ವೈದ್ಯರಿಗೆ ಸ್ಪೂರ್ತಿದಾಯಕವಾಗಬೇಕು, ಇಂತಹ ಸಮಾಜಮುಖಿ ವೈದ್ಯರನ್ನು ಕರೆತಂದು ಈ ದಿನ ಸನ್ಮಾನಿಸುತ್ತಿರುವ ಮೆಡಿಕಲ್ ಕಾಲೇಜಿನ ಕಾಳಜಿ ಮೆಚ್ಚುವಂತದ್ದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಡಾ. ಸಂಪನ್ನ ಮುತಾಲಿಕ್ ಹೇಳಿದರು.
ಜೆ ಜೆ ಎಂ ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಬಾಡಿ ಆಯೋಜಿಸಿದ್ದ ವೈದ್ಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತ ಸೌಕರ್ಯಗಳ ಮಧ್ಯದಲ್ಲಿ ಎಷ್ಟು ಜೀವಗಳನ್ನು ಉಳಿಸಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ವೈದ್ಯರಿಗೆ ಧನ್ಯವಾದ ತಿಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಎರಡು ಮೂರು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮೂವರು ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಚಂದ್ರಪ್ಪ ಅವರು ಸನ್ಮಾನವನ್ನು ಸ್ವೀಕರಿಸಿದ ಮಾತನಾಡಿ, ತಮ್ಮ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಏರುಪೇರುಗಳು ಇದ್ದರೂ ವೈದ್ಯನಾಗಬೇಕು ಎಂಬ ಛಲದಿಂದ ಉತ್ತಮ ಅಂಕ ಪಡೆದು ಸಿಇಟಿಯಲ್ಲಿ ಉತ್ತಮ ರಾಂಕ್ ನೊಂದಿಗೆ ಈ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದೆ. ಇಂದು ಅದೇ ಕಾಲೇಜಿನಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದರು.
ಡಾ. ಮಂಜುನಾಥ್ ಕೆ ಎಂ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವೈದ್ಯರಿಗೆ ಸಂವಹನ ಕೌಶಲ್ಯ ಅತಿ ಮುಖ್ಯ ಇದರಿಂದ ರೋಗಿಯ ಮನಸ್ಸನ್ನು ಗೆದ್ದು ಅವರು ಬೇಗ ಗುಣಮುಖರಾಗುವಂತೆ ಮಾಡಬಹುದು, ಔಷಧಿಯ ಜೊತೆಗೆ ನಮ್ಮ ಒಳ್ಳೆಯ ಮಾತುಗಳು ರೋಗಿಯನ್ನು ಬೇಗ ಗುಣಮುಖವಾಗುವಂತೆ ಮಾಡುತ್ತದೆ. ಇದನ್ನು ಪ್ರತಿಯೊಬ್ಬ ವೈದ್ಯರು ಅಳವಡಿಸಿಕೊಳ್ಳಬೇಕು ಎಂದರು.
ಡಾ. ಷಣ್ಮುಖಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೌಕರ್ಯಗಳಿಲ್ಲದಿದ್ದರೂ ಸಮಯ ಪ್ರಜ್ಞೆಯಿಂದ ನಾವು ಸಾಕಷ್ಟು ಜೀವಗಳನ್ನು ಅನುಭವದಿಂದ ಉಳಿಸಬಹುದು, ನಮ್ಮ ಕೈ ಮೀರಿದ ಸಮಸ್ಯೆಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡದೆ ಸೂಕ್ತ ಕ್ರಮಕ್ಕೆ ಅನುವು ಮಾಡಿಕೊಟ್ಟು ಸಾಕಷ್ಟು ರೋಗಿಗಳನ್ನು ನಾವು ಬದುಕಿಸಿದ್ದೇವೆ. ಅಂತಹ ಸಮಯಪ್ರಜ್ಞೆ ವೈದ್ಯರಿಗೆ ಅಗತ್ಯ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಕ್ಲ ಶೆಟ್ಟಿ ಅವರು ಸ್ವಾಗತಿಸಿದರು ಡಾಕ್ಟರ್ ಸಂತೋಷ್ ಅವರು ಎಲ್ಲರನ್ನು ವಂದಿಸಿದರು ವೇದಿಕೆಯ ಮೇಲೆ ಡಾ. ನಾಗಮಣಿ ಅಗರ್ವಾಲ್ ಉಪಸ್ಥಿತರಿದ್ದರು ಡಾಕ್ಟರ್ ಛಾಯಾ ಹಾಗೂ ಡಾ. ನೀತಿ ಕಾರ್ಯಕ್ರಮವನ್ನು ನಿರೂಪಿಸಿದರು